ಬಳ್ಳಾರಿ ವಿಭಜನೆಗೆ ರಾಮುಲು ಬಣ ವಿರೋಧ | ಯಾವುದೇ ಕಾರಣಕ್ಕೂ ಜಿಲ್ಲೆ ಇಬ್ಭಾಗಕ್ಕೆ ಬಿಡೊಲ್ಲ: ಶ್ರೀರಾಮುಲು | ಯಾರದ್ದೋ ರಾಜಕೀಯ ಸ್ವಾರ್ಥಕ್ಕೆ ವಿಭಜನೆ: ಸೋಮಶೇಖರ ರೆಡ್ಡಿ
ಬಳ್ಳಾರಿ (ಸೆ. 20): ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗಗೊಳಿಸಿ ನೂತನ ವಿಜಯನಗರ ಜಿಲ್ಲೆ ರೂಪಿಸುವ ಸಂಬಂಧ ಪ್ರಕ್ರಿಯೆ ನಡೆಯುತ್ತಿರುವ ಹಂತದಲ್ಲೇ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅನಂದ್ ಸಿಂಗ್ ಮನವಿಯಂತೆ ವಿಷಯವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸರ್ಕಾರದ ಮುಖ್ಯಕಾರ್ಯದಶಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಿಖಿತ ಸೂಚನೆ ಕೊಟ್ಟಿರುವುದನ್ನು ಕಾಂಗ್ರೆಸ್ ಮಾತ್ರವಲ್ಲದೆ ಆಡಳಿತಾರೂಢ ಬಿಜೆಪಿ ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾರ್ಥಿಗಳಿಂದ ಸ್ವಾರ್ಥಕ್ಕಾಗಿ ವಿಜಯನಗರ ಜಿಲ್ಲೆ: ಈಗ ಅಪಸ್ವರ ಬಿಜೆಪಿಯಲ್ಲೇ!
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಲು ಬಿಡುವುದಿಲ್ಲ, ಅಖಂಡ ಬಳ್ಳಾರಿ ನಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಮಾತನಾಡುತ್ತೇನೆ. ಮುಖ್ಯಮಂತ್ರಿಗಳ ಬಳಿಯೂ ಖುದ್ದಾಗಿ ಚರ್ಚಿಸುತ್ತೇನೆ ಎಂದಿದ್ದಾರೆ.
ರಾಜಕೀಯ ಸ್ವಾರ್ಥಕ್ಕಾಗಿ ವಿಭಜನೆ: ಈ ವಿಷಯವಾಗಿ ಆನಂದ್ ಸಿಂಗ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿರುವ ಶಾಸಕ ಸಿ.ಸೋಮಶೇಖರ, ರೆಡ್ಡಿ ಯಾರದ್ದೋ ರಾಜಕೀಯ ಸ್ವಾರ್ಥಕ್ಕಾಗಿ ಬಳ್ಳಾರಿ ಜಿಲ್ಲೆಯನ್ನು ತುಂಡರಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಕಾದರೆ ಬಳ್ಳಾರಿ ಜಿಲ್ಲೆಯನ್ನೇ ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಕಾಂಗ್ರೆಸ್‌ನ್ನು PLD ಬ್ಯಾಂಕ್ ನುಂಗಿತ್ತಾ, ಬಳ್ಳಾರಿ ವಿಭಜನೆ ಬಿಜೆಪಿ ನುಂಗುತ್ತಾ?
371(ಜೆ)ಗೆ ಧಕ್ಕೆ ಸಾಧ್ಯತೆ: ಬಳ್ಳಾರಿ ಜಿಲ್ಲೆಗೆ ನೀಡಿದ್ದ 371(ಜೆ) ವಿಶೇಷ ಸ್ಥಾನಮಾನದ ಬಗ್ಗೆ ಈವರೆಗೂ ಸ್ಪಷ್ಟತೆಯೇ ಇಲ್ಲ. ಹೀಗಿರುವಾಗ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ವಿಭಜಿಸಿ 2 ಕಂದಾಯ ಜಿಲ್ಲೆಗಳನ್ನಾಗಿ ರಚನೆ ಮಾಡುವುದು ಬೇಡ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅಭಿಪ್ರಾಯಪಟ್ಟಿದ್ದಾರೆ. ವಿಭಜನೆಯಿಂದ ವಿಶೇಷ ಸ್ಥಾನಮಾನ ಕೈ ಬಿಟ್ಟು ಹೋದರೆ ಇಲ್ಲಿನ ಜನರ ಭವಿಷ್ಯ ಕತ್ತಲೆಯಲ್ಲಿ ಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದೇವೇಳೆ ಹತ್ತಾರು ಮೂಲಸೌಕರ್ಯಗಳಿರುವ ಹೂವಿನಹಡಗಲಿ ಪ್ರತ್ಯೇಕ ಜಿಲ್ಲಾ ಕೇಂದ್ರವಾಗಬೇಕೆಂಬ ಬೇಡಿಕೆ ನಮ್ಮದಾಗಿದೆ ಎಂದು ತಿಳಿಸಿದ್ದಾರೆ.