
ಧಾರವಾಡ: ₹ 50 ಲಕ್ಷ ಲಂಚದ ಹಣ ಪಡೆಯುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಲೋಕಾಯುಕ್ತ ದಾಳಿಗೆ ಒಳಗಾಗಿರುವ ಘಟನೆ ಬುಧವಾರ ನಡೆದಿದ್ದು, ರಾತ್ರಿ ವಶಕ್ಕೆ ಪಡೆದು ಬೆಳಗ್ಗಿನವರೆಗೆ ಎಸ್‌ಪಿ ಸಿದ್ದಲಿಂಗಪ್ಪ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಚ್ಚಿದಾನಂದ ಕುಚನೂರ ಎಸ್ಪಿ ಎದುರು ಕಣ್ಣೀರು ಬಿಟ್ಟು ಬೇರೇನೂ ಬಾಯಿ ಬಿಟ್ಟಿಲ್ಲ. ಸೆ.17ರ ಗುರುವಾರ ತಹಸೀಲ್ದಾರ್ ತನ್ನ ಕಛೇರಿಯಲ್ಲಿ ಗಣಹವನ ಸತ್ಯ ನಾರಾಯಣ ಪೂಜೆಯನ್ನ ಇಟ್ಟುಕ್ಕೊಂಡಿದ್ದ. ಪೂಜೆಯ ಜೊತೆಗೆ 5 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡಲು ಸಜ್ಜಾಗಿದ್ದ. ಇದಕ್ಕಾಗಿ ಎಲ್ಲಾ ತಯಾರಿಗಳು ನಡೆದಿತ್ತು. ನಿನ್ನೆ ರಾತ್ರಿ 8 ಘಂಟೆಯವರೆಗೂ ಅಡುಗೆ ಮಾಡುವವರ ಜೊತೆಗಿದ್ದ ಉಸ್ತುವಾರಿ ಮಾಡಿದ್ದ ತಹಸೀಲ್ದಾರ್ ಬಳಿಕ ಅಲ್ಲಿಂದ ಮನೆಗೆ ಹೋಗಿ ಸರಕಾರಿ ವಾಹನ ಬಿಟ್ಟು ಸ್ವಂತ ಕಾರಿನಲ್ಲಿ ಕೆಸಿಡಿ ಕಾಲೇಜು ಆವರಣಕ್ಕೆ ಹೋಗಿದ್ದ . ಆದರೆ ಸೆ.16ರ ರಾತ್ರಿ 50 ಲಕ್ಷ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮಾತ್ರವಲ್ಲ ಎಸ್ಪಿ ಎದುರು ಕಣ್ಣೀರು ಹಾಕಿ ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಾನೆ.
ಕಳೆದ ರಾತ್ರಿ 12 ಘಂಟೆಯಿಂದಲೂ ಲೋಕಾಯುಕ್ತ ಕಚೇರಿಯಲ್ಲಿರುವ ಅಧಿಕಾರಿ ಸಚ್ಚಿದಾನಂದನನ್ನು ಇಂದು ಬೆಳಗ್ಗೆ 11 ಘಂಟೆಯ ಬಳಿಕ ಕೋರ್ಟ್‌ಗೆ ಕರೆದುಕೊಂಡು ಲೋಕಾ ಅಧಿಕಾರಿಗಳು ಹೋಗಲಿದ್ದಾರೆ.
ತಾಲೂಕಿನ ಯರಿಕೊಪ್ಪ ಬಳಿ ಜಮೀನು ಖರೀದಿಸಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ಮೂಲದ ಪರಮೇಶ್ವರ ಅಂಗಡಿ ಎಂಬವರಿಂದ ತಹಸೀಲ್ದಾರ್‌ರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಇದೆ.
ಜಮೀನಿನಲ್ಲಿರುವ ‘ಎ ಖರಾಬ್’ ಜಾಗವನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಲು ಅನುಮತಿ ನೀಡುವ ವಿಚಾರದಲ್ಲಿ ₹ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಮುಂಗಡವಾಗಿ ₹ 50 ಲಕ್ಷ ನೀಡುವ ಸಂದರ್ಭದಲ್ಲಿ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ರಾತ್ರಿ 8ರ ಸಮಯದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಜಿಲ್ಲೆಯ ಪ್ರಭಾವಿ ರಾಜಕೀಯ ಮುಖಂಡರ ಆಪ್ತರು ಸಹ ಇದ್ದರು ಎಂಬ ಮಾಹಿತಿ ಇದೆ.
ಖಚಿತ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ₹ 50 ಲಕ್ಷ ಹಣ ಪಡೆಯುತ್ತಿದ್ದಾಗಲೇ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರನ್ನು ಬಲೆಗೆ ಬೀಳಿಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ತಹಸೀಲ್ದಾರ್ ಅವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.