ಧಾರವಾಡ ಮಕ್ಕಳ ಕಳ್ಳನ ಕಥೆ ಕೇಳಿ ಪೊಲೀಸರೇ ಸುಸ್ತು! ಈ ಅಬ್ದುಲ್ ಕರೀಂ ಸಾಮಾನ್ಯದವನಲ್ಲ!

Published : Jan 13, 2026, 12:49 PM IST
Dharwad Kidnap Case

ಸಾರಾಂಶ

ಧಾರವಾಡದ ಕಮಲಾಪೂರ ಶಾಲೆಯ ಇಬ್ಬರು ಮಕ್ಕಳ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಪೋಕ್ಸೋ ಪ್ರಕರಣದ ಹಿನ್ನೆಲೆಯುಳ್ಳ ಅಪಹರಣಕಾರ ಅಬ್ದುಲ್ ಕರೀಂ, ಜೋಯಿಡಾ ಬಳಿ ಬೈಕ್ ಅಪಘಾತಕ್ಕೀಡಾದಾಗ ಸಿಕ್ಕಿಬಿದ್ದಿದ್ದಾನೆ. ಮಕ್ಕಳಿಬ್ಬರೂ ಸುರಕ್ಷಿತವಾಗಿದ್ದು, ಈ ಘಟನೆಯು ಅಪಘಾತದಿಂದಾಗಿ ಬಯಲಾಗಿದೆ.

ಧಾರವಾಡ: ಇಲ್ಲಿನ ಕಮಲಾಪೂರ ಶಾಲೆಯ ಮಕ್ಕಳ ಅಪಹರಣ ಪ್ರಕರಣದ ಕುರಿತಂತೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ, ಕಿಡ್ನಾಪರ್ ಅಬ್ದುಲ್ ಕರೀಂ ಕರಾಳ ಮುಖವಾಡ ಬಗೆದಷ್ಟು ಬಯಲಾಗುತ್ತಿದೆ.

2018ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅಬ್ದುಲ್ ಕರೀಂ ಮೇಲೆ ಪೋಕ್ಸೋ ಕೇಸ್ ದಾಖಲಾಗಿತ್ತು. ಈತ ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ. ಮಕ್ಕಳ ಕಿಡ್ನಾಪ್ ಮಾಡುವ ವೇಳೆ ನಡೆದ ಅಪಘಾತದಲ್ಲಿ ಮಕ್ಕಳಿಗೆ ಹಾಗೂ ಆರೋಪಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಅಬ್ದುಲ್ ಕರೀಂ ಓರ್ವ ಕಟ್ಟಡ ಕಾರ್ಮಿಕನಾಗಿದ್ದು, ಧಾರವಾಡದವನಾದ ಈತನಿಗೆ ನಾಲ್ಕು ಮಕ್ಕಳು ಇದ್ದಾರೆ. 2018ರಲ್ಲೂ ಈತನ ಮೇಲೆ ಅಪಹರಣದ ಕೇಸ್ ದಾಖಲಾಗಿತ್ತು. ಇದರ ಜತೆಗೆ ಆಈತನ ಮೇಲೆ ಹಳಿಯಾಳದಲ್ಲಿ ರೌಡಿ ಶೀಟರ್ ಕೂಡಾ ದಾಖಲಾಗಿದೆ. ಕೆಟ್ಟ ಉದ್ದೇಶಕ್ಕೆ ಈತ ಮಕ್ಕಳನ್ನು ಕರೆದುಕೊಂಡು ಹೋಗಿರಬಹುದು ಎಂದು ದೂರು ದಾಖಲಿಸಿಕೊಂಡಿದ್ದೇವೆ.

ಪ್ರಾಥಮಿಕ ಹಂತದಲ್ಲಿ ವಿಚಾರಣೆ ಮಾಡಿದಾಗ ನನಗೆ ಮಕ್ಕಳನ್ನು ಕಂಡರೆ ಪ್ರೀತಿ, ಚಾಕೋಲೇಟ್, ತಿಂಡಿ ಕೊಡಿಸಲು ಕರೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾನೆ. ಸದ್ಯ ಆತ ಡಿಸ್ಚಾರ್ಜ್ ಆದ ಬಳಿಕ ಮತ್ತೆ ವಿಚಾರಣೆ ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ತಿಳಿಸಿದ್ದಾರೆ.

ಸರ್ಕಾರಿ ಶಾಲೆಯ ಎಂಟು ವರ್ಷದ ಇಬ್ಬರು ಮಕ್ಕಳ ಅಪಹರಣ ಸುಖಾಂತ್ಯ

ಸರ್ಕಾರಿ ಶಾಲೆಯೊಂದರಿಂದ ಹಾಡ ಹಗಲೇ ಎಂಟು ವರ್ಷದ ಇಬ್ಬರು ಮಕ್ಕಳನ್ನು ಅನಾಮಿಕನೊಬ್ಬ ಅಪಹರಣ ಮಾಡಿಕೊಂಡು ಬೈಕ್‌ ಮೇಲೆ ಕರೆದೊಯ್ದ ಆತಂಕಕಾರಿ ಘಟನೆ ಸೋಮವಾರ ನಗರದಲ್ಲಿ ನಡೆದಿದೆ. ಇಲ್ಲಿಯ ಯಾದವಾಡ ರಸ್ತೆಯಲ್ಲಿರುವ ಕಮಲಾಪುರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ. 4ರಲ್ಲಿ ಈ ಘಟನೆ ನಡೆದಿದ್ದು, ಮಧ್ಯಾಹ್ನ ಊಟದ ನಂತರ 3ನೇ ತರಗತಿ ವಿದ್ಯಾರ್ಥಿಗಳಾದ ತನ್ವಿರ್ ಅಹ್ಮದ್ ದೊಡಮನಿ ಹಾಗೂ ಲಕ್ಷ್ಮೀ ಮಂಜುನಾಥ್ ಕರೆಪ್ಪನ್ನವರ ಎಂಬುವರನ್ನು ಬೈಕ್‌ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ.

