ಬಿಬಿಎಂಪಿ ವಿನೂತನ ಐಡಿಯಾ: ಗುಂಡಿ ಫೋಟೋ ಕಳಿಸಿ, ಹಣ ಗಳಿಸಿ

By Suvarna Web DeskFirst Published Jan 15, 2017, 9:19 AM IST
Highlights

ರಸ್ತೆಯಲ್ಲಿನ ಗುಂಡಿಗಳ ಫೋಟೋ ತೆಗೆದು ಪಾಲಿಕೆಗೆ ಕಳಿಸಿದರೆ ನಗದು ಬಹುಮಾನ | ಎಂಜಿನಿಯರ್‌ ವೇತನದಿಂದ ಹಣ ಕಟ್‌​

ವರದಿ: ವೆಂ. ಸುನೀಲ್‌'ಕುಮಾರ್‌, ಕನ್ನಡಪ್ರಭ

ಬೆಂಗಳೂರು: ನಿಮ್ಮ ಬಡಾವಣೆಯಲ್ಲಿ ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಇದ್ದರೆ ಅದರ ಒಂದು ಚಿತ್ರ ತೆಗೆದು ಬಿಬಿಎಂಪಿ ವೆಬ್‌'ಸೈಟ್‌'ಗೆ ಕಳುಹಿಸಿದರೆ ಆದಷ್ಟು ಬೇಗ ಸಮಸ್ಯೆ ಪರಿಹಾರವಾಗುತ್ತದೆ. ಅಷ್ಟೇ ಅಲ್ಲ, ಫೋಟೋ ಕಳಿಸುವ ನಿಮಗೆ ನಗದು ಬಹುಮಾನ ಕೂಡ ಸಿಗುತ್ತದೆ!

ಹೌದು, ಇಂತಹದೊಂದು ವಿನೂತನ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ. ಇದರೊಂದಿಗೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಮುಂದಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ತೀರ್ಮಾನಿಸಿದೆ. ಸಾಮಾನ್ಯರಿಂದ ಬಿಬಿಎಂಪಿಗೆ ಬರುವ ದೂರುಗಳ ಪೈಕಿ ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ದೂರುಗಳ ಸಂಖ್ಯೆಯೇ ಹೆಚ್ಚಾಗಿದ್ದು, ಗುಂಡಿಗಳಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದರೊಂದಿಗೆ ಗುಂಡಿಗಳಿಂದಾಗಿ ಹಲವೆಡೆ ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ.

ನಗರದ ಎಲ್ಲ ರಸ್ತೆಗಳನ್ನು ಗುಂಡಿಮುಕ್ತವಾಗಿಸುವ ಉದ್ದೇಶದಿಂದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಈ ವಿನೂತನ ಪ್ರಯೋಗ ಮುಂದಾಗಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ದುರಸ್ತಿಯಾಗದ ರಸ್ತೆ ಗುಂಡಿಗಳಿಗೆ ಪಾಲಿಕೆಯ ಎಂಜಿನಿಯರ್‌ಗಳನ್ನು ಹೊಣೆಯಾಗಿಸಲು ಮುಂದಾಗಿದ್ದು, ಇದರ ಹಿನ್ನೆಲೆಯಲ್ಲಿ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಜತೆಗೆ ಈ ಕುರಿತು ಆಯುಕ್ತರು ಶೀಘ್ರದಲ್ಲಿಯೇ ಪಾಲಿಕೆಯ ಎಲ್ಲ ಕಾರ್ಯಪಾಲಕ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ'ಕ್ಕೆ ತಿಳಿಸಿವೆ. 

ಪಾಲಿಕೆಯ ವ್ಯಾಪ್ತಿಯಲ್ಲಿರುವ ರಸ್ತೆಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚುವುದು ಪಾಲಿಕೆಯ ಎಲ್ಲ ವಲಯಗಳಲ್ಲಿನ ಎಂಜಿನಿಯರ್‌ಗಳ ಆದ್ಯ ಕರ್ತವ್ಯವಾಗಿದ್ದು, ರಸ್ತೆಗುಂಡಿಗಳ ಬಗ್ಗೆ ಬೇಜವಾಬ್ದಾರಿ ತೋರಿಸುವ ಅಧಿಕಾರಿಗಳಿಗೆ ದಂಡ ವಿಧಿಸಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ‘ರಸ್ತೆ ಗುಂಡಿ ಗುರಿತಿಸಿ - ಶುಲ್ಕ ಪಡೆಯಿರಿ' ಎಂಬ ಯೋಜನೆ ರೂಪಿಸಲಾಗಿದೆ. ರಸ್ತೆಗುಂಡಿಗಳ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಪ್ರತಿ ಒಂದು ರಸ್ತೆ ಗುಂಡಿಗೆ ಪಾಲಿಕೆಯಿಂದ ರೂ.100 ಬಹುಮಾನ ನೀಡಲಾಗುತ್ತದೆ ಹಾಗೂ ಈ ಬಹುಮಾನದ ಮೊತ್ತವನ್ನು ಸಂಬಂಧಿಸಿದ ಅಧಿಕಾರಿಯ ವೇತನದಿಂದ ಕಡಿತಗೊಳಿಸಲು ತೀರ್ಮಾನಿಸಲಾಗಿದೆ.

ಸಿಎಂ ಅಸಮಾಧಾನ!: ಡಿಸೆಂಬರ್‌ ತಿಂಗಳಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಗರದ ರಸ್ತೆಗಳಲ್ಲಿನ ಗುಂಡಿ ಸಮಸ್ಯೆಯ ಬಗ್ಗೆ ಪ್ರಸ್ತಾಪವಾಗಿದ್ದು, ರಸ್ತೆಗುಂಡಿ ಮುಚ್ಚುವಲ್ಲಿ ಬಿಬಿಎಂಪಿ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಜನವರಿ 31ರೊಳಗಾಗಿ ನಗರದಲ್ಲಿನ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಆಯಾ ವಲಯದ ಎಂಜಿನಿಯರ್‌ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶಿಸಿದ್ದಾರೆ.

