ಶಿವಮೊಗ್ಗ(ಅ.04): ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಣ ಕಾರಣವಾದಂತೆ, ಸಮುದಾಯದ ಒಡನಾಟ, ಸಾಮಾಜಿಕ ಕಳಕಳಿ, ನಾಯಕತ್ವದ ಗುಣಗಳ ವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಕಾರಣ ಎಂದು ಕುವೆಂಪು ವಿವಿ ಕುಲಪತಿ ಪೊ.ಜೋಗನ್‌ ಶಂಕರ್‌ ಹೇಳಿದರು. ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕಿನ ಮೌಲ್ಯ ಅರಿಯುವಲ್ಲಿ, ಬೌದ್ಧಿಕ ಮತ್ತು ಕಲಾತ್ಮಕ ವ್ಯಕ್ತಿತ್ವ ಬೆಳೆಸುವಲ್ಲಿ, ಸಹಕಾರ, ಸಮಾನತೆ, ಸಹಬಾಳ್ವೆ ಪಸರಿಸುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಾರಣವಾಗಿವೆ ಎಂದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಮುಖ್ಯ ಆಶಯ. ಇಂತಹ ಆಶಯ ಈಡೇರಿಸುವಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿಯೇ ಪಠ್ಯೇತರ ಚಟುವಟಿಕೆಗಳನ್ನು ಶೈಕ್ಷಣಿಕ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿ ಇರಿಸಲಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಈ ಮೂಲಕ ಸುಂದರ ಬದುಕು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು. ಆಕಾಶವಾಣಿ ಕಲಾವಿದೆ ಸುರೇಖಾ ಹೆಗಡೆ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲ ಡಾ.ಬಿ.ಸಿ.ಗೌಡರಶಿವಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಪ್ರೊ. ಜಿ.ಶಕುಂತಲ ಉಪಸ್ಥಿತರಿದ್ದರು.