
ಚಿಕ್ಕನಾಯಕನಹಳ್ಳಿ (ನ.15): ಬತ್ತಿದ ಕೆರೆಗಳು, ಒಣಗಿದ ಬೆಳೆಗಳು, ಬಿರುಕು ಬಿಟ್ಟ ಭೂಮಿ!
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿ ತಾಲೂಕಿಗೆ ಬರ ವೀಕ್ಷಣೆಗೆ ಬಂದಾಗ ಕಂಡು ಬಂದ ದೃಶ್ಯ. ಮಂಗಳವಾರ ಬೆಳಗ್ಗೆ ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸಿದ ಮುಖ್ಯಮಂತ್ರಿಗಳು ತಾಲೂಕಿನ ನವಿಲೆಕೆರೆ ಮತ್ತು ಚಟ್ಟಸಂದ್ರ ಗೇಟ್‌ನ ಹೊಲಗಳಿಗೆ ಹೋಗಿ ಪರಿಶೀಲನೆ ನಡೆಸಿದರು.
30 ವರ್ಷಗಳಿಂದ ಬತ್ತಿದ ನವಿಲೆಕೆರೆಯನ್ನು ವೀಕ್ಷಿಸಿದ ಸಿದ್ದರಾಮಯ್ಯ ಅವರಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಗೆ ನೀರು ಹರಿಸುವಂತೆ ಮನವಿ ಸಲ್ಲಿಸಿದರು. ಹೇಮಾವತಿ ನದಿಯಿಂದ ನೀರು ಹರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು. ಬಳಿಕ ಚಟ್ಟಸಂದ್ರ ಗೇಟ್ ಬಳಿ ರೈತರ ಜಮೀನಿಗೆ ಭೇಟಿ ನೀಡಿ ಒಣಗಿದ ರಾಗಿ ಪೈರನ್ನು ನೋಡಿ ವಿಷಾದಿಸಿದರು.
ಈ ಸಂದರ್ಭದಲ್ಲಿ ರೈತರ ಜೊತೆ ಬರಗಾಲ ಹಾಗೂ ಒಣಗಿದ ಬೆಳೆಗಳ ಬಗ್ಗೆ ಮಾತುಕತೆ ನಡೆಸಿದರು. ದಾರಿಯುದ್ದಕ್ಕೂ ಒಣಗಿದ ಬೆಳೆಗಳು, ಬಿರುಕುಬಿಟ್ಟ ಭೂಮಿಯ ಸಾಕ್ಷಾತ್ ದರ್ಶನ ಮುಖ್ಯಮಂತ್ರಿಗಳಿಗೆ ಆಯಿತು. ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ತೀವ್ರ ಬರಗಾಲದಿಂದಾಗಿ 16 ರೂ. ಸಾವಿರ ಕೋಟಿ ನಷ್ಟವುಂಟಾಗಿದೆ. ಕೇಂದ್ರದಿಂದ ಸಂಪೂರ್ಣ ನಷ್ಟದ ಬಾಬ್ತು ಪರಿಹಾರವನ್ನು ಕೇಳುವುದಕ್ಕಾಗುವುದಿಲ್ಲ. ಆದ್ದರಿಂದ ನಿಯಮಾನುಸಾರ ರೂ.6 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಳಲಾಗಿದೆ ಎಂದರು.
ಸಮಸ್ಯೆ ಸರಿಯಾಗಲಿ:
ಕೇಂದ್ರದ ನೆರವು ದೊರೆತರೆ ಸಾಲಮನ್ನಾ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು, ಹಳೆ ನೋಟುಗನ್ನು ಅಮಾನ್ಯ ಮಾಡಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದ ಸಿಎಂ, ಕೇವಲ 2 ಸಾವಿರ ಮುಖಬೆಲೆ ನೋಟುಗಳನ್ನು ಮಾತ್ರ ಬಿಡುಗಡೆ ಮಾಡಿದ್ದು ಜನ ಆತಂಕಗೊಳ್ಳಲು ಕಾರಣವಾಗಿದೆ. ಈಗಲೂ ಬ್ಯಾಂಕ್‌ಗಳಿಗೆ ಅಗತ್ಯವಾದ ಮೊತ್ತದ ಹಣವನ್ನು ಅಪೆಕ್ಸ್ ಬ್ಯಾಂಕಿಗೆ ಸರಬರಾಜು ಮಾಡುವ ಮೂಲಕ ಜನರ ತೊಂದರೆ ಪರಿಹರಿಸಬೇಕೆಂದರು.