
ಉಡುಪಿ(ಎ.03): ಅವರು ಉಪನ್ಯಾಸಕಿ. ತುಂಬು ಗರ್ಭಿಣಿಯಾದರೂ ಪಾಠ ಪ್ರವಚನ ನಿಲ್ಲಿಸಿರಲಿಲ್ಲ. ಆರೋಗ್ಯ ಹದಗೆಟ್ಟು ಕಾಲೇಜಿನಿಂದಲೇ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆ ಮುಗಿಸಿ ಕಾಲೇಜಿಗೆ ಬಂದಾಗ ಶಾಕ್ ಕಾದಿತ್ತು. ಪುಟ್ಟ ಮಗು ಮಡಿಲು ಸೇರಿದ ಸಂಭ್ರಮದ ಬೆನ್ನಲ್ಲೇ ಉದ್ಯೋಗ ಕಳೆದುಕೊಳ್ಳುವಂತಾಯಿತು. ಕುಂದಾಪುರದ ಬಂಡಾರ್'ಕಾರ್ಸ್ ಕಾಲೇಜು ಆಡಳಿತ ಮಂಡಳಿಯ ಅಮಾನವೀಯ ನಿರ್ಧಾರದ ಬಗ್ಗೆ ಇಲ್ಲಿದೆ ಒಂದು ಸ್ಟೋರಿ.
ಡಾ. ಸೌಮ್ಯಾ ಹೇರಿಕುದ್ರು, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಕನ್ನಡ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಹೆರಿಗೆಗೆ ಅಂತ ರಜೆ ಪಡೆದು ಗಂಡು ಮಗುವಿಗೆ ಜನ್ಮಕೊಟ್ಟ ಖುಷಿಯಲ್ಲಿದ್ದವರಿಗೆ ಕಾಲೇಜು ಆಡಳಿತ ಮಂಡಳಿ ಶಾಕ್ ನೀಡಿದೆ. ಅನಧಿಕೃತ ಗೈರು ಹಾಜರಿ ಎಂದು ಉಪನ್ಯಾಸಕಿಯನ್ನು ಕಿತ್ತೊಗೆಯಲಾಗಿದೆ.
ಕಳೆದ ಜನವರಿ 31ರಂದು ಪಾಠ ಮಾಡುವಾಗಲೇ ತುಂಬು ಗರ್ಭಿಣಿಯಾಗಿದ್ದ ಸೌಮ್ಯಾ ಆರೋಗ್ಯ ಹದಗೆಟ್ಟಿತ್ತು. ಅಲ್ಲಿಂದಲೇ ಆಸ್ಪತ್ರೆ ಸೇರಿದ್ದರು. ಫೆಬ್ರವರಿ 6 ರಂದು ಸಿಸೇರಿಯನ್ ಮಾಡಲಾಗಿತ್ತು. ಆದರೆ ಏಳೇ ತಿಂಗಳಿಗೆ ಮಗು ಜನ್ಮತಳೆದ ಕಾರಣ ಮಾರ್ಚ್ 2ರ ವರೆಗೆ ತುರ್ತು ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಮಧ್ಯೆ ಸೌಮ್ಯ ಅವರು ಮೆಟರ್ನಿಟಿ ಲೀವ್ ಕೇಳಿ ಕಾಲೇಜಿಗೆ ಪತ್ರ ನೀಡಿದ್ದಾರೆ.. ಆದ್ರೂ ಅನಧಿಕೃತ ಗೈರು ಹಾಜರಾತಿ ಕಾರಣ ನೀಡಿ ಉನ್ಯಾಸಕಿ ಹುದ್ದೆಯಿಂದ ಬಿಡುಗಡೆಗೊಳಿಸಿ ಪ್ರಾಂಶುಪಾಲರು ಆದೇಶ ನೀಡಿದ್ದಾರೆ.
ಕಾಲೇಜಿನ ನಿಷ್ಕರುಣಿ ವರ್ತನೆಗೆ ಬೇಸತ್ತ ಸೌಮ್ಯಾ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. 2014ರಲ್ಲಿ ಸುಪ್ರೀಮ್ ಕೊರ್ಟ್ ಮೇಟರ್ನಿಟಿಯ ಬಗ್ಗೆ ಕೊಟ್ಟಿರುವ ಆದೇಶದ ಉಲ್ಲಂಘನೆಯಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಹಾಗೂ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶನದ ಮೇರೆಗೆ ನೋಟಿಸ್ ನೀಡಿದ್ದೇವೆ ಅನ್ನೋದು ಪ್ರಾಂಶುಪಾಲರ ವಾದ.. ಆದರೆ ಮಹಿಳೆಯೊಬ್ಬರ ಹಕ್ಕು ಕಸಿದುಕೊಳ್ಳುವುದು ಇದ್ಯಾವ ನ್ಯಾಯ?