ಕೊಲೆ, ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾದ ನಾಲ್ವರು ಜೈಲು ಪಾಲು| ಕಟ್ಟಡ ನಿರ್ಮಾಣ ಕಾಮಗಾರಿ, ಡಾಬಾ ಕೆಲಸದಲ್ಲಿ ಭಾಗಿಯಾದ ಶಂಕೆ| ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಅಕ್ರಮ ವಲಸಿಗರು ಇರುವಾ ಬಗ್ಗೆ ಅನುಮಾನ|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಅ.27): ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯನಗರಿ ಎನಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬಾಂಗ್ಲಾ ವಲಸಿಗರ ಹೆಜ್ಜೆ ಗುರುತುಗಳು ಮೂಡಿವೆ. ಇಲ್ಲಿನ ಕೆಲವೊಂದು ಅಪರಾಧ ಪ್ರಕರಣಗಳಲ್ಲೂ ಬಾಂಗ್ಲಾದವರು ಭಾಗಿಯಾಗಿರುವುದು ಈಗಾಗಲೇ ಸಾಬೀತಾಗಿದೆ. ಇದು, ಮಹಾನಗರದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೆಯ ದೊಡ್ಡ ನಗರ. ಈ ವಾಣಿಜ್ಯ ನಗರಿಗೆ ಸಂಪರ್ಕ ಈಗ ಅತ್ಯಂತ ಸುಲಭವಾಗಿದೆ. ಒಂದೆಡೆ ನೈಋುತ್ಯ ರೈಲ್ವೆ ವಲಯ, ಇನ್ನೊಂದೆಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ನಗರವಿದು. ಉತ್ತರ ಕರ್ನಾಟಕದ ಪ್ರಮುಖ ವ್ಯಾಪಾರಿ ಕೇಂದ್ರವೆನಿಸಿದೆ. ದೇಶದ ಎಲ್ಲ ಭಾಗಗಳಿಂದಲೂ ಇಲ್ಲಿಗೆ ರೈಲುಗಳ ಸಂಪರ್ಕ, ವಿಮಾನಗಳ ಹಾರಾಟವೂ ಉಂಟು. ಈ ಸಾರಿಗೆ ಸೌಲಭ್ಯ ಬಾಂಗ್ಲಾ ವಲಸಿಗರ ಆಗಮನಕ್ಕೂ ಅನುಕೂಲವಾದಂತಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಂಬೈ ಸೇರಿದಂತೆ ಮತ್ತಿತರರ ಪ್ರದೇಶಗಳಿಂದ ಸುಲಭವಾಗಿ ರೈಲುಗಳ ಮೂಲಕ ಆಗಮಿಸುತ್ತಾರೆ. ವಿಮಾನ ನಿಲ್ದಾಣದಲ್ಲಾದರೆ ಹೆಚ್ಚು ವಿಚಾರಣೆ, ತಪಾಸಣೆಗಳಿರುತ್ತವೆ. ಆದರೆ, ರೈಲುಗಳಲ್ಲಿ ಅಷ್ಟೊಂದು ತಪಾಸಣೆಗಳಿರುವುದಿಲ್ಲ. ಹೀಗಾಗಿ ಹೆಚ್ಚೆಚ್ಚು ಬಾಂಗ್ಲಾದೇಶೀಯರು ತಮ್ಮ ಪ್ರಯಾಣಕ್ಕೆ ರೈಲನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿಂದಲೇ ಕೇರಳ, ಗೋವಾಗಳಿಗೆ ರೈಲು ಮೂಲಕವೇ ಪ್ರಯಾಣಿಸುವುದುಂಟು.
