'ಶಾಸಕ ಉಮೇಶ ಕತ್ತಿಗೆ ಪೂರ್ಣಸತ್ಯ ಗೊತ್ತೆ ಇಲ್ಲ'

Published : Oct 19, 2019, 10:41 AM IST
'ಶಾಸಕ ಉಮೇಶ ಕತ್ತಿಗೆ ಪೂರ್ಣಸತ್ಯ ಗೊತ್ತೆ ಇಲ್ಲ'

ಸಾರಾಂಶ

ಮಹಾರಾಷ್ಟ್ರ ಚುನಾವಣೆ ವೇಳೆ ಯಡಿಯೂರಪ್ಪ ನೀರು ಬಿಡುವುದಾಗಿ ನೀಡಿರುವ ಹೇಳಿಕೆ ಅಪಾರ್ಥ ಕಲ್ಪಿಸಿಕೊಳ್ಳುವುದು ಬೇಡ ಎಂದ ಜಗದೀಶ ಶೆಟ್ಟರ್‌| ಶಾಸಕ ಉಮೇಶ ಕತ್ತಿ ಅವರಿಗೆ ಈ ಬಗ್ಗೆ ಅರ್ಧಸತ್ಯ ಮಾತ್ರ ಗೊತ್ತಿದೆ| ಮಹಾರಾಷ್ಟ್ರದವರು ಬರ ಹಾಗೂ ಬೇಸಿಗೆ ವೇಳೆಯಲ್ಲಿ 4 ಟಿಎಂಸಿ ನೀರನ್ನು ಕೋಯ್ನಾ ಜಲಾಶಯದಿಂದ ಬಿಡುತ್ತಾರೆ| ಅದಕ್ಕೆ ನಾವು ದುಡ್ಡು ಕೊಡುತ್ತೇವೆ| ಅಲ್ಲಿನ ಕೆಲ ಪ್ರದೇಶಗಳಿಗೆ ಕರ್ನಾಟಕದಿಂದ ನೀರು ಬಿಡಲಾಗುತ್ತಿದೆ| ಕಳೆದ ಎರಡ್ಮೂರು ವರ್ಷಗಳಿಂದ ಇದು ಸರಿಯಾಗಿ ನಡೆಯುತ್ತಿರಲಿಲ್ಲ| 

ಹುಬ್ಬಳ್ಳಿ(ಅ.19): ಮಹಾರಾಷ್ಟ್ರ ಚುನಾವಣೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ನೀರು ಬಿಡುವುದಾಗಿ ನೀಡಿರುವ ಹೇಳಿಕೆ ಸಂಬಂಧ ಅಪಾರ್ಥ ಕಲ್ಪಿಸಿಕೊಳ್ಳುವುದು ಶಾಸಕ ಉಮೇಶ ಕತ್ತಿ ಅವರಿಗೆ ಈ ಬಗ್ಗೆ ಅರ್ಧಸತ್ಯ ಮಾತ್ರ ಗೊತ್ತಿದೆ. ಅದಕ್ಕೆ ವಿರೋಧ ಮಾಡಿದ್ದಾರಷ್ಟೇ ಎಂದು ಸಚಿವ ಜಗದೀಶ ಶೆಟ್ಟರ್‌ ಅವರು ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದವರು ಬರ ಹಾಗೂ ಬೇಸಿಗೆ ವೇಳೆಯಲ್ಲಿ 4 ಟಿಎಂಸಿ ನೀರನ್ನು ಕೋಯ್ನಾ ಜಲಾಶಯದಿಂದ ಬಿಡುತ್ತಾರೆ. ಅದಕ್ಕೆ ನಾವು ದುಡ್ಡು ಕೊಡುತ್ತೇವೆ. ಅಲ್ಲಿನ ಕೆಲ ಪ್ರದೇಶಗಳಿಗೆ ಕರ್ನಾಟಕದಿಂದ ನೀರು ಬಿಡಲಾಗುತ್ತಿದೆ. ಇದು ಪದ್ಧತಿ. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಇದು ಸರಿಯಾಗಿ ನಡೆಯುತ್ತಿರಲಿಲ್ಲ. ಅದರಂತೆ ಅಲ್ಲಿ ಪ್ರಚಾರಕ್ಕೆ ಹೋದಾಗ ಅಲ್ಲಿನ ಮತದಾರರು ಕೇಳಿದ್ದಾರೆ. ಆಗಿರುವ ಸಮಸ್ಯೆಯನ್ನು ಬಗೆಹರಿಸಲು ತಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರಷ್ಟೇ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀರು ಬಿಡುವುದರ ಬಗ್ಗೆ ಮಾಜಿ ಸಚಿವ ಉಮೇಶ ಕತ್ತಿ ವಿರೋಧ ವಿಚಾರ ವ್ಯಕ್ತಪಡಿಸಿದ್ದಕ್ಕೆ ಅವರಿಗೆ ಪೂರ್ಣ ಸತ್ಯಗೊತ್ತಿಲ್ಲ. ಹೀಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಯಾವ ಕಾಲದಲ್ಲಿದ್ದೇವೆ:

