ಸೋರುವ ಮನೆ: ಕೂಸಿನ ಜತೆ ರಾತ್ರಿಯೆಲ್ಲ ಪಲ್ಲಂಗ ಮೇಲೆ ಕುಳಿತಿದ್ದ ಬಾಣಂತಿ!

By Web DeskFirst Published Oct 26, 2019, 12:41 PM IST
Highlights

ಮಳೆ ಬಂದರೆ ಸೋರುವ ಮನೆ| ಕುಂಭದ್ರೋಣ ಮಳೆಗೆ ಮನೆ ಸೋರಿದೆ| ಮನೆಯ ನೆಲದಿಂದಲೂ ನೀರು ಚಿಮ್ಮಿದೆ| ಚಾವಣಿ ಸೋರುತ್ತಿದ್ದರಿಂದ ಮಲಗಿಸಲು ಸಾಧ್ಯವಿರಲಿಲ್ಲ| ಪಲ್ಲಂಗದ ಮೇಲೆಯೇ ಮಗುವಿನೊಂದಿಗೆ ಕುಳಿತೇ ರಾತ್ರಿಯೆಲ್ಲ ಕಳೆದ ಮಂಜುಳಾ| ‘ಆ ದಿನಾ ಸುರಿದ ಮಳಿ ನೋಡಿದ್ರ ನಾವು ಬದುಕಿ ಉಳಿತೇವಿ ಅಂಥ ನಂಬಿಕಿನ ಇರಲಿಲ್ಲ ನೋಡ್ರಿ ಎಂದ ಮಂಜುಳಾ| 

ಶಿವಾನಂದ ಗೊಂಬಿ 

ಹುಬ್ಬಳ್ಳಿ(ಅ.26): ‘ನಂದು ನಾಲ್ಕೂವರೆ ತಿಂಗಳ ಕೂಸು ಐತ್ರಿ. ಮೊನ್ನೆ ಮಳಿ ಬಂದಾಗ ಮನ್ಯಾಗೆಲ್ಲ ಮಣಕಾಲ್ಮಟ ನೀರಿತ್ತು. ಆಗ ಕೂಸಿನ ಎತ್ಕೊಂಡು ಪಲ್ಲಂಗದ ಮ್ಯಾಲೆ ಕುಂತಿದ್ದೆ. ರಾತ್ರಿಯಿಡೀ ಕಣ್ಣಿಗೆ ಕಣ್ಣು ಹಚ್ಚಲಿಲ್ಲ. ಜಾಗ ಬಿಟ್ಟು ಕದಲಿಲ್ಲ!’ ಇದು ತಾಲೂಕಿನ ಹೆಬಸೂರು ಗ್ರಾಮದ ಸಂಭಾಜಿ ಪ್ಲಾಟ್ (ಜನತಾ ಫ್ಲಾಟ್)ನಲ್ಲಿನ ಬಾಣಂತಿ ಮಂಜುಳಾ ಕಮಳಿ ಹೇಳುವ ಮಾತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶೇಖಪ್ಪ ಅಳಗವಾಡಿ ಹಾಗೂ ಬಸವ್ವ ದಂಪತಿಯ ಮಗಳು ಮಂಜುಳಾ. ಅವರನ್ನು ನವಲಗುಂದ ತಾಲೂಕಿನ ಬೆನ್ನೂರಿಗೆ ಮದುವೆ ಮಾಡಿಕೊಡಲಾಗಿದೆ. ಹೆರಿಗೆಗೆಂದು ತವರು ಮನೆಗೆ ಬಂದಿದ್ದಾಳೆ. ಹೆರಿಗೆಯಾಗಿ ನಾಲ್ಕೂವರೆ ತಿಂಗಳಾಗಿದೆ. ಇನ್ನೊಂದು ತಿಂಗಳು ತವರು ಮನೆಯಲ್ಲಿದ್ದು ಗಂಡನ ಮನೆಗೆ ಹೋಗುವವಳಿದ್ದಳು. ಶೇಖಪ್ಪ ಹಾಗೂ ಬಸವ್ವ ಇಬ್ಬರೂ ಕೂಲಿಕಾರ್ಮಿಕರು. ಸಂಭಾಜಿ ಪ್ಲಾಟ್‌ನಲ್ಲಿ ಸಣ್ಣದೊಂದು ಮಣ್ಣಿನ ಮನೆ ಇವರದ್ದು. 