ಯಾವ್ಯಾವ ಕೆಲಸ ಮಾಡುತ್ತಾರೆ:
ಹೀಗೆ ರೈಲುಗಳ ಮೂಲಕ ವಿವಿಧ ನಗರಗಳಿಂದ ಆಗಮಿಸುವ ಬಾಂಗ್ಲಾ ನಿವಾಸಿಗಳು ಇಲ್ಲಿನ ಕಟ್ಟಡ ಸೇರಿದಂತೆ ವಿವಿಧ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರೊಂದಿಗೆ ಕೆಲವರು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕಗಳಲ್ಲಿನ ಡಾಬಾಗಳಲ್ಲಿ ಕೆಲಸ ಮಾಡುತ್ತಿರುವ ಗುಮಾನಿಯಿದೆ.
ಬಾಂಗ್ಲಾದವರಂತೆ ಕಾಣಿಸುವ ಇವರನ್ನು ಎಲ್ಲಿಯವರೆಂದು ಕೇಳಿದರೆ, ‘ಹಮ್ ತೋ ಪಶ್ಚಿಮ ಬಂಗಾಳ ಸೆ ಹೈ.. ಹಮಾರೆ ಗಾಂವ್ ಮೇ ಕಾಮ್ ನಹಿ ಮಿಲತಾ.. ಇಸಲಿಯೇ ಇದರ್ ಆಯೆ ಹೈ..’ ಎಂದು ಉರ್ದು ಮಿಶ್ರಿತ ಹಿಂದಿಯಲ್ಲಿ ಉತ್ತರಿಸುತ್ತಾರೆ. ನಿಜವಾಗಿಯೂ ಪಶ್ಚಿಮ ಬಂಗಾಳದವರಾದರೆ ಮಾತನಾಡಿಸಿದಷ್ಟು ಸಮಯ ಮಾತನಾಡುತ್ತಾರೆ. ಆದರೆ, ಇವರಲ್ಲಿ ಕೆಲವರು ಮಾತಿಗೆ ಸಿಗಲ್ಲ. ಹೆಚ್ಚೆಚ್ಚು ಮಾತಿಗೆಳೆದು ಕೆದಕಲು ಹೋದರೆ ‘ಅಚ್ಚಾ ಭಾಯ್‌ಸಾಬ್ ಅಂದರ್ ಕುಚ್ ಕಾಮ್ ಹೈ ಹಮ್ ಚಲತೆ ಹೈ..’ ಎಂದು ಸಬೂಬು ನೀಡಿ ಅಲ್ಲಿಂದ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹೀಗೆ ಬರುವವರು ಹೆಚ್ಚು ದಿನ ಒಂದೇ ಕೆಲಸದಲ್ಲಿ ಠಿಕಾಣಿ ಹೂಡಲ್ಲ. ಮೂರ್ನಾಲ್ಕು ತಿಂಗಳಲ್ಲಿ ತಮ್ಮ ಕೆಲಸದ ಸ್ಥಳ ಬದಲಿಸುತ್ತಲೇ ಇರುತ್ತಾರೆ. ಅಂಥವರನ್ನು ಕಂಡರೆ ಬಾಂಗ್ಲಾ ನಿವಾಸಿಗಳಿರಬಹುದು ಎಂಬ ಸಂಶಯ ಬರುತ್ತದೆ ಎಂದು ಡಾಬಾವೊಂದರಲ್ಲಿ ಕೆಲಸ ಮಾಡುವ ರಾಮ್‌ಸಿಂಗ್ ಹೇಳುವ ಮಾತು.
