ಹುಬ್ಬಳ್ಳಿ: ಹಬ್ಬ ಮುಗಿದು ತಿಂಗಳಾದ್ರೂ ಗಣೇಶ ಮೂರ್ತಿಗಳಿಗಿಲ್ಲ ಮುಕ್ತಿ ಭಾಗ್ಯ!

By Web DeskFirst Published Oct 11, 2019, 7:43 AM IST
Highlights

ವಿಸರ್ಜನೆಗೊಂಡು ತಿಂಗಳಾದರೂ ಸ್ವಚ್ಛಗೊಳ್ಳದ ಬಾವಿಗಳು| ಅರೆಬರೆ ಕರಗಿದ ವಿಗ್ರಹಗಳು, ಕೊಳೆಯುತ್ತಿವೆ ಬಟ್ಟೆ, ಹೂ, ಹಣ್ಣು| ಗಣೇಶ ವಿಸರ್ಜನೆ ಮುಗಿದು ತಿಂಗಳಾದರೂ ಈ ಮಂಗಲ ಮೂರ್ತಿಗಳಿಗಿನ್ನೂ ಮುಕ್ತಿ ಸಿಕ್ಕಿಲ್ಲ| ಬೃಹತ್‌ ಗಣೇಶ ವಿಗ್ರಹಗಳು ಇಲ್ಲಿನ ಹೊಸೂರು ಬಾವಿಯಲ್ಲಿ ಇಂದಿಗೂ ಭಗ್ನ ಅವಶೇಷಗಳಾಗಿ ಉಳಿದಿವೆ| ಇವುಗಳನ್ನು ತೆಗೆದು ಸ್ವಚ್ಛಗೊಳಿಸುವ ಕೆಲಸಕ್ಕೆ ಪಾಲಿಕೆ ಮುಂದಾಗಿಲ್ಲ| 

ಹುಬ್ಬಳ್ಳಿ(ಅ.11): ಗಣೇಶ ವಿಸರ್ಜನೆ ಮುಗಿದು ತಿಂಗಳಾದರೂ ಈ ಮಂಗಲ ಮೂರ್ತಿಗಳಿಗಿನ್ನೂ ಮುಕ್ತಿ ಸಿಕ್ಕಿಲ್ಲ. ಬೃಹತ್‌ ಗಣೇಶ ವಿಗ್ರಹಗಳು ಇಲ್ಲಿನ ಹೊಸೂರು ಬಾವಿಯಲ್ಲಿ ಇಂದಿಗೂ ಭಗ್ನ ಅವಶೇಷಗಳಾಗಿ ಉಳಿದಿದ್ದು, ಇವುಗಳನ್ನು ತೆಗೆದು ಸ್ವಚ್ಛಗೊಳಿಸುವ ಕೆಲಸಕ್ಕೆ ಪಾಲಿಕೆ ಮುಂದಾಗಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ.

ಈ ಬಾರಿ ಚೌತಿಯಲ್ಲಿ ಹುಬ್ಬಳ್ಳಿಯ ಗಣೇಶನ ದರ್ಶನ ಸಾಧ್ಯವಾಗಿಲ್ಲವೆ? ಬೇಸರ ಬೇಡ. ಸೀದಾ ಇಲ್ಲಿನ ಹೊಸೂರು ಬಾವಿಗೆ ಬಂದಲ್ಲಿ ಇಂದಿಗೂ ಕೆಲ ಗಣಪತಿ ಮೂರ್ತಿಗಳನ್ನ ನೋಡಲು ಅವಕಾಶವಿದೆ!.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಣಪತಿ ಬಪ್ಪಾ ಮೋರಯಾ ಎಂದು ಭಕ್ತರೇನೊ ಗಣೇಶ ಮೂರ್ತಿಗಳನ್ನು ಬಾವಿಯಲ್ಲಿ ವಿಸರ್ಜಿಸಿ ಹೋಗಿದ್ದಾರೆ. ಆದರೆ, ಕರಗಿರದ ಮೂರ್ತಿಗಳು, ಮಣ್ಣಷ್ಟೆ ಕರಗಿ ಗಣೇಶ ಆಕಾರದ ಹಲ್ಲುಗಳ ಕಟ್ಟು ಹಾಗೆ ಇರುವುದು, ಸಣ್ಣಪುಟ್ಟ ಮೂರ್ತಿಗಳು, ವಿಗ್ರಹಗಳಿಗೆ ತೊಡಿಸಿದ್ದ ಬಟ್ಟೆ, ಹೂವು, ತೆಂಗಿನಕಾಯಿ, ಕೊಳೆತ ಹಣ್ಣುಗಳು, ಪ್ಲಾಸ್ಟಿಕ್‌ ಅಲಂಕಾರಿಕ ಪರಿಕರಗಳು, ಕಟ್ಟಿಗೆಗಳ ರಾಶಿ ಇವೆಲ್ಲ ಹೊಸೂರು ಬಾವಿಯಲ್ಲಿ ಹಾಗೆ ಉಳಿದುಕೊಂಡಿವೆ. ಇನ್ನು ಹಲವರು ಹೂವುಗಳನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿಎಸೆದಿದ್ದು, ಅವೂ ಹಾಗೆ ಉಳಿದಿವೆ.

