
ಮೈಸೂರು (ನ.17): ಸಾಂಸ್ಕೃತಿಕ ನಗರಿ ಮೈಸೂರಿನ ಹೆಬ್ಬಾಳ ಬಡಾವಣೆಯ ಪುರಾತನ ಲಕ್ಷ್ಮೀಕಾಂತಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆ ದಿಢೀರ್ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರಿಂದ ವಿವಾದ ಭುಗಿಲೆದ್ದಿದೆ.
ಆಸ್ತಿಕ ಸಮೂಹವೊಂದು ಜೀರ್ಣೋದ್ಧಾರ ಮಾಡಿ ದೇವಾಲಯವನ್ನು ನಿರ್ವಹಣೆ ಮಾಡುತ್ತಿರುವಾಗಲೇ ಸ್ವಾಧೀನಕ್ಕೆ ಮುಂದಾಗಿದ್ದರಿಂದ ಆಕ್ರೋಶ ವ್ಯಕ್ತವಾಗಿದತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕರಾದ ವಾಸು, ಜಿ.ಟಿ. ದೇವೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ಎಲ್ಲರೂ ಸಹ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕೆಲಕಾಲ ದಿಗ್ಭಂಧನಕ್ಕೆ ಒಳಗಾಗಿದ್ದ ಕಂದಾಯ ಇಲಾಖೆ ಸಿಬ್ಬಂದಿಯನ್ನು ವಿಮುಕ್ತಿಗೊಳಿಸಿದರು. ಈ ದೇವಾಲಯವು ಆದಿಚುಂಚನಗಿರಿ ಮಠಕ್ಕೆ ಸೇರಿದ್ದಾಗಿದ್ದು, ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಟ್ರಸ್ಟ್ ರಚನೆ ಮಾಡಿ ಅದರಲ್ಲಿ ಹಲವು ಗಣ್ಯರನ್ನು ನೇಮಿಸಿದ್ದರು. ಎಲ್ಲರೂ ಒಟ್ಟುಗೂಡಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು. ಈ ತನಕ ಯಾವುದೇ ವಿವಾದವಿರಲಿಲ್ಲ. ಆದರೆ ಇತ್ತೀಚಿಗೆ ಯಾರೋ ಭಕ್ತರು ಟ್ರಸ್ಟ್ ವಿರುದ್ಧ ದೂರು ನೀಡಿದರೆಂದು ಟ್ರಸ್ಟಿಗೆ ಯಾವುದೇ ನೊಟೀಸ್ ಕೊಡದೆ ಸ್ವಾಧೀನಕ್ಕೆ ಮುಂದಾಗಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.