ಅಪರಾಧ ಪ್ರಕರಣಗಳಲ್ಲಿ ಭಾಗಿ:
ನಗರದಲ್ಲಿ ನಡೆದ ಕೊಲೆ ಹಾಗೂ ಡಕಾಯಿತಿ ಪ್ರಕರಣಗಳಲ್ಲಿ ಬಾಂಗ್ಲಾ ದೇಶಿಯರ ಹೆಜ್ಜೆ ದಾಖಲಾಗಿವೆ. 2019ರ ಜನವರಿಯಲ್ಲಿ ನಗರದ ಪ್ರಮುಖ ಉದ್ಯಮಿ ವೆಂಕಣ್ಣ ಬಣವಿ ಅವರ ಕೊಲೆಯಾಗಿತ್ತು. ಆರು ಜನ ಸೇರಿಕೊಂಡು ಬಣವಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಅಲ್ಲದೇ, ಅವರ ಪತ್ನಿಯನ್ನು ಕಟ್ಟಿಹಾಕಿ 10 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು. ಬೇರೆ ಬೇರೆ ರಾಜ್ಯಗಳಲ್ಲಿ ಇದೇ ರೀತಿ ಕೊಲೆ, ಸುಲಿಗೆ ಮಾಡುತ್ತಿದ್ದ ಈ ತಂಡದ ಸದಸ್ಯರೆಲ್ಲರೂ ಬಾಂಗ್ಲಾ ನುಸುಳುಕೋರರೇ ಆಗಿದ್ದರು. ಇವರಲ್ಲಿ ಐವರು ಈವರೆಗೂ ಕಣ್ಮರೆಯಾಗಿದ್ದರೆ, ಮಾಣಿಕ್ ಸರ್ದಾರ್ ಎಂಬಾತನನ್ನು ದೆಹಲಿಯಲ್ಲಿ ಅಲ್ಲಿನ ಪೊಲೀಸರ ನೆರವಿನೊಂದಿಗೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು.
ಇಲ್ಲಿ ಕೆಲ ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಇಲ್ಲಿಂದ ಕೇರಳದಲ್ಲಿ ನಡೆದ ಕೆಲ ದರೋಡೆ ಪ್ರಕರಣಗಳ ವಿಚಾರಣೆಗೆ ಆತನನ್ನು ಅಲ್ಲಿನ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವಿಚಾರಣೆ ಮುಗಿದ ಬಳಿಕ ನ್ಯಾಯಾಲಯ ಅನುಮತಿ ಪಡೆದು ಮತ್ತೆ ಹುಬ್ಬಳ್ಳಿಗೆ ಕರೆ ತಂದು ಇನ್ನಷ್ಟುವಿಚಾರಣೆಗೆ ಒಳಪಡಿಸುವ ಯೋಚನೆ ಪೊಲೀಸರದ್ದು. ಈತ ಹಾಗೂ ಈತನ ಸಹಚರರು ರೈಲಿನ ಮೂಲಕವೇ ಹುಬ್ಬಳ್ಳಿಗೆ ಬಂದಿದ್ದರು.
ಇನ್ನು ಇದೇ ಪ್ರಕರಣದ ಇನ್ನೊಬ್ಬ ಆರೋಪಿಯ ಪಾಸ್‌ಪೋರ್ಟ್ ಮಾತ್ರ ದೊರೆತಿದ್ದು, ಆತ ಕಣ್ಮರೆಯಾಗಿದ್ದಾನೆ. ಆತನ ಪಾಸ್‌ಪೋರ್ಟ್‌ನ್ನು ವಿದೇಶಾಂಗ ಇಲಾಖೆಗೆ ಹಸ್ತಾಂತರಿಸಿದ್ದು, ಎಲ್ಲ ವಿಮಾನ ನಿಲ್ದಾಣಗಳಲ್ಲಿ ಈ ಬಗ್ಗೆ ಅಲರ್ಟ್ ಮಾಡಲಾಗಿದೆ. ಆದರೆ, ಇವರಾರಯರು ಕಾಯಂ ಆಗಿ ಇಲ್ಲಿ ನೆಲೆಸಿರುವುದಿಲ್ಲ. ಬದಲಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳತನ, ಸುಲಿಗೆ, ಕೊಲೆ ನಡೆಸಿ ಪರಾರಿಯಾಗುತ್ತಿರುತ್ತಾರೆ ಎಂದು ಮೂಲಗಳು ತಿಳಿಸುತ್ತವೆ.
