ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಉಕಕ್ಕೆ ಅನ್ಯಾಯ!

By Anusha Kb  |  First Published Apr 16, 2022, 4:30 AM IST
  • 40 ಜನ ಉಪಾಧ್ಯಕ್ಷರ ಪೈಕಿ 11 ಜನ ಉ.ಕ.ದವರು
  • 109 ಪ್ರಧಾನ ಕಾರ್ಯದರ್ಶಿಗಳ ಪೈಕಿ ಬರೀ 22 ಜನರಿಗೆ ಮಣೆ
  • ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯ ಆರೋಪ

ಶಿವಾನಂದ ಗೊಂಬಿ

ಹುಬ್ಬಳ್ಳಿ: ಸರ್ಕಾರದ ಮಟ್ಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯವಾಗುತ್ತದೆ ಎಂಬ ಆರೋಪ- ಪ್ರತ್ಯಾರೋಪ ಸಹಜ. ಇದು ಸತ್ಯವೂ ಹೌದು. ಆದರೆ ಇದೀಗ ರಾಜಕೀಯ ಪಕ್ಷದ ಸ್ಥಾನ ಮಾನಗಳಲ್ಲೂ ಅನ್ಯಾಯವಾಗುತ್ತಿರುವುದು ಕೆಪಿಸಿಸಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಪದಾಧಿಕಾರಿಗಳ ಪಟ್ಟಿಯಿಂದ ಸಾಬೀತಾಗಿದೆ. ಇದು ಪಕ್ಷದ ಕಾರ್ಯಕರ್ತರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

Tap to resize

Latest Videos

ಹೌದು, ಇತ್ತೀಚಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ (ಕೆಪಿಸಿಸಿ) ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಿದೆ. 40 ಜನ ಉಪಾಧ್ಯಕ್ಷರನ್ನು ಹಾಗೂ 109 ಜನ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದು ವಿಶೇಷ. 2023ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿರುವ ನೇಮಕಾತಿ ಇದು. ಇದರಲ್ಲೂ ಅತಿ ಹೆಚ್ಚಿನ ಸ್ಥಾನ ಪಡೆದಿರುವುದು ದಕ್ಷಿಣ ಕರ್ನಾಟಕದ ಭಾಗವೇ. ಉತ್ತರ ಕರ್ನಾಟಕ ಭಾಗದ ಮುಖಂಡರು ಸ್ಥಾನ ಪಡೆದಿರುವುದು ಕಡಿಮೆಯೇ ಆಗಿದೆ.

ಕೊನೆಗೂ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟ, 3 ವರ್ಷಗಳ ಬಳಿಕ ಡಿಕೆಶಿ ಲಿಸ್ಟ್‌ಗೆ AICC ಮುದ್ರೆ
 

40ರಲ್ಲಿ 11 ಜನ:

40 ಜನ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಈ ಪೈಕಿ ಉತ್ತರ ಕರ್ನಾಟಕದ (North Karnataka) ಬಸವರಾಜ ರಾಯರಡ್ಡಿ(Basavaraja Rairady), ಸಂತೋಷ ಲಾಡ್‌(Santosh Lad), ಶರಣ ಪ್ರಕಾಶ ಪಾಟೀಲ (Saran Prakash Patil), ವಿನಯ ಕುಲಕರ್ಣಿ(Vinaya Kulkarni), ಡಿ.ಆರ್‌. ಪಾಟೀಲ ಸೇರಿದಂತೆ 11 ಜನ ಸ್ಥಾನ ಪಡೆದಿದ್ದಾರೆ. ಅಂದರೆ ಶೇ.25ರಷ್ಟುಸ್ಥಾನಗಳು ಮಾತ್ರ ಉತ್ತರ ಕರ್ನಾಟಕದವರಿಗೆ ಲಭಿಸಿದಂತಾಗಿವೆ. ಇನ್ನೂ 109 ಜನ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಿದೆ. ಇದರಲ್ಲಿ ಶಾಕೀರ ಸನದಿ, ಎಫ್‌.ಎಚ್‌. ಜಕ್ಕಪ್ಪನವರ, ಅಲ್ಕೋಡ ಹನುಮಂತಪ್ಪ (Alkoda Hanumanthappa), ಅನಿಲಕುಮಾರ ಪಾಟೀಲ (Anilakumara Patil), ಸದಾನಂದ ಡಂಗನವರ (Sadananda Danganawara), ರುದ್ರಪ್ಪ ಲಮಾಣಿ(Rudrappa Lamani), ಸಿರಾಜ್‌ ಶೇಖ, ಟಿ. ಈಶ್ವರ, ವೀಣಾ ಕಾಶಪ್ಪನವರ ಸೇರಿದಂತೆ 22 ಜನರಿಗೆ ಸ್ಥಾನ ಲಭಿಸಿದೆ. ಅಂದರೆ ಶೇ. 20ರಷ್ಟುಜನರು ಉತ್ತರ ಕರ್ನಾಟಕ ಭಾಗದವರು ಸ್ಥಾನ ಪಡೆದಂತಾಗಿದೆ.

