
ಮೈಸೂರು (ನ.01): ಪ್ರಧಾನಿ ನರೇಂದ್ರ ಮೋದಿ ಅವರು ಐಟಿ ದಾಳಿ ಬಗ್ಗೆ ಮಾತನಾಡುತ್ತಿದ್ದಾರೆ. ಅಂದರೆ ಅವರಿಗೆ ರಾಜ್ಯ ಕಾಂಗದ್ರೆಸ್ ಕಂಡರೆ ಭಯವಿದೆ ಅಂತಲೆ ಅರ್ಥ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಟಾಂಗ್ ನೀಡಿದರು.
ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ನಡೆದ ದೊಡ್ಡ ಐಟಿ ದಾಳಿಗಳನ್ನು ಬಿಟ್ಟು, ಕರ್ನಾಟಕದಲ್ಲಿ ಮಾತನಾಡಿದ್ದಾರೆ. ಅಂದರೆ ಅವರಿಗೆ ರಾಜ್ಯದ ಕಾಂಗ್ರೆಸ್ ಕಂಡರೆ ಭಯವಿದೆ ಅಂತಲೆ ಅರ್ಥ. ಐಟಿ ವಿಭಾಗ ಅವರ ಕೈ ಕೆಳಗೇ ಇರುತ್ತೆ. ಅದು ಮಾತ್ರ ಅವರಿಗೆ ಗೊತ್ತಾಗುವುದಿಲ್ಲವಾ? ರಾಜ್ಯದಲ್ಲಿ ಚುನಾವಣಾ ಭಯ ಇರೋದರಿಂದಲೇ ನಮ್ಮ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಸಾಧನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆಗೆ ಹೊರಟಿದ್ದೇವೆ. ಹೀಗಾಗಿ ನಮಗೆ ಸೋಲಿನ ಭಯವಿಲ್ಲ. ಬಿಜೆಪಿಯವರಿಗೆ ಸೋಲಿನ ಭಯ ಎದುರಾಗಿದ್ದು, ತಿರುಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಉಪೇಂದ್ರ ಹೇಳಿಕೆಗೆ ಪ್ರತಿಕ್ರಿಯೆ: ಚುನಾವಣೆ ವೇಳೆ ಹಣ ಕೊಟ್ಟರೆ ತೆಗೆದುಕೊಳ್ಳುವಂತೆ ನಟ ಉಪೇಂದ್ರ ಅವರ ಹೇಳಿಕೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ, ಚುನಾವಣೆಯಲ್ಲಿ ಹಣ ನೀಡುತ್ತಾರೆ ಎಂದು ಹೇಳುವುದೇ ಅಪರಾಧ. ಚುನಾವಣಾ ಆಯೋಗ ಆ ಬಗ್ಗೆ ಏನು ತೀರ್ಮಾನ ತೆಗೆದುಕೊಳ್ಳುತ್ತೆ ನೋಡಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಚುನಾವಣೆ ಎದುರಾದಾಗ ಒಂದಷ್ಟು ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುವುದು ಸಹಜ. ಅಂತೆಯೇ ನಟ ಉಪೇಂದ್ರ ಕೂಡ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಇದರಲ್ಲಿ ವಿಶೇಷವೇನು ಕಾಣುತ್ತಿಲ್ಲ. ಹಿಂದೆ, ಈ ರೀತಿ ಹುಟ್ಟಿಕೊಂಡ ಹಲವು ರಾಜಕೀಯ ಪಕ್ಷಗಳು ಚುನಾವಣೆ ಮುಗಿದ ನಂತರ ಎಲ್ಲಿ ಹೋದವೋ ಗೊತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.