ಡಕಾಯತಿ ಪ್ರಕರಣ:
ಇನ್ನು ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ನಾಲ್ಕು ವರ್ಷದ ಹಿಂದೆ ನಡೆದ ಡಕಾಯಿತಿ ಪ್ರಕರಣವೊಂದರಲ್ಲಿ ಮೂವರು ಬಾಂಗ್ಲಾ ದೇಶಿಯರನ್ನು ಬಂಧಿಸಲಾಗಿತ್ತು. ಅವರಲ್ಲಿ ಇಬ್ಬರು ಬೆಂಗಳೂರು ಜೈಲಲ್ಲಿ ಇದ್ದರೆ, ಒಬ್ಬ ದೆಹಲಿ ಜೈಲಲ್ಲಿ ಇದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸುತ್ತವೆ. ಈ ಎರಡು ಪ್ರಕರಣಗಳಿಂದ ಬಾಂಗ್ಲಾದೇಶೀಯರು ವಾಣಿಜ್ಯನಗರಿಯಲ್ಲಿ ಬೇರೂರಿದ್ದಾರೆ ಎಂಬುದು ಸಾಬೀತಾಗುತ್ತದೆ. ಆದರೆ, ಇದನ್ನು ಪತ್ತೆ ಹಚ್ಚಲು, ಸಮೀಕ್ಷೆ ನಡೆಸಬೇಕು ಎಂಬುದುಸಾರ್ವಜನಿಕರ ಆಗ್ರಹ.
ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಅಕ್ರಮ ವಲಸಿಗರು?
ಮಹಾನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು 1500ದಿಂದ 1600 ಮಂದಿ ಬಾಂಗ್ಲಾ ನುಸುಳುಕೋರರು ಇದ್ದಾರೆ ಎಂಬ ಶಂಕೆ ಇದೆ. ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಯಬೇಕಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರದ ಕೊಳಚೆ ಪ್ರದೇಶದಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಲವಾರು ಪ್ರತಿಭಟನೆ ನಡೆಸಿತ್ತು. ಆದರೆ, ಜಿಲ್ಲೆಯಲ್ಲಿ ಬಾಂಗ್ಲಾ ನಿವಾಸಿಗಳಿಲ್ಲ ಎಂಬುದು ಪೊಲೀಸ್ ಇಲಾಖೆ ಸ್ಪಷ್ಟನೆ.
ಹುಬ್ಬಳ್ಳಿಯಲ್ಲಿ ನಡೆದ ಬಣವಿ ಹತ್ಯೆ ಪ್ರಕರಣವೇ ಬಾಂಗ್ಲಾ ನುಸುಳುಕೋರರು ಇಲ್ಲಿದ್ದಾರೆ ಎಂಬುದಕ್ಕೆ ಸಾಕ್ಷಿ. ನಗರದ ವಿವಿಧೆಡೆ ಅವಿತಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಪತ್ತೆ ಹಚ್ಚಲು ಸಮೀಕ್ಷೆ ಮಾಡಬೇಕು. ರೈಲುಗಳ ಮೂಲಕವೇ ಹೆಚ್ಚಾಗಿ ಬರುವುದರಿಂದ ಅಲ್ಲಿ ತಪಾಸಣೆ ಹೆಚ್ಚಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಸ ಸಿಂಗ್ ಜಮಾದಾರ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಡಿ.ಎಲ್.ನಾಗೇಶ ಅವರು, ಉದ್ಯಮಿ ವೆಂಕಣ್ಣ ಬಣವಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಬಾಂಗ್ಲಾದವನಾಗಿದ್ದ. ಒಬ್ಬನನ್ನು ಬಂಧಿಸಲಾಗಿತ್ತು. ಉಳಿದವರು ಪತ್ತೆಯಾಗಿಲ್ಲ. ಮತ್ತೆ ಇಲ್ಲಿ ಬೇರೆ ಬಾಂಗ್ಲಾ ವಲಸಿಗರು ಇರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.