ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಪದವೀಧರರ ನಿರಾಸಕ್ತಿ

By Web DeskFirst Published Oct 11, 2019, 3:47 PM IST
Highlights

ಅ. 2ರಿಂದ ಮತದಾರರ ಪಟ್ಟಿಪರಿಷ್ಕರಣೆ ಆರಂಭವಾದರೂ ಈವರೆಗೂ ಒಬ್ಬರು ಕೂಡಾ ಅರ್ಜಿ ನೀಡಿಲ್ಲ| ಪದವೀಧರರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಯ ಪರಿಸ್ಥಿತಿ ಇದು| ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗಳನ್ನೊಳಗೊಂಡ ಕ್ಷೇತವಿದು| ನಾಲ್ಕು ಜಿಲ್ಲೆಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಪದವೀಧರರಿದ್ದಾರೆ| ಕಳೆದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿದ್ದವರ ಸಂಖ್ಯೆ ಬರೀ 90 ಸಾವಿರ| 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.11): ಪಶ್ಚಿಮ ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆ ಸಮೀಪಿಸುತ್ತಿದೆ. 2020ರ ಜೂನ್‌ನಲ್ಲಿ ಚುನಾವಣೆ ನಡೆಯಲಿದೆ. ಪದವೀಧರರೇ ಇದಕ್ಕೆ ಮತದಾರರು. ಆದರೆ, ಪದವೀಧರರಿಗೆ ತಮ್ಮ ಹಕ್ಕು ಚಲಾಯಿಸಲು ಆಸಕ್ತಿಯೇ ಇಲ್ಲ ಎನ್ನುವಂತ ಬೆಳವಣಿಗೆ ಗೋಚರಿಸುತ್ತಿವೆ.

ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗಳನ್ನೊಳಗೊಂಡ ಕ್ಷೇತವಿದು. ನಾಲ್ಕು ಜಿಲ್ಲೆಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಪದವೀಧರರಿದ್ದಾರೆ ಎಂಬುದು ಅಂದಾಜು. ಆದರೆ, ಕಳೆದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿದ್ದವರ ಸಂಖ್ಯೆ ಬರೀ 90 ಸಾವಿರ. 4 ಜಿಲ್ಲೆಗಳ ತಾಲೂಕಾಡಳಿತಗಳು ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸವನ್ನು ಅ. 2 ರಿಂದಲೇ ಪ್ರಾರಂಭಿಸಿವೆ. ನ. 6ರ ವರೆಗೆ ಮೊದಲ ಹಂತದಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶವಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅದರಂತೆ ಹುಬ್ಬಳ್ಳಿಯಲ್ಲೂ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸ ಶುರುವಾಗಿದೆ. ಆದರೆ, ಈವರೆಗೂ ಒಬ್ಬರೇ ಒಬ್ಬ ಪದವೀಧರರು ಬಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆಸಕ್ತಿ ತೋರಿಸಿಲ್ಲ ಎಂದು ಅಧಿಕಾರಿ ವಲಯ ತಿಳಿಸುತ್ತದೆ. ಈ ಬಗ್ಗೆ ಗ್ರಾಮಾಂತರ ಪ್ರದೇಶಗಳಲ್ಲೂ ಎಆರ್‌ಒ, ಬಿಎಲ್‌ಒ ಸೇರಿದಂತೆ ಹಲವರು ಸಾಕಷ್ಟುಜಾಗೃತಿ ಮಾಡಿದರೂ ಅಷ್ಟೊಂದು ಪ್ರಯೋಜನವಾಗುತ್ತಿಲ್ಲ.

ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಪ್ರತಿ ಸಲವೂ ಹೊಸದಾಗಿಯೇ ಹೆಸರು ಸೇರ್ಪಡೆ ಮಾಡಬೇಕು. ಹಿಂದಿನ ಚುನಾವಣೆಯಲ್ಲಿ ಹೆಸರು ಇದ್ದವರು ಸಹ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಪದವಿ ಪ್ರಮಾಣ ಪತ್ರದೊಂದಿಗೆ ಆಧಾರ್‌ ಕಾರ್ಡ್‌ ಅಥವಾ ಚುನಾವಣಾ ಗುರುತಿನ ಚೀಟಿ ಝೆರಾಕ್ಸ್‌ ನೀಡಬೇಕು ಎಂಬುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ. ಇದಕ್ಕೆ ಕಾರಣ ಕೆಲ ಪದವೀಧರರು ಕೆಲಸಕ್ಕೆಂದು ಬೇರೆಡೆ ಹೋಗಿರುತ್ತಾರೆ. ಇನ್ನು ಕೆಲ ಸರ್ಕಾರಿ ನೌಕರರು ವರ್ಗಾವಣೆಯಾಗಿ ಬೇರೆಡೆ ಹೋಗಿರುವ ಸಾಧ್ಯತೆ ಇರುತ್ತದೆ. ಇನ್ನು ನಿವೃತ್ತರಾದವರು ಬೇರೆ ಬೇರೆ ಸ್ಥಳಗಳಲ್ಲಿ ಸೆಟ್ಲ್ ಆಗಿರುತ್ತಾರೆ. ಈ ಕಾರಣಕ್ಕಾಗಿ ಹೊಸದಾಗಿಯೇ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂಬುದು ಚುನಾವಣಾ ಆಯೋಗದ ನಿಯಮ.

ಮತ್ತೆ ಹೇಗೆ?

ರಾಜಕೀಯ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರೇ ಮತದಾರರನ್ನು ಹುಡುಕಬೇಕು. ಅವರಿಂದ ಎಲ್ಲ ದಾಖಲೆಗಳನ್ನು ಪಡೆದು ತಹಸೀಲ್ದಾರ್‌ ಕಚೇರಿಗೆ ತೆರಳಿ ತಾವೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಶ್ರಮಿಸಬೇಕು. ಹೀಗೆ ಎಷ್ಟುಮತದಾರರನ್ನು ಪಟ್ಟಿಯಲ್ಲಿ ಸೇರ್ಪಡಿಸುತ್ತಾರೋ ಅಷ್ಟು ಮತದಾರರು ಆ ಪಕ್ಷಕ್ಕೆ ಫಿಕ್ಸ್‌ ಎಂದೇ ಹೇಳಲಾಗುತ್ತಿದೆ. ಅದಕ್ಕಾಗಿ ಸರ್ಕಾರಿ ಕಚೇರಿ, ಖಾಸಗಿ ಕಂಪನಿ, ಶಾಲೆ, ಪ್ರೌಢಶಾಲೆ, ಕಾಲೇಜ್‌ಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಲೆದಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ 2020ರ ಜೂನ್‌ನಲ್ಲಿ ಚುನಾವಣೆ ಇದ್ದರೂ ಈಗಿನಿಂದಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿಯಲ್ಲಿ ತೊಡಗಿವೆ.
ಒಟ್ಟಿನಲ್ಲಿ ಪದವೀಧರರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಪದವೀಧರರೇ ಆಸಕ್ತಿ ತೋರುತ್ತಿಲ್ಲ ಎಂಬುದು ಮಾತ್ರ ಸ್ಪಷ್ಟ.

ಈ ಬಗ್ಗೆ ಮಾತನಾಡಿದ ಬಿಜೆಪಿಯ ಧಾರವಾಡ ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ ಅವರು, ಪಶ್ಚಿಮ ಮತದಾರರ ಕ್ಷೇತ್ರಕ್ಕೆ ಮತದಾರರನ್ನು ನಾವೇ ಹುಡುಕಿಕೊಂಡು ಹೋಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಈವರೆಗೂ ಒಬ್ಬರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಬಯಸಿ ಅರ್ಜಿ ಸಲ್ಲಿಸಿಲ್ಲ. ಈ ಬಗ್ಗೆ ಗ್ರಾಮಾಂತರ ಪ್ರದೇಶ, ನಗರಗಳಲ್ಲಿ ಜಾಗೃತಿ ಕಾರ್ಯ ಮಾಡಿಸುತ್ತಿದ್ದೇವೆ. ಇನ್ನೂ ಸಮಯವಿದೆ. ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಸಂಗಪ್ಪ ಬಾಡಗಿ ಅವರು ತಿಳಿಸಿದ್ದಾರೆ.  
 

click me!