ಮಳೆ ನಿಲ್ತಿಲ್ಲ, ಬಿತ್ತನೆ ಆಗ್ತಿಲ್ಲ: ಸಂಕಷ್ಟದಲ್ಲಿ ಅನ್ನದಾತ

By Web DeskFirst Published Oct 16, 2019, 7:55 AM IST
Highlights

ಧಾರವಾಡ ಜಿಲ್ಲೆಯಲ್ಲಿ ಮಾತ್ರ ಬಿತ್ತನೆ ಬೀಜ ಕೇಳುವವರೇ ಇಲ್ಲದಂತಾಗಿದೆ| ಕಳೆದೆರಡು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದೆ| ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಬಿತ್ತನೆ ಬೀಜ ಪಡೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ| ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರಿಗಾಗಿ ರೈತರಿಗೆ ವಿತರಿಸಲು ತಂದಿರಿಸಿದ ಬೀಜಗಳು ಹಾಗೆ ಉಳಿದಿವೆ|

ಮಯೂರ ಹೆಗಡೆ

ಹುಬ್ಬಳ್ಳಿ[ಅ16.]: ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಬೀಜಕ್ಕಾಗಿ ನೂಕು ನುಗ್ಗಲಾಗುತ್ತಿದ್ದು ಇದನ್ನು ನಿಯಂತ್ರಿಸಲು ಪೊಲೀಸರು ಕಪಾಳ ಮೋಕ್ಷ ಮಾಡಿದ್ದುಂಟು. ಅಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ಎಷ್ಟೊಂದು ಪರದಾಡುತ್ತಿದ್ದಾರೆ ಎಂಬುದು ಈ ಘಟನೆಯಿಂದಲೇ ಗೊತ್ತಾಗುತ್ತೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಮಾತ್ರ ಬಿತ್ತನೆ ಬೀಜ ಕೇಳುವವರೇ ಇಲ್ಲದಂತಾಗಿದೆ.

ಹೌದು, ಕಳೆದೆರಡು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದೆ. ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಬಿತ್ತನೆ ಬೀಜ ಪಡೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂಗಾರು ಮಳೆ, ನೆರೆಗೆ, ಬೆಳೆ ಕೊಳೆತು ಕಣ್ಣೆದುರೆ ಕೋಟ್ಯಂತರ ರು. ಕಳೆದುಕೊಂಡ ರೈತರು ಈಗ ಹಿಂಗಾರು ಬಿತ್ತನೆ ವಿಳಂಬವಾಗುವ ಆತಂಕದಲ್ಲಿದ್ದಾರೆ. ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಪೂರಕವಾಗಿ ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಗೆ ಆದ್ಯತೆ ನೀಡಿದೆ. ಆದರೆ, ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ.

ಭೂಮಿಯನ್ನು ರಂಟೆ ಹೊಡೆಯುವುದು, ಕಳೆ ತೆಗೆಯುವ ಕೆಲಸವನ್ನೂ ಮಾಡಿಕೊಳ್ಳಲಾಗುತ್ತಿಲ್ಲ. ಒಂದು ವೇಳೆ ಈಗ ಮಳೆ ನಿಂತರೂ ಇನ್ನೊಂದು ವಾರ ಕಾಲ ಬಿತ್ತನೆ ಮಾಡಲು ಆಗದ ಪರಿಸ್ಥಿತಿ ಇದೆ. ಹೀಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರಿಗಾಗಿ ರೈತರಿಗೆ ವಿತರಿಸಲು ತಂದಿರಿಸಿದ ಬೀಜಗಳು ಹಾಗೆ ಉಳಿದಿವೆ.

ಜಿಲ್ಲೆಯಲ್ಲಿ ಧಾರವಾಡ ಹಾಗೂ ನವಲಗುಂದ ಪ್ರಮುಖ ಕೃಷಿ ಕ್ಷೇತ್ರ. ಕಡಲೆ ವಿಳಂಬವಾಗಿಯೇ ಬಿತ್ತನೆಯಾಗುವುದರಿಂದ ಹೆಚ್ಚಿನ ಸಮಸ್ಯೆಯಿಲ್ಲ. ಇನ್ನು 10-12 ದಿನ ಮಾತ್ರ ಮಳೆಯಾಗುವ ಸಾಧ್ಯತೆಯಿದ್ದು, ಬಳಿಕ ಬಿತ್ತನೆ ಆರಂಭವಾಗಿ ತೀವ್ರಗತಿಯಲ್ಲಿ ನಡೆದರೆ ಸಮಸ್ಯೆ ಆಗುವುದಿಲ್ಲ. ಆದರೆ, ಮುಂದೆಯೂ ಇದೇ ವಾತಾವರಣ ಮುಂದುವರೆದರೆ ತೊಂದರೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ ಸಹಾಯಕ ಕೃಷಿ ನಿರ್ದೇಶಕ ಆರ್‌.ಎ. ಅಣಗೌಡರ ಮಾತನಾಡಿ, ಸದ್ಯ ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದು, ಬಿತ್ತನೆ ಮಾಡಿದಲ್ಲಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಈಗ ಮಳೆ ನಿಂತರೂ ಒಂದು ವಾರವಾದರೂ ಭೂಮಿ ಹದಕ್ಕೆ ಸಮಯ ಬೇಕು. ಬಳಿಕವಷ್ಟೆ ಬಿತ್ತನೆ ಮಾಡಲು ಆಗುತ್ತದೆ. ಇದನ್ನೇ ರೈತರಿಗೂ ಹೇಳುತ್ತಿದ್ದೇವೆ ಎಂದರು.