ದಂಡ ವಿಧಿಸಲು ಕಾರಣವೇನು?: ಬಿಬಿಎಂಪಿಯಿಂದ ಈಗಾಗಲೇ ಪ್ರತಿ ವಾರ್ಡ್‌ಗೆ ರಸ್ತೆ ಗುಂಡಿ ಮುಚ್ಚಲು ಲಕ್ಷಾಂತರ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೂ ಅಧಿಕಾರಿಗಳು ಗುಂಡಿ ಮುಚ್ಚಲು ಮುಂದಾಗಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆದು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೂ ದುರಸ್ತಿಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಹೀಗಾಗಿ ಕೊನೆಯ ಪ್ರಯತ್ನವೆಂಬಂತೆ ಪಾಲಿಕೆ ಎಂಜಿನಿಯರ್‌'ಗಳಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ.

ಬಹುಮಾನ ಪಡೆಯುವುದು ಹೇಗೆ?: ಸಾರ್ವಜನಿಕರು ತಾವು ಕಂಡ ರಸ್ತೆ ಗುಂಡಿಗಳ ಚಿತ್ರ ತೆಗೆದು ಬಿಬಿಎಂಪಿ ವೆಬ್‌'ಸೈಟ್‌'ನಲ್ಲಿ ಅಪ್‌'ಲೋಡ್‌ ಮಾಡಬೇಕು. ಅದಾದ 48 ಗಂಟೆಗಳ ನಂತರ ಮತ್ತೆ ಅದೇ ಜಾಗದಲ್ಲಿ ಗುಂಡಿ ಇರುವ ಅಥವಾ ಮುಚ್ಚಿರುವ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಬೇಕು. ಹೀಗೆ ಎರಡು ಬಾರಿ ಪಾಲಿಕೆಗೆ ಫೋಟೋ ಮಾಹಿತಿ ನೀಡುವ ವ್ಯಕ್ತಿಗೆ ಪ್ರತಿ ಒಂದು ಗುಂಡಿಗೆ ರೂ.100 ನೀಡಲಾಗುತ್ತದೆ. ಜತೆಗೆ ಸಾರ್ವಜನಿಕರು ದೂರು ನೀಡಿದ 48 ಗಂಟೆಯೊಳಗೆ ಗುಂಡಿ ಮುಚ್ಚಲಾಗುತ್ತದೆ. ಒಂದೊಮ್ಮೆ ಒಂದೇ ವಾರ್ಡ್‌'ನಲ್ಲಿ 10 ರಸ್ತೆಗುಂಡಿಗಳು ಇರುವ ಬಗ್ಗೆ ದೂರು ಬಂದರೆ ಆ ವಾರ್ಡ್‌'ನ ಸಹಾಯಕ ಎಂಜಿನಿಯರ್‌ ವಿರುದ್ಧ ಆಯುಕ್ತರು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ.

ಸದ್ಯ ಕೇಂದ್ರ ಭಾಗದಲ್ಲಿ ಪ್ರಯೋಗ
‘ರಸ್ತೆ ಗುಂಡಿ ಗುರುತಿಸಿ - ಇನಾಮು ಪಡೆಯಿರಿ' ಯೋಜನೆ ಫೆ.15ರಿಂದ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಮೊದಲು ಬಿಬಿಎಂಪಿಯ ಕೇಂದ್ರ ಭಾಗದ ಬಡಾವಣೆಗಳಲ್ಲಿ (ಕೋರ್‌ ಪ್ರದೇಶ) ಯೋಜನೆ ಜಾರಿಗೆ ತರಲು ಅಧಿಕಾರಿಗಳು ಉದ್ದೇಶಿಸಿದ್ದು, ಯೋಜನೆ ಯಶಸ್ವಿಯಾದ ನಂತರ ಪಾಲಿಕೆಯ ಎಲ್ಲ ವಲಯಗಳಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಒಂದು ಗುಂಡಿಗೆ ಕಡಿತವಾಗುವ ಹಣ
ವಾರ್ಡ್ ಸಹಾಯಕ ಎಂಜಿನಿಯರ್: 70 ರೂ.
ಸಹಾಯಕ ಕಾರ್ಯಪಾಲಕ ಎಂಜಿನಿಯರ್: 15 ರೂ.
ಕಾರ್ಯಪಾಲಕ ಎಂಜಿನಿಯರ್: 10 ರೂ.
ಮುಖ್ಯ ಎಂಜಿನಿಯರ್: 05 ರೂ.

ನಗರವನ್ನು ರಸ್ತೆ ಗುಂಡಿ ಮುಕ್ತವಾಗಿಸುವ ದೃಷ್ಟಿಯಿಂದ ಬಿಬಿಎಂಪಿ ಆಯುಕ್ತರು ಯೋಜನೆ ಪರಿಚಯಿಸುತ್ತಿದ್ದಾರೆ. ಇದರಿಂದ ನಗರದ ನಾಗರಿಕರ ಸಂಚಾರಕ್ಕೆ ಅನುಕೂಲವಾಗುವ ಕಾರಣ ಯೋಜನೆಗೆ ಸಮ್ಮತಿಸಲಾಗಿದೆ. ಶೀಘ್ರವೇ ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು
- ಜಿ ಪದ್ಮಾವತಿ ಬಿಬಿಎಂಪಿ ಮೇಯರ್‌

(epaper.kannadaprabha.in)

click me!