ಮಧ್ಯಾಹ್ನದ ನಂತರ ನಡೆದ ತರಗತಿಯಲ್ಲಿ ಈ ಇಬ್ಬರು ಮಕ್ಕಳು ಕಾಣದಿರುವ ಹಿನ್ನೆಲೆಯಲ್ಲಿ ಆತಂಕಗೊಂಡು ಶಿಕ್ಷಕರು ಪಾಲಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮಕ್ಕಳು ಶಾಲೆಯಲ್ಲಿಲ್ಲ ಎಂಬ ಮಾಹಿತಿ ಅರಿತು ಆತಂಕದಲ್ಲಿ ಶಾಲೆಗೆ ಬಂದ ಪಾಲಕರಿಗೆ ಅಚ್ಚರಿ ಕಾದಿದ್ದು, ಸಿಸಿ ಟಿವಿಯಲ್ಲಿ ಮಕ್ಕಳನ್ನು ಕರೆದೊಯ್ದ ದೃಶ್ಯಗಳು ಸಿಕ್ಕಿವೆ. ಘಟನೆ ತಿಳಿದು ಹತ್ತಾರು ಮಕ್ಕಳ ಪಾಲಕರು ಶಾಲೆಯ ಬಳಿ ಜಮಾಯಿಸಿ ಮಕ್ಕಳ ಅಪಹರಣ ಬಗ್ಗೆ ಕಳವಳ ಸಹ ವ್ಯಕ್ತಪಡಿಸಿದರು.

ಅಪಘಾತದಿಂದ ಗೊತ್ತಾದ ಮಾಹಿತಿ

ಶಾಲೆಯ ಮುಖ್ಯೋಪಾಧ್ಯಾಯರು ಕೂಡಲೇ ಉಪ ನಗರ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಶಾಲೆಗೆ ಬಂದು ಪರಿಶೀಲನೆ ನಡೆಸಿದರು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿ ಇನ್ನೇನು ಕಾರ್ಯಾಚರಣೆ ನಡೆಸಬೇಕು ಎನ್ನುವಷ್ಟರಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಬಳಿ ಅಪಹರಣಕಾರನ ಬೈಕ್‌ ಅಪಘಾತದ ಸುದ್ದಿ ಬಂದಿದೆ.

ಬೈಕ್ ಮೇಲೆ ಓರ್ವ ವ್ಯಕ್ತಿ ಹಾಗೂ ಇಬ್ಬರು ಮಕ್ಕಳು ಇರುವ ಮಾಹಿತಿ ಉಪ ನಗರ ಪೊಲೀಸರಿಗೆ ಲಭ್ಯವಾಗಿದೆ. ಇದೇ ವೇಳೆ ದಾಂಡೇಲಿ ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಧಾರವಾಡ ನಗರದ ಅಬ್ದುಲ್ ಕರೀಂ ಮೇಸ್ತ್ರಿ ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು, ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ಪೋಷಕರಿಗೆ ತಿಳಿಸಿದ ಪೊಲೀಸರು ಮಗುವಿನ ಪೋಷಕರೊಂದಿಗೆ ಸೋಮವಾರ ರಾತ್ರಿ ಜೋಯಿಡಾಗೆ ತೆರಳಿದರು. ಒಟ್ಟಿನಲ್ಲಿ ಅಪಘಾತವೊಂದು ಎರಡೂ ಮಕ್ಕಳನ್ನು ಪತ್ತೆ ಹಚ್ಚಲು ಕಾರಣವಾಗಿದ್ದು ಮಾತ್ರ ವಿಚಿತ್ರ ಸಂಗತಿ.

PREV
Read more Articles on
click me!

Recommended Stories

ಧಾರವಾಡ: ಮಕ್ಕಳ ಕಳ್ಳ ಮಹ್ಮದ್ ಕರೀಂ ಬಂಧನ; ಬೈಕ್ ಆಕ್ಸಿಡೆಂಟ್ ಆಗದಿದ್ದರೆ ಪುಟಾಣಿಗಳ ಸ್ಥಿತಿ ಏನಾಗುತ್ತಿತ್ತು?
ಧಾರವಾಡ ಕಿಡ್ನ್ಯಾಪ್ ಕೇಸ್ ಸುಖಾಂತ್ಯ: ಜೋಯಿಡಾದಲ್ಲಿ ಪತ್ತೆಯಾದ್ರು ಶಾಲಾ ಮಕ್ಕಳು! ಅಪಹರಣಕಾರ ಸಿಕ್ಕಿಬಿದ್ದಿದ್ದೇ ರೋಚಕ!