ಈ ಬಗ್ಗೆ ಮಾತನಾಡಿದ ನವನಗರದ ನಿವಾಸಿ ಬಿ. ಮಹೇಶ ಅವರು, ಪಿಒಪಿ ನಿಷೇಧದ ಹಿನ್ನೆಲೆಯಲ್ಲಿ ಬೃಹತ್‌ ಗಣೇಶನನ್ನು ನಿರ್ಮಿಸಲು ಹುಲ್ಲಿನಲ್ಲಿ ಆಕೃತಿಗಳನ್ನು ಮಾಡಿಕೊಂಡು ಅದಕ್ಕೆ ಮಣ್ಣಿನ ಲೇಪನ ಮಾಡಲಾಗಿದೆ. ಆದರೆ, ಇವು ಕೂಡ ನೀರಿನಲ್ಲಿ ಕರಗಿಲ್ಲ. ಭಕ್ತಿಯಿಂದ ನಾವು ಗಣೇಶನನ್ನು ಪೂಜಿಸಿರುತ್ತೇವೆ. ಈಗ ತ್ಯಾಜ್ಯದ ರೀತಿಯಲ್ಲಿ ವಿಗ್ರಹಗಳು ಬಿದ್ದುಕೊಂಡಿರುವುದನ್ನು ನೋಡಲು ಬೇಸರವಾಗುತ್ತದೆ. ಗಣೇಶ ಮಂಡಳಿಗಳು ಅಥವಾ ಮಹಾನಗರ ಪಾಲಿಕೆ ತಿಂಗಳಾದರೂ ಇವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡದಿರುವುದು ಖಂಡನೀಯ ಎಂದು ಹೇಳಿದ್ದಾರೆ. 

ಗಣೇಶ ಚೌತಿಗಾಗಿ ಇಲ್ಲಿನ ಹೊಸೂರು ಬಾವಿಯನ್ನು ಕಳೆದ ಎರಡು-ಮೂರು ದಶಕಗಳಿಂದ ಬಳಸಲಾಗುತ್ತಿದೆ. ಚೌತಿ ಬಂದಾಗ ಮಾತ್ರ ಬಾವಿಯನ್ನು ಸ್ವಚ್ಛಗೊಳಿಸಿ ವಿಸರ್ಜನೆಗೆ ಅನುವು ಮಾಡಿಕೊಡುತ್ತಾರೆ. ಉಳಿದ ದಿನಗಳಲ್ಲಿ ಇದು ಹಾಳು ಬಿದ್ದಿರುತ್ತದೆ. ವಿಸರ್ಜನೆ ಮುಗಿದ ತಕ್ಷಣ ಬಾವಿ ಸ್ವಚ್ಛಗೊಳಿಸಿದಲ್ಲಿ ನೋಡಲು ಮುದವೆನಿಸುತ್ತದೆ. ಆದರೆ, ಹೀಗೆ ಕೊಳಚೆ ಇಟ್ಟರೆ ಬಾವಿ ಮಲೀನಗೊಳ್ಳುತ್ತದೆ. ಹೂ, ಹಣ್ಣು ಕೊಳೆತು ಸುತ್ತಮುತ್ತಲಿನವರಿಗೆ ರೋಗಭೀತಿ ಆವರಿಸುತ್ತದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಸರ್ಜನೆಯ ಬಳಿಕ ನಿರ್ಲಕ್ಷ್ಯ:

ನಗರದಲ್ಲಿ ಹೊಸೂರು ಬಾವಿ, ಇಂದಿರಾ ಗ್ಲಾಸ್‌ಹೌಸ್‌ ಹಿಂಬಾಗ, ನವನಗರ ಬಾವಿ, ನೇಕಾರ ನಗರದ ಬಾವಿ ಸೇರಿ 8ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಮಹಾನಗರ ಪಾಲಿಕೆ ಸ್ಥಳ ಗುರುತಿಸಿದೆ. ಆದರೆ, ವಿಸರ್ಜನೆ ಬಳಿಕ ಇವುಗಳು ಸ್ವಚ್ಛಗೊಳ್ಳುವುದು ಮುಂದಿನ ಚೌತಿ ಬಂದಾಗಲೆ ಎಂಬಂತಾಗಿದೆ.

ಚೌತಿ ಮುಗಿದು ತಿಂಗಳಾಗಿದೆ. ಆದರೆ, ಗಣೇಶ ಮೂರ್ತಿಗಳು ಮಾತ್ರ ಕರಗಿಲ್ಲ. ಇವುಗಳನ್ನು ನೋಡಿದರೆ ಭಕ್ತರಾಗಿ ನಮಗೂ ಬೇಸರವಾಗುತ್ತದೆ. ಅಲ್ಲದೆ, ಜಲಮೂಲವೂ ಇದರಿಂದ ಕಲುಷಿತಗೊಳ್ಳುತ್ತದೆ ಎಂದು ವಕೀಲರಾದ ರಮೇಶ ಮುಳಗುಂದ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಮಹಾನಗರ ಪಾಲಿಕೆ ಇಇ ವೈ.ಆರ್‌. ರಾಯನಗೌಡ್ರ ಅವರು, ವಿಸರ್ಜನಾ ಬಾವಿಗಳ ಸ್ವಚ್ಛಗೊಳಿಸಲು ಟೆಂಡರ್‌ ಕರೆಯಲಾಗಿದೆ. ಶೀಘ್ರವೇ ಬಾವಿಗಳು ಸ್ವಚ್ಛಗೊಳ್ಳಲಿವೆ ಎಂದು ತಿಳಿಸಿದ್ದಾರೆ. 
 

click me!