ಮೋದಿಯದ್ದು ಅತ್ಯಂತ ನಾಚಿಕೆಗೇಡಿತನದ ಭಾಷಣ: ಸಿಎಂ

By Suvarna Web DeskFirst Published Feb 5, 2018, 1:36 PM IST
Highlights

ಕಾನೂನು ಸುವ್ಯವಸ್ಥೆಯಲ್ಲಿ ಟಾಪ್ 10 ರಾಜ್ಯಗಳು ಯಾವುವೆಂದು ಮೋದಿ ನೋಡಿಕೊಳ್ಳಲಿ: ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಉಲ್ಲೇಖಿಸಿದ ವಿಷಯಗಳಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರದ ಸಾಧನೆ ಹಾಗೂ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಹೇಗಿದೆ ಎಂಬುದನ್ನು ವಿವರಿಸುವ ಮೂಲಕ, ಉತ್ತರಿಸಿದ್ದಾರೆ. ಸುಳ್ಳು ಮಾಹಿತಿ ನೀಡಿದ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಟ್ಟಕ್ಕಿಳಿದು ಮೋದಿ ಭಾಷಣ ಮಾಡಿದ್ದಾರೆಂದು ಟೀಕಿಸಿದ್ದಾರೆ.

'ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ಈಗಲೂ ನಂ.1. ಶೇ. 38 ರಷ್ಟು ರಫ್ತು ಕರ್ನಾಟಕದಿಂದಲೇ ನಡೆಯುತ್ತಿದೆ. ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.1,' ಎಂದು ರಾಜ್ಯದ ಸಾಧನೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ ಮೋದಿಗೆ ಉತ್ತರಿಸಿದ ಸಿಎಂ, 'ಗೋಧ್ರಾ ಗಲಾಟೆಯಲ್ಲಿ ಎಷ್ಟು ಜನ ಸತ್ತರು. ಬಿಜೆಪಿ ಆಡಳಿತವಿರುವ ಸರಕಾರಗಳಲ್ಲಿ ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿಯವರಿಗೆ ರಕ್ಷಣೆಯೇ ಇಲ್ಲ. ಈ ಬಗ್ಗೆ ತುಸು ಗಮನ ಹರಿಸಲಿ,' ಎಂದು ಕಿವಿಮಾತು ಹೇಳಿದು.

'ನಮ್ಮ ಸರ್ಕಾರದ ಮೇಲೆ ಬೆರಳು ತೋರಿಸಿದ್ದು ರಾಜಕೀಯ ಪ್ರೇರಿತ. ಇದಕ್ಕಿಂತ ನಾಚಿಕೆಗೇಡಿನ ಪ್ರಸಂಗ ಬೇರೆಲ್ಲ. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ
ಯಾವ ಯೋಜನೆ, ಸ್ಕೀಂನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಾಬೀತುಪಡಿಸಲಿ. ಬಿಜೆಪಿ ಅವಧಿಯಲ್ಲಿ ಪ್ರಸ್ತಾಪವಾದ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕಾಂಗ್ರೆಸ್ ಸರಕಾರ ಕೈ ಬಿಟ್ಟಿದೆ,' ಎಂದ ಸಿದ್ದರಾಮಯ್ಯ, ಮೋದಿ ಸುಳ್ಳು ಹೇಳುವ ಮೂಲಕ ಜೈಲಿಗೆ ಹೋದವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಮುಂದಾಗಿದ್ದಾರೆ. ಸುಳ್ಳು ಹೇಳಿ ರಾಜ್ಯದ ಜನರಿಗೆ ಅಗೌರವ ತೋರುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.

ಬಿಜೆಪಿಯದ್ದು ಲೂಟಿಕೋರರ ಸರಕಾರ:

'5 ವರ್ಷ  ಬಿಜೆಪಿ ಸರ್ಕಾರ ಲೂಟಿಕೋರರ ಸರ್ಕಾರವಾಗಿತ್ತು. ಆದರೆ, ಆರೋಪಕ್ಕಾಗಿ ನಾನೂ ಈ ಮಾತುಗಳನ್ನು ಹೇಳುತ್ತಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯದ ಸಂಪತ್ತು ಲೂಟಿಯಾಗಿತ್ತು. ಈ ಕುರಿತು ಲೋಕಾಯುಕ್ತರೇ ವರದಿ ನೀಡಿದ್ದರು. ಚೆಕ್ ಮೂಲಕ ಲಂಚ ಪಡೆದ ನಿದರ್ಶನ ಬೇರೆಲ್ಲೂ ಇಲ್ಲ,' ಎಂದರು.

'ಮೋದಿ ಬಂದು ರೈತರ ಸಾಲ ಮನ್ನಾ ಘೋಷಣೆ ಮಾಡುತ್ತಾರೆಂದು ನಿರೀಕ್ಷಿಸಿದರೆ, ಅದ ಬಿಟ್ಟು ಬೇರೆಲ್ಲ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಉದ್ಯಮಿಗಳ ಸಾಲ ಮನ್ನಾ ಮಾಡಿದ ಮೋದಿ ಸರಕಾರ, ರೈತರ ಸಾಲ ಮನ್ನಾ ಮಾಡಲು ಹಿಂದು ಮುಂದು ನೋಡುತ್ತಿದೆ,' ಎಂದರು.

'ನಮ್ಮದು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಿದ್ದಾರೆ. ಇದೊಂದು ಬೇಜವಾಬ್ದಾರಿಯುತ, ಆಧಾರ ರಹಿತ ಹೇಳಿಕೆ. ಮೋದಿ ಪಕ್ಕದಲ್ಲೇ ಯಡಿಯೂರಪ್ಪರನ್ನು ಕೇಳಬೇಕಿತ್ತು, ಯಡಿಯೂರಪ್ಪ ಕಾಲದಲ್ಲಿ ಎಷ್ಟೆಷ್ಟು ನಡೆದಿತ್ತು ಅನ್ನೋದನ್ನು ಹೇಳ್ತಿದ್ರು. ಜೈಲಿಗೆ ಹೋಗಿದ್ದ ಯಡಿಯೂರಪ್ಪ, ಜನಾರ್ದನರೆಡ್ಡಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು ಎಲ್ಲರೂ ಜೈಲಿಗೆ ಹೋಗಿ ಬಂದವರು. ಇವರನ್ನೆಲ್ಲ ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಗುಜರಾತ್‌ನಲ್ಲಿ ತಮ್ಮ ಆಡಳಿತದ ಭ್ರಷ್ಟಾಚಾರ ಹೊರ ಬರುವ ಭಯದಿಂದ 9 ವರ್ಷಗಳ ಕಾಲ ಲೋಕಾಯುಕ್ತರನ್ನೇ ನೇಮಿಸಲಿಲ್ಲ. ಈಗಲೂ ಕೇಂದ್ರ ಸರ್ಕಾರ ಲೋಕಪಾಲ್ ನೇಮಿಸಲಿಲ್ಲ,' ಎಂದು ಆರೋಪಿಸಿದರು.
 

click me!