ಜಂಟಿ ಕೃಷಿ ನಿರ್ದೇಶಕ ಅಬೀದ್‌ ಎಸ್‌.ಎಸ್‌., ಕಳೆದ ವರ್ಷಕ್ಕೆ ಹೋಲಿಸಿದರೆ ಈ ವೇಳೆಗೆ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿ ಬೀಜ ಖರೀದಿಸುವ ರೈತರ ಸಂಖ್ಯೆ ಕಡಿಮೆ ಇದೆ. ಆದರೆ, ಕಡಲೆ ಸೇರಿ ಇನ್ನಿತರ ಬೀಜಗಳನ್ನು ಕೊಂಡೊಯ್ದು ದಾಸ್ತಾನು ಮಾಡುತ್ತಿದ್ದಾರೆ ಎಂದರು.

ಹಿಂಗಾರಿನಲ್ಲಿ ಜೋಳ, ಗೋದಿ, ಕಡಲೆ, ಕುಸುಬೆ ಜಿಲ್ಲೆಯ ಪ್ರಮುಖ ಬೆಳೆಗಳು. ರೈತರು ವರ್ಷವಿಡಿ ಉಣ್ಣಲು ಜೋಳ, ಗೋದಿ, ಶೇಂಗಾ, ಗೋವಿನಜೋಳ, ಅಲಸಂದಿ ಬೆಳೆ ಅವಲಂಬಿಸಿದ್ದಾರೆ. ಜೊತೆಗೆ ರೈತರ ಜೀವನಾಡಿಗಳಾದ ಜಾನುವಾರುಗಳಿಗೆ ಮೇವಿಗಾಗಿಯೂ ಎರಡು ಬೆಳೆ ಬೆಳೆಯುತ್ತಾರೆ. ಕಡಲೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಳೆದ 5-6 ವರ್ಷಗಳಿಂದ ಬಹುಪಾಲು ರೈತರು ಕಡಲೆ ಬೆಳೆ ಅವಲಂಬಿಸಿದ್ದು, ಪ್ರಸಕ್ತ ಹಿಂಗಾರಿನಲ್ಲೂ ಬಿತ್ತನೆ ಪ್ರಮಾಣ ನಿರೀಕ್ಷೆ ಮೀರುವ ಅಂದಾಜಿದೆ.

ಸೆಪ್ಟೆಂಬರ್‌ ಅಂತ್ಯಕ್ಕೆ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪ್ರಮುಖ ರಸಗೊಬ್ಬರ ಮಾರಾಟಗಾರರಲ್ಲಿ ಅಗತ್ಯ ದಾಸ್ತಾನು ಇದೆ. ಹಿಂಗಾರು ಬೆಳೆಗಳಿಗೆ ಮುಖ್ಯವಾಗಿ ಯೂರಿಯಾ, ಡಿಎಪಿ, ಎಂಒಪಿ ಗೊಬ್ಬರ ಬೇಕು. ಜಿಲ್ಲೆಯಾದ್ಯಂತ 21,000 ಟನ್‌ ಯೂರಿಯಾ ಗೊಬ್ಬರದ ಅಗತ್ಯತೆಯ ಅಂದಾಜಿತ್ತು. ಈಗಾಗಲೇ 18,500 ಟನ್‌ ಪೂರೈಕೆಯಾಗಿದ್ದು, ಇನ್ನೂ 1,600 ಟನ್‌ ಯೂರಿಯಾ ದಾಸ್ತಾನಿದೆ. 24,715 ಟನ್‌ ಡಿಎಪಿ ಗೊಬ್ಬರದ ಬೇಡಿಕೆ ಇತ್ತು. 19,920 ಟನ್‌ ಪೂರೈಕೆಯಾಗಿ 5,659 ಟನ್‌ ಸಂಗ್ರಹವಿದೆ. ಅದೇರೀತಿ ಎಂಒಪಿ 7,215 ಟನ್‌ ಬೇಡಿಕೆ ಇದ್ದು, 6,450 ಟನ್‌ ಪೂರೈಕೆಯಾಗಿ 1,227 ಟನ್‌ ದಾಸ್ತಾನಿದೆ.