ಹಿರಿಯ ಮುಖಂಡ ಎಚ್‌.ವಿಶ್ವನಾಥ ಹಾಗೂ ಸಾ.ರಾ. ಮಹೇಶ ಆಣೆ ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬುದನ್ನು ಇವರಿಬ್ಬರೂ ಅರ್ಥ ಮಾಡಿಕೊಳ್ಳಬೇಕು. ಆಣೆ ಪ್ರಮಾಣ ವ್ಯವಸ್ಥೆಗಳೆಲ್ಲ ಹೋಗಿ ಬಹಳ ದಿನ ಕಳೆದಿದೆ. ಮತ್ತೆ ಆಣೆ ಪ್ರಮಾಣದ ಮಾತು ಬಂದರೆ ಸಾವಿರ ವರ್ಷ ಹಿಂದಕ್ಕೆ ಹೋಗಿದ್ದೇವೆ ಎಂದರ್ಥ. ಇಂಥದ್ದನ್ನೆಲ್ಲ ಇಬ್ಬರೂ ಬಿಟ್ಟು, ತಮ್ಮ ಆತ್ಮಕ್ಕೆ ಯಾವುದು ಸರಿ ಅನ್ನಿಸುತ್ತದೆಯೋ ಹಾಗೆ ನಡೆದುಕೊಳ್ಳಬೇಕು ಎಂದರು.

ಮಹದಾಯಿ ಬಗೆಹರಿಸ್ತೇವಿ:

ಮಹದಾಯಿ ವಿಷಯವಾಗಿ ಬೆಂಗಳೂರಲ್ಲಿ ರೈತರು ಹೋರಾಟ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹದಾಯಿ ನೋಟಿಫಿಕೇಶನ್‌ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ಸಿನವರು ಪ್ರತಿ ಸಲ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಾರೆ. ಪ್ರತಿಹಂತದಲ್ಲೂ ಅಡ್ಡಗಾಲು ಹಾಕುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಯಾರೋ ರಾಜಕಾರಣ ಮಾಡಬಾರದು ಇದು ಸರಿಯಲ್ಲ. ಗೋವಾ ಸಿಎಂ ಜೊತೆಗೆ ಮಾತನಾಡುತ್ತೇವೆ ಎಂದರೆ ಅಲ್ಲಿನ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಒಂದು ಬಾರಿ ಅವಾರ್ಡ್‌ ಆದ ಮೇಲೆ ನೋಟಿಫಿಕೇಶನ್‌ ಆಗಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ. ಶೀಘ್ರದಲ್ಲೇ ನೋಟಿಫಿಕೇಶನ್‌ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಆರ್ಥಿಕ ಹಿಂಜರಿತ:

ಕೆಲ ಕ್ಷೇತ್ರಗಳಲ್ಲಿ ಆರ್ಥಿಕ ಹಿಂಜರಿತ ಆಗಿದೆ. ಆಟೋಮೋಬೈಲ್‌, ರಿಯಲ್‌ ಎಸ್ಟೇಟ್‌ ಸೇರಿದಂತೆ ಕೆಲವೆಡೆ ಆರ್ಥಿಕ ಹಿಂಜರಿತದಿಂದ ತೊಂದರೆಯಾಗಿದೆ. ಆದರೆ ಎಲ್ಲ ಉದ್ಯಮದಲ್ಲಿ ಆರ್ಥಿಕ ಹಿಂಜರಿತ ಪರಿಣಾಮ ಆಗಿಲ್ಲ. ಕೆಲವೆಡೆ ಕೈಗಾರಿಕೆಗಳು ವೈಯಕ್ತಿಕ ಸಮಸ್ಯೆಗಳಿಂದ ತೊಂದರೆಯಾಗಿವೆ ಎಂದರು. ಆಗಿರುವ ಆರ್ಥಿಕ ಹಿಂಜರಿತದಿಂದ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದ ಅವರು, ಆರ್ಥಿಕ ಹಿಂಜರಿತ ಸಮಸ್ಯೆ ತಾತ್ಕಾಲಿಕ ಮಾತ್ರ ಎಂದರು.

ನನಗೆ ಗೊತ್ತಿಲ್ಲ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಜಿಪಂ ಸಭೆಯಲ್ಲಿ ಕುಳಿತ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.

ಸಿದ್ದುಗೆ ತಿರುಗೇಟು

ವೀರ ಸಾವರಕರ್‌ಗೆ ಭಾರತ ರತ್ನ ನೀಡುವ ಪ್ರಸ್ತಾಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ ಜಗದೀಶ ಶೆಟ್ಟರ್‌, ಸಿದ್ದರಾಮಯ್ಯ ಮೊದಲು ಇತಿಹಾಸ ಓದಲಿ ಎಂದು ಹೇಳಿದ್ದಾರೆ. 
ಎಲ್ಲರಿಗೂ ಧಮ್ಕಿ ಹಾಕುತ್ತಾ ಸಿದ್ದರಾಮಯ್ಯ ಇಲ್ಲಿ ಆರಾಮವಾಗಿ ಇದ್ದಾರೆ. ವಿರೋಧ ಪಕ್ಷದ ನಾಯಕರಾಗಿದ್ದು ಕೂಡ ಬೆದರಿಕೆ ಮೂಲಕವೇ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ನೀವು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿಲ್ಲವೆಂದರೆ ನಾನು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅವರು ಇವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
 

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