
ಹುಬ್ಬಳ್ಳಿ(ಅ.17): ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಇಲ್ಲಿನ ಕುಂದಗೋಳ ರೈಲು ನಿಲ್ದಾಣದ ಬಳಿ ಕೈಕೊಟ್ಟ ಪರಿಣಾಮ ಬೆಂಗಳೂರಿನಿಂದ ಬರುತ್ತಿದ್ದ ಜನಶತಾಬ್ದಿ ರೈಲಿನ ಎಂಜಿನ್ ಅನ್ನು ಅಳವಡಿಸಿ ಮುಂದೆ ಸಂಚರಿಸುವಂತೆ ಮಾಡಲಾಯಿತು. ಇದರಿಂದಾಗಿ ಅತ್ತ ಜನಶತಾಬ್ದಿ ರೈಲು 3 ಗಂಟೆ ತಡವಾಗಿ ಚಲಿಸಿದರೆ, ಚಾಲುಕ್ಯ ಎಕ್ಸ್‌ಪ್ರೆಸ್ ಕೂಡ 2 ಗಂಟೆ ತಡವಾಗಿ ಹಾವೇರಿ ತಲುಪಿದೆ. ಇದರಿಂದ ಎರಡು ರೈಲುಗಳಲ್ಲಿನ ಪ್ರಯಾಣಿಕರು ಪರದಾಡಿದರು.
ದಾದರ- ತಿರುನಲ್ವೇಲಿ (ಚಾಲುಕ್ಯ ಎಕ್ಸ್‌ಪ್ರೆಸ್- ಟ್ರೈನ್ ಸಂಖ್ಯೆ-11021) ಮಧ್ಯಾಹ್ನ 12.30ಕ್ಕೆ ಸರಿಯಾಗಿ ಹುಬ್ಬಳ್ಳಿಯಿಂದ ಹೊರಟಿದೆ. ಆದರೆ, ಕುಂದಗೋಳ ರೈಲು ನಿಲ್ದಾಣಕ್ಕೆ 2 ಕಿಮೀ ದೂರ ಇರುವಾಗಲೇ ಎಂಜಿನ್ ಕೈಕೊಟ್ಟು ಅಲ್ಲೇ ನಿಂತಿದೆ. ಅದೇ ವೇಳೆ ಅತ್ತ ಕಡೆಯಿಂದ ಬೆಂಗಳೂರು- ಹುಬ್ಬಳ್ಳಿ ಜನಶತಾಬ್ದಿ (ಟ್ರೈನ್ ಸಂಖ್ಯೆ- 12079) ಕುಂದಗೋಳ ನಿಲ್ದಾಣ ತಲುಪಿದೆ. ಚಾಲುಕ್ಯ ಎಕ್ಸ್‌ಪ್ರೆಸ್ ಎಂಜಿನ್ ಕೈಕೊಟ್ಟಿದ್ದರಿಂದ ಅತ್ತ ಕಡೆಯಿಂದ ಜನಶತಾಬ್ದಿ ರೈಲು ಬರಲು ಜಾಗವಿಲ್ಲದಂತಾಗಿದೆ. ಕೊನೆಗೆ ಜನಶತಾಬ್ದಿಯ ಎಂಜಿನ್‌ನ್ನು ಚಾಲುಕ್ಯ ಎಕ್ಸ್‌ಪ್ರೆಸ್‌ಗೆ ಅಳವಡಿಸಿ ಅದನ್ನು ಮುಂದೆ ಸಾಗಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ, ಜನಶತಾಬ್ದಿಗೆ ಎಂಜಿನ್ ಇಲ್ಲದಂತಾಗಿದೆ. ಸುಮಾರು ಎರಡೂವರೆ ತಾಸು ಕುಂದಗೋಳ ನಿಲ್ದಾಣದಲ್ಲೇ ಬೋಗಿಗಳೆಲ್ಲ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರಿಗೆ ಏನಾಗುತ್ತಿದೆ. ರೈಲು ಇಲ್ಲಿ ನಿಲ್ಲಲು ಕಾರಣ ಏನು ಎಂಬುದು ಗೊತ್ತಾಗದೇ ಪರದಾಡಿದರು. ಕೊನೆಗೆ 4.20ಕ್ಕೆ ಹುಬ್ಬಳ್ಳಿಯ ಲೋಕೋ ಶೆಡ್‌ನಿಂದ ಬೇರೆ ಎಂಜಿನ್ ತರಿಸಿ ಜನಶತಾಬ್ದಿಗೆ ಅಳವಡಿಸಲಾಯಿತು. 4.20ಕ್ಕೆ ರೈಲು ಅಲ್ಲಿಂದ ಹೊರಟು ಹುಬ್ಬಳ್ಳಿ ತಲುಪಿದಾಗ ಬರೋಬ್ಬರಿ 4.50 ಆಗಿತ್ತು. ಹಾಗೆ ನೋಡಿದರೆ ರೈಲು 1.45ಕ್ಕೆ ಹುಬ್ಬಳ್ಳಿಗೆ ಬರಬೇಕಿತ್ತು. 3 ಗಂಟೆ 5 ನಿಮಿಷ ತಡವಾಗಿ ತಲುಪಿದಂತಾಗಿದೆ.
ಇನ್ನು 2.20ಕ್ಕೆ ಮರಳಿ ಬೆಂಗಳೂರು ಹೊರಡಬೇಕಿದ್ದ ಜನಶತಾಬ್ದಿ ಇಲ್ಲಿಂದ ಹೊರಟ್ಟಿದ್ದು 5.15ಕ್ಕೆ. ಇದರಿಂದ ವಾಪಸ್ ಹೋಗುವಾಗಲೂ 2.55 ಗಂಟೆ ತಡವಾಗಿ ಹೊರಟಿದೆ. ಹೀಗಾಗಿ, ಬೆಂಗಳೂರು ತಲುಪುವುದು ಕೂಡ ತಡವಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ಅತ್ತ ಚಾಲುಕ್ಯ ಎಕ್ಸ್‌ಪ್ರೆಸ್ ಕೂಡ ಹಾವೇರಿ ನಿಲ್ದಾಣವನ್ನು 1.43ಕ್ಕೆ ತಲುಪಬೇಕಿತ್ತು. ಆದರೆ ತಲುಪಿದ್ದು 3.50ಕ್ಕೆ ಅಂದರೆ 2 ಗಂಟೆ 7 ನಿಮಿಷ ವಿಳಂಬವಾಗಿದೆ.