ಬೇಡಿಕೆ ಸಲ್ಲಿಕೆ

ಹಿಂಗಾರು ಹಂಗಾಮಿಗೆ ಅಗತ್ಯ ರಸಗೊಬ್ಬರ ವಿವರವನ್ನು ಕೃಷಿ ಇಲಾಖೆ ಅಧಿಕಾರಿಗಳು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಕ್ಟೋಬರ್‌ನಿಂದ ಮಾಚ್‌ರ್‍ವರೆಗೆ 16,308 ಟನ್‌ ಯೂರಿಯಾ, 9,262 ಟನ್‌ ಡಿಎಪಿ, 12,556 ಟನ್‌ ಎಂಒಪಿ ಗೊಬ್ಬರದ ಅಗತ್ಯತೆ ಅಂದಾಜಿಸಲಾಗಿದೆ. ಮಾರುಕಟ್ಟೆಹಾಗೂ ಸಹಕಾರ ಸಂಘಗಳಲ್ಲಿ ಇನ್ನೂ ಗೊಬ್ಬರದ ದಾಸ್ತಾನಿದ್ದು, ಮುಂದಿನ ದಿನಗಳ ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಹಂತಹಂತವಾಗಿ ಗೊಬ್ಬರ ಪೂರೈಕೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಡಲೆ ಬಿತ್ತನೆ ಹೆಚ್ಚಳ

ಈ ಬಾರಿ ಕಡಲೆ ಬೆಳೆ ಬಿತ್ತನೆ ಕ್ಷೇತ್ರ ಹೆಚ್ಚಳವಾಗುವ ನಿರೀಕ್ಷೆ ಇದೆ. ನವೆಂಬರ್‌ ಅಂತ್ಯದವರೆಗೆ ಬಿತ್ತನೆಗೆ ಕಾಲಾವಕಾಶವಿದೆ. ಮುಂಗಾರು ಹಂಗಾಮಿನ ಶೇಂಗಾ, ಸೋಯಾಬೀನ್‌, ಆಲೂಗಡ್ಡೆ, ಹೆಸರು, ಉದ್ದು, ಇತರ ಬೆಳೆಗಳ ಒಕ್ಕಣೆಯಲ್ಲಿ ನಿರತರಾಗಿದ್ದಾರೆ. ಮಳೆಗೆ ಬೆಳೆ ಕೊಚ್ಚಿ ಹೋದ ರೈತರು ಜಮೀನನ್ನು ಸಜ್ಜುಗೊಳಿಸುತ್ತಿದ್ದಾರೆ. ಈ ಬಾರಿ 1,93,000 ಹೆಕ್ಟೇರ್‌ ಭೂಮಿ ಬಿತ್ತನೆಯಾಗುವ ನಿರೀಕ್ಷೆ ಇದೆ. ಈ ಬಾರಿ ಒಟ್ಟೂ26694 ಕ್ವಿಂ. ಬೀಜ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಈ ಪೈಕಿ ಕಡಲೆ ಬೆಳೆಯೇ ಪ್ರಧಾನ ಬೆಳೆಯಾಗುವ ಸಾಧ್ಯತೆ ಇದ್ದು, 16,000 ಕ್ವಿಂ. ಕಡಲೆ ಬೀಜ ಬೇಕಾಗುವ ನಿರೀಕ್ಷೆ ಇದೆ.

ತಾಲೂಕು ಬಿತ್ತನೆ ಪ್ರದೇಶ (ಹೆ)

ಧಾರವಾಡ 44074
ಹುಬ್ಬಳ್ಳಿ 22882
ಕಲಘಟಗಿ 11844
ಕುಂದಗೋಳ 36445
ನವಲಗುಂದ 78481
ಒಟ್ಟು 193727

ಈ ಬಗ್ಗೆ ಮಾತನಾಡಿದ ಧಾರವಾಡದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್‌ ಎಸ್‌.ಎಸ್‌ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆಯತ್ತ ಮುಂದಾಗುತ್ತಿರುವವರ ಈಗ ಸಂಖ್ಯೆ ಕಡಿಮೆ ಇದೆ. ನವೆಂಬರ್‌ 15ವರೆಗೂ ಬಿತ್ತನೆ ವಿಳಂಬವಾದರೆ ಹಿಂಗಾರು ಬೆಳೆ ತೆಗೆಯುವುದು ಸಮಸ್ಯೆಯಾಗಲಿದೆ. ಆದರೆ, ಇನ್ನೆರಡು ವಾರದಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದ್ದಾರೆ. 

ಈಗ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೂ ಮತ್ತೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಳೆ ನಿಲ್ಲಲಿ, ಬಳಿಕ ಬಿತ್ತನೆ ಮಾಡುತ್ತೇವೆ ಎಂದು ಶಿರಗುಪ್ಪಿ ರೈತ ಯಲ್ಲಪ್ಪ ಅವರು ತಿಳಿಸಿದ್ದಾರೆ. 

click me!