
ಹುಬ್ಬಳ್ಳಿ(ಅ.19): ಮಹಾನಗರದಲ್ಲಿ 150 ರಿಂದ 160 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಜಗದೀಶ ಶೆಟ್ಟರ್ ಅವರು ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರದಲ್ಲಿ 14ನೇ ಹಣಕಾಸು ಯೋಜನೆ, ನಗರೋತ್ಥಾನ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯಲಿವೆ. ಜನವರಿ ಅಥವಾ ಫೆಬ್ರವರಿಯೊಳಗಾಗಿ ನಗರದಲ್ಲಿನ ರಸ್ತೆಗಳ ಚಿತ್ರಣವೇ ಬದಲಿಯಾಗಲಿದೆ. ಇದಕ್ಕೆ ಈಗಾಗಲೇ 14ನೇ ಹಣಕಾಸು ಯೋಜನೆಯಲ್ಲಿ 60 ರಸ್ತೆ ಕಾಮಗಾರಿಗಳಲ್ಲಿ 30 ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. 30 ರಸ್ತೆ ಕಾಮಗಾರಿಗಳ ಟೆಂಡರ್ ಶೀಘ್ರದಲ್ಲೇ ಕರೆಯಲಾಗುವುದು ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿರಂತರ ಮಳೆ ಬೀಳುತ್ತಿರುವುದರಿಂದ ರಸ್ತೆಯಲ್ಲಿನ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ಮಳೆ ಸಂಪೂರ್ಣ ಸ್ಥಗಿತಗೊಂಡ ಬಳಿಕ ರಸ್ತೆಗಳ ನಿರ್ಮಾಣ ಕಾರ್ಯ ನಡೆಸಲಾಗುವುದು. ಮಳೆ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವುದನ್ನು ಹೊರತುಪಡಿಸಿ ಅನ್ಯ ಮಾರ್ಗವಿಲ್ಲ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಅತಿಕ್ರಮಣ ಸಾಕಷ್ಟು ಅಡಚಣೆಯನ್ನುಂಟು ಮಾಡಿದೆ. ಈ ಹಿಂದಿನ ಪಾಲಿಕೆಯ ಅಧಿಕಾರಿಯೊಬ್ಬರು ಮಾಡಿದ ಅವಾಂತರದಿಂದಾಗಿ ಇದೀಗ ಅತಿಕ್ರಮಣ ತೆರವು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿದೆ. ಒತ್ತುವರಿಗೆ ತೆರವಿಗೆ ಸೂಚಿಸಲಾಗಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.
ಧಾರವಾಡ ಜಿಲ್ಲೆಯ ಗ್ರಾಮೀಣ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿವೆ. ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ರಸ್ತೆ ಕಾಮಗಾರಿಗಳ ನಿರ್ಮಾಣದಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಅಡ್ಡಿ -ಆತಂಕಗಳಿದ್ದರೆ ನಮ್ಮ ಗಮನಕ್ಕೆ ತರುವಂತೆ ಸೂಚಿಸಿದರು.