ಕೊಪ್ಪ(ಅ.04): ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಕೊಪ್ಪ ಅಬ್ಬಿಗದ್ದೆ ಗ್ರಾಮಸ್ಥರು, ಆಟೋ ಚಾಲಕರು ರಸ್ತೆ ತಡೆ ನಡೆಸಿ ರಸ್ತೆಯಲ್ಲಿ ಬಾಳೆ ಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದರು. ಪಟ್ಟಣದ ವಾಟರ್‌ಟ್ಯಾಂಕ್‌ ವೃತ್ತದಿಂದ ಕಾಚ್‌ಗಲ್‌ವರೆಗಿನ ಅಬ್ಬಿಗದ್ದೆಯಿಂದ ಸೋಮ್ಲಾಪುರದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅಲ್ಲಲ್ಲಿ ಬಿದ್ದಿರುವ ಬೃಹತ್‌ ಹೊಂಡಗುಂಡಿಗಳಿಂದಾಗಿ ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಕಾಚ್‌ಗಲ್‌, ಸೋಮ್ಲಾಪುರ, ನೇತಾಜಿನಗರ, ಹನುಮಾನ್‌ ನಗರ ಮುಂತಾದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು, ಪಟ್ಟಣಕ್ಕೆ ಬರುವ ಗ್ರಾಮಸ್ಥರು ಇದೇ ರಸ್ತೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಬೆಳಗ್ಗೆ ಮತ್ತು ಸಂಜೆ ಶಾಲಾ ಸಮಯದಲ್ಲಿ ಅತಿಯಾದ ವಿದ್ಯಾರ್ಥಿಗಳ, ಸಾರ್ವಜನಿಕರ ಹಾಗೂ ವಾಹನಗಳ ಓಡಾಟ ಹೆಚ್ಚಾಗಿದ್ದು ರಸ್ತೆ ಅಪಘಾತಗಳು ನಡೆಯುವ ಸಂಭವ ಹೆಚ್ಚಿದ್ದು ಈ ಬಗ್ಗೆ ಜನಪ್ರತಿನಿಧಿಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆ ತಡೆ ಮಾಡಿ ರಸ್ತೆಯ ಹೊಂಡಗಳಲ್ಲಿ ಬಾಳೆ ಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದರು. ಗ್ರಾಪಂ ಕೆಲವು ಸದಸ್ಯರು, ಉಪಾಧ್ಯಕ್ಷರು, ತಾಪಂ ಮಾಜಿ ಅಧ್ಯಕ್ಷರು ಇದೇ ಪ್ರದೇಶದಲ್ಲಿ ವಾಸವಿದ್ದು ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಈ ರಸ್ತೆ ಬಗ್ಗೆ ಗಮನ ಹರಿಸದಿರುವುದು ಶೋಚನೀಯ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ಪಕ್ಷದ ಮುಖಂಡರು ತಿಳಿಸಿದರು. ಕಳೆದ ಒಂದು ವರ್ಷದಿಂದ ದುರಸ್ತಿ ಕಾಣದ ರಸ್ತೆಯನ್ನು ತಿಂಗಳೊಳಗಾಗಿ ಪ್ರಯಾಣಕ್ಕೆ ಯೋಗ್ಯವಾಗುವಂತೆ ದುರಸ್ತಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ಕೊಪ್ಪ ತಹಸೀಲ್ದಾರ್‌ ಮೂಲಕ ಶಾಸಕರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆಟೋ ಚಾಲಕರಾದ ಪಾಲಿ, ವಿಠಲ, ರವಿ, ಷಣ್ಮುಖ, ಗ್ರಾಮಸ್ಥರಾದ ಶರೀಫ್‌, ಬಾಲ್‌ರಾಜ್‌, ಧರಣೇಂದ್ರಪ್ಪ, ಕಾಂಗ್ರೆಸ್‌ ಮುಖಂಡ ಸುಧೀರ್‌ ಕುಮಾರ್‌ ಮುರೊಳ್ಳಿ, ಅಸಗೋಡು ನಾಗೇಶ್‌, ಕೆ.ಎಸ್‌.ಸುಬ್ರಹ್ಮಣ್ಯ ಶೆಟ್ಟಿ, ನುಗ್ಗಿ ಮಂಜುನಾಥ್‌, ಬರ್ಕತ್‌ ಅಲಿ, ಸಾಧಿಕ್‌ ನಾರ್ವೆ, ಜಾತ್ಯತೀತ ಜನತಾದಳದ ಬಿ.ಮಹಮ್ಮದ್‌, ತೌಸಿಫ್‌, ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆಯ ಹಸನ್‌, ಚಂದ್ರಶೇಖರ್‌, ಹುಸೇನ್‌ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.