
ಉಡುಪಿ(ಎ.03): ಕೃಷ್ಣನ ನಾಡು ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆಯ ಅಬ್ಬರ ತಾರಕಕ್ಕೇರಿದೆ. ಸ್ವತ: ಜಿಲ್ಲಾಧಿಕಾರಿಗಳ ಮೇಲೆಯೇ ಅಕ್ರಮ ಮರಳು ಧಂಧೆಕೋರರು ಹಲ್ಲೆ ಮಾಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಎಸಿ ಶಿಲ್ಪಾ ನಾಗ್ ಮೇಲೆ ದುಷ್ಮರ್ಮಿಗಳು ಹಲ್ಲೆ ನಡೆಸಿದ್ದಾರೆ.
ಜಿಲ್ಲೆಯ ಕುಂದಾಪುರ ಭಾಗದಿಂದ ಸತತವಾಗಿ ಅಕ್ರಮ ಮರಳುಗಾರಿಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆ, ನಿನ್ನೆ ರಾತ್ರಿ 10 ಗಂಟೆಗೆ ಈ ಅಧಿಕಾರಿಗಳಿಬ್ಬರು ಮರಳು ದಂಧೆ ಅಡ್ಡೆ ಮೇಲೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕಾರ್ಯಾಚರಣೆ ವಿಷಯ ಸೋರಿಕೆಯಾಗಬಾರದು ಎಂಬ ಕಾರಣಕ್ಕೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡದೆ, ಕೇವಲ ಒಬ್ಬ ಗನ್ ಮ್ಯಾನ್ ಜೊತೆ ಸೇರಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಹಲ್ನಾಡು ಎಂಬಲ್ಲಿ ಹಲವು ಲಾರಿಗಳನ್ನು ವಶಕ್ಕೆ ಪಡೆದು, ನಂತರತ್ರ ಕುಂದಾಪುರದ ಕಂಡ್ಲೂರಿನಲ್ಲಿ ಮರಳು ದಂಧೆ ನಡೆಯುತ್ತಿರುವ ಸ್ಥಳ್ಕಕ್ಕೆ ಹೋಗಿದ್ದರು. ಆದರೆ ಈ ವೇಳೆ ಅಧಿಕಾರಿಗಳನ್ನು ನೋಡಿದ 50 ಕ್ಕೂ ಹೆಚ್ಚು ಉತ್ತರ ಭಾರತ ಮೂಲದ ಕಾರ್ಮಿಕರು ಮತ್ತು ಸ್ಥಳೀಯರು, ಸ್ಥಳದಲ್ಲೇ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಮನೆಯೊಳಗೆ ಅವಿತು ಕುಳಿತಿದ್ದವರನ್ನು ವಶಕ್ಕೆ ಪಡೆಯಲು ಮುಂದಾದಾಗ ಗನ್ ಮ್ಯಾನ್ ಮೇಲೂ ಹಲ್ಲೆ ನಡೆಸಿದ್ದಾರೆ. ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಸ್ಥಳಕ್ಕೆ ಬರುವುದು ವಿಳಂಬವಾಗಿದೆ. ಇತ್ತ ಜಿಲ್ಲಾಧಿಕಾರಿಗಳಿಬ್ಬರು ಜೀವ ಉಳಿಸಿಕೊಳ್ಳಲು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇವರ ಜೊತೆಗಿದ್ದ ವಿಎ ಕಾಂತರಾಜು, ಎಸಿ ಡ್ರೈವರ್ ಮೇಲು ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ATEMPT TO MURDER ಕೇಸ್ ದಾಖಲಿಸಲಾಗಿದೆ. ಈ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಇಲ್ವಾ ಎನ್ನುವುದು ಒಂದು ಪ್ರಶ್ನೆಯಾದರೆ, ಜಿಲ್ಲಾಧಿಕಾರಿಯ ಅವಸ್ಥೆಯೇ ಹೀಗಾದ್ರೆ ಉಳಿದವರ ಪಾಡೇನು ಎನ್ನುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.