
ತುಮಕೂರು: ಭಾರತೀಯರೇ ದೇಶದ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದರೂ, ವಿದೇಶಿಗರು ನಮ್ಮ ಸಂಸ್ಕೃತಿ, ಸಂಪ್ರದಾಯಗಳಿಗೆ ಮಾರು ಹೋಗುವುದು ಹೊಸ ವಿಷಯವಲ್ಲ. ಈ ಸಾಲಿಗೆ ಅಮೆರಿಕದ ಯುವತಿಯೊಬ್ಬಳು ಸೇರಿದ್ದು, ಪ್ರಕೃತಿ ನಡುವೆ, ಹಿಂದೂ ಸಂಪ್ರದಾಯದಂತೆ ಕನ್ನಡಿಗನನ್ನು ವರಿಸಿದ್ದಾಳೆ.
ತುಮಕೂರು ಜಿಲ್ಲೆಯ ತೋವಿನಕೆರೆ ಸಮೀಪದ ಉಪ್ಪಾರಪಾಳ್ಯದ ತೋಟದಲ್ಲಿ ಈ ವಿವಾಹ ನೆರವೇರಿದೆ. ಅಮೆರಿಕ ನ್ಯೂಜೆರ್ಸಿಯಾದ ಟಾರಾ ಹಾಗೂ ತುಮಕೂರಿನ ಡಾ. ಅಜಯ್ ಸಪ್ತಪದಿ ತುಳಿದ ಜೋಡಿ, ಅಗ್ನಿ ಸಾಕ್ಷಿಯಾಗಿ, ಪ್ರಕೃತಿಯ ಮಡಲಲ್ಲಿ ಸತಿಪತಿಗಳಾದರು. ಡಾ. ಅಜಯ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ಟಾರಾ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು.
ಟಾರಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಳು. ಮನದನ್ನೆಯ ಆಸೆ ಪೂರೈಸಲು ಅಜಯ್, ತಮ್ಮ ಆಪ್ತರ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದರು. ಟಾರಾ ಸೀರೆ ಉಟ್ಟು, ಹೂವಿನ ಹಾರ ಹಾಕಿಕೊಂಡು, ಕೈ ತುಂಬಾ ಮದರಂಗಿ ಹಾಕಿಸಿಕೊಂಡು, ಅಪ್ಪಟ ಭಾರತೀಯ ವಧುವಿನಂತೆಯೇ ಕಂಗೊಳಿಸುತ್ತಿದ್ದಳು.
ಎತ್ತಿನ ಗಾಡಿಯ ದಿಬ್ಬಣ, ಒನಕೆ ಕುಟ್ಟುವ ಶಾಸ್ತ್ರ, ಧಾನ್ಯ ಬೀಸುವ ಶಾಸ್ತ್ರ ಹೀಗೆ ಎಲ್ಲಾ ಸಂಪ್ರದಾಯಗಳ್ನೂ ಚಾಚೂ ತಪ್ಪದೇ ಮಾಡಿರುವ ಈ ಜೋಡಿ, ನಂತರ ಗೂವಿನ ಪೂಜೆ ನೆರವೇರಿಸಿ ಆರತಿಯನ್ನೂ ಬೆಳಗಿದರು.