Belagavi: ಸಂತೋಷ್‌ ಕುಟುಂಬಕ್ಕೆ ಕೆಪಿಸಿಸಿಯಿಂದ 11 ಲಕ್ಷ ಪರಿಹಾರ: ಡಿಕೆಶಿ

ಈ ಅನ್ಯಾಯ ಏಕೆ?:

ಮೊದಲೇ ಉತ್ತರ ಕರ್ನಾಟಕ ಬಿಜೆಪಿ ಶಕ್ತಿ ಕೇಂದ್ರವೆನಿಸಿದೆ. ಬಿಜೆಪಿಯನ್ನು ಸೋಲಿಸಬೇಕೆಂದರೆ ಕಾಂಗ್ರೆಸ್‌ ಸದೃಢವಾಗಬೇಕು. ಹಾಗಂತ ಉತ್ತರ ಕರ್ನಾಟಕದಲ್ಲಿ ದೊಡ್ಡ ದೊಡ್ಡ ನಾಯಕರಿಲ್ಲ ಅಂತೇನೂ ಇಲ್ಲ. ಸಾಕಷ್ಟುಜನ ಮುಖಂಡರಿದ್ದಾರೆ. ಇದೀಗ ಎರಡನೆಯ ಸ್ತರದ ನಾಯಕರನ್ನು ಬೆಳೆಸಬೇಕಿದೆ. ಎರಡನೆಯ ಸ್ತರದ ನಾಯಕರೆಂದರೆ ಕಳೆದ 20-30 ವರ್ಷಗಳಿಂದ ಪಕ್ಷಕ್ಕಾಗಿ ನಿರಂತರ ದುಡಿಯುತ್ತಲೇ ಬರುತ್ತಿದ್ದಾರೆ. ಕೆಲವರಿಗಂತೂ ಒಂದೇ ಒಂದು ಸ್ಥಾನವೂ ಸಿಕ್ಕಿಲ್ಲ. ಬರೀ ಸಮಾರಂಭಗಳಲ್ಲಿ ಕುರ್ಚಿ, ಟೇಬಲ್‌ ಹಾಕುವುದಕಷ್ಟೇ ಅವರು ಸೀಮಿತವಾಗಿದ್ದಾರೆ. ದಕ್ಷಿಣ ಕರ್ನಾಟಕಕ್ಕೆ ಕೊಟ್ಟಂತಹ ಪ್ರಾಶಸ್ತ್ಯವನ್ನೇ ಈ ಭಾಗದ ಮುಖಂಡರಿಗೂ ನೀಡಬೇಕಿತ್ತು. ಇಲ್ಲಿನ ಇನ್ನಷ್ಟುನಾಯಕರಿಗೆ ಪ್ರಧಾನ ಕಾರ್ಯದರ್ಶಿ ಅಥವಾ ಉಪಾಧ್ಯಕ್ಷ ಹುದ್ದೆಗಳನ್ನು ನೀಡಬೇಕಿತ್ತು. ಸ್ಥಾನಮಾನ ಸಿಗದೇ ಒಳಗೊಳಗೆ ಅಸಮಾಧಾನಗೊಂಡಿರುವವರಿಗೆ ಕೊಂಚ ಸಮಾಧಾನವಾಗುತ್ತಿತ್ತು. ಪಕ್ಷವನ್ನು ಸಂಘಟಿಸಲು ಅನುಕೂಲವಾಗುತ್ತಿತ್ತು. ಅವರಿಗೆ ಪಕ್ಷ ಸ್ಥಾನಮಾನ ಕೊಟ್ಟಿದ್ದರೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಸಹಕಾರಿಯಾಗುತ್ತಿತ್ತು ಎಂಬ ಅಭಿಪ್ರಾಯ ಮುಖಂಡರದ್ದು.

ಉತ್ತರ ಕರ್ನಾಟಕದ ನಾಯಕರೆಂದರೆ ರಾಜಕೀಯ ಪಕ್ಷಗಳಲ್ಲೂ ಅನ್ಯಾಯವಾಗುತ್ತದೆ ಎಂಬುದಕ್ಕೆ ಕೆಪಿಸಿಸಿ ಪಟ್ಟಿಯೇ ಸಾಕ್ಷಿಯಾದಂತಾಗಿದೆ. ಇದನ್ನು ಇನ್ಮೇಲಾದರೂ ಸರಿದೂಗಿಸುವ ಕೆಲಸ ಮಾಡಬೇಕು. ಬೇರೆ ಬೇರೆ ಯಾವುದಾದರೂ ಹುದ್ದೆಗಳನ್ನು ಸೃಜಿಸಿ ಈ ಭಾಗದ ಎರಡನೆಯ ಸ್ತರದ ನಾಯಕರಿಗೆ ಕೊಡಬೇಕೆಂಬ ಬೇಡಿಕೆ ಕಾರ್ಯಕರ್ತರದ್ದು.

click me!