
ಹೊನ್ನಾವರ: ತಾಲೂಕಿನ ಕುಮುಟಾದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಬೆನ್ನಲ್ಲೇ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಟ್ವೀಟ್ ಮಾಡಿದ ಶೋಭಾ ಕರಂದ್ಲಾಜೆ ವಿರುದ್ಧ ಹೊನ್ನಾವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
'ಜಿಹಾದಿಗಳು 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮೌನವಾಗಿರುವುದೇಕೆ? ಬಾಲಕಿ ಮೇಲೆ ದೌರ್ಜನ್ಯವೆಸಗಿಲು ಯತ್ನಿಸಿದವರನ್ನು ಬಂಧಿಸಿ,' ಎಂದು ಆಗ್ರಹಿಸಿ ಸಂಸದೆ ಶೋಭಾ ಸರಣಿ ಟ್ವೀಟ್ ಮಾಡಿದ್ದರು.
ಹಿಂದೂ ಹಾಗೂ ಮುಸ್ಲಿಂ ಧರ್ಮೀಯರ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡಿ, ಧರ್ಮ, ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡಿ, ದೊಂಬಿ ಮಾಡಿಸುವ ಸಲುವಾಗಿ, ಉಭಯ ಕೋಮುಗಳ ನಡುವಿನ ಭಾವೈಕ್ಯತೆಗೆ ಧಕ್ಕೆ ತರಲು ಯತ್ನಿಸುತ್ತಿರುವ ಶೋಭಾ, ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸಿದ್ದಾರೆಂದು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಆನಂದಮೂರ್ತಿ ಎಫ್‌ಐಆರ್ ಪ್ರತಿಯಲ್ಲಿ ಹೇಳಿದ್ದಾರೆ.
ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಶೋಭಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, 'ಹೆಣ್ಣು ಮಕ್ಕಳ ರಕ್ಷಣೆಗೆ ಒತ್ತು ನೀಡದ ಸರಕಾರ, ಧ್ವನಿ ಎತ್ತಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ,' ಎಂದಿದ್ದಾರೆ.