ಮಳೆ ಬಂದರೆ ಸೋರುವ ಮನೆ 

ಮಳೆ ಬಂದರೆ ಮನೆಯೆಲ್ಲ ಸೋರುತ್ತದೆ. ಮೊನ್ನೆ ಕೂಡ ಬಂದ ಕುಂಭದ್ರೋಣ ಮಳೆಗೆ ಮನೆ ಸೋರಿದೆ. ಮನೆಯ ನೆಲದಿಂದಲೂ ನೀರು ಚಿಮ್ಮಿದೆ. ಬಾಣಂತಿಯನ್ನು ಕೆಳಕ್ಕೂ ಇಳಿಸುವಂತಿಲ್ಲ. ಚಾವಣಿ ಸೋರುತ್ತಿದ್ದರಿಂದ ಮಲಗಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಕೂಸಿಗೆ ಬೆಚ್ಚನೆ ಬಟ್ಟೆ ಸುತ್ತಿ, ತಾನೂ ರಗ್ಗು ಸುತ್ತುಕೊಂಡು ಇದ್ದುದ್ದರಲ್ಲೇ ಸೋರದ ಜಾಗೆ ನೋಡಿ ಬಾಣಂತಿಗೆ ಪಲ್ಲಂಗ ಹಾಕಿಕೊಟ್ಟಿದ್ದಾರೆ. ಆ ಪಲ್ಲಂಗದ ಮೇಲೆಯೇ ಮಗುವಿನೊಂದಿಗೆ ಕುಳಿತೇ ರಾತ್ರಿಯೆಲ್ಲ ಕಳೆದಿದ್ದಾಳೆ ಮಂಜುಳಾ. ‘ಆ ದಿನಾ ಸುರಿದ ಮಳಿ ನೋಡಿದ್ರ ನಾವು ಬದುಕಿ ಉಳಿತೇವಿ ಅಂಥ ನಂಬಿಕಿನ ಇರಲಿಲ್ಲ ನೋಡ್ರಿ..’ ಎಂದು ಹೇಳುತ್ತಲೇ ಅಂದಿನ ಸ್ಥಿತಿ ನೆನಸಿಕೊಂಡು ಮಂಜುಳಾ ಕಣ್ಣೀರಾದಳು. ಇದು ಈ ಮನೆಯೊಂದರ ಕಥೆಯಲ್ಲ. ಇಡೀ ಪ್ಲಾಟ್‌ನ ಜನತೆ ಇದೇ ರೀತಿ ನಿದ್ದೆಗಟ್ಟಿದೆ. 

ಕಾರಣವೇನು?

ಹೆಬಸೂರಿಗೆ ಕುಡಿಯುವ ನೀರು ಕೊಡುವ ಇಲ್ಲಿನ ಕೆರೆಯಿಂದ ಈ ಬಾರಿ ಇಲ್ಲಿನ ಜನತಾ ಪ್ಲಾಟ್‌ಗೆ ನೀರು ನುಗ್ಗಿದೆ. ಮಳೆಗೆ ತುಂಬಿರುವ ಕೆರೆ ನೀರು, ಕಾಲುವೆ ಮೂಲಕ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಇದರಿಂದಾಗಿ, 150 ಕ್ಕೂ ಹೆಚ್ಚು ಮನೆಗಳನ್ನು ಸುತ್ತುವರಿದಿದೆ. ಇನ್ನು ಅಂತರ್ಜಲ ಹೆಚ್ಚಾದ ಪರಿಣಾಮ ಮನೆಯ ನೆಲದಿಂದಲೂ ನೀರು ಚಿಮ್ಮುತ್ತಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಒದ್ದೆಯಾಗಿವೆ. ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿ. ಈ ಓಣಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ನೀರು ಹರಿದು ಹೋಗಲು ಸ್ಥಳವೇ ಇಲ್ಲದಂತಾಗಿದೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆ ವೇಳೆಯಲ್ಲೂ ಇಲ್ಲಿ ಮನೆಯೊಳಗಿನಿಂದ ನೀರು ಬರುತ್ತಿತ್ತು. ಇದೀಗ ಕಳೆದ ಎರಡ್ಮೂರು ದಿನಗಳ ಹಿಂದೆ ಸುರಿದ ಕುಂಭದ್ರೋಣ ಮಳೆ ಅಕ್ಷರಶಃ ಇಡೀ ಫ್ಲಾಟ್ ಜನತೆಯನ್ನೇ ತತ್ತರಿಸುವಂತೆ ಮಾಡಿದೆ. ಮೋಟಾರು ಹಚ್ಚಿ ಮನೆಯೊಳಗಿನ ನೀರನ್ನೆಲ್ಲ ಹೊರಗೆ ಬಿಡುತ್ತಿದ್ದಾರೆ ಇಲ್ಲಿನ ನಿವಾಸಿಗಳು. ಇನ್ನೂ ಹುಲ್ಲಿನ ಬಣವಿಗಳೆಲ್ಲ ಜಲಾವೃತವಾಗಿವೆ. ಜಾನುವಾರುಗಳ ಮೇವಿಗೆ ಕುತ್ತು ಬಂದಂತಾಗಿದೆ ಎಂದು ರೈತರ ಗೋಳು. 

ಚರಂಡಿ ಮಾಡಿಸಿ: 

ಈ ಬಡಾವಣೆಯಲ್ಲಿ ಚರಂಡಿ ಮಾಡಿಸುವ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಒಂದು ವೇಳೆ ಚರಂಡಿಗಳಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ನೀರು ಬರುತ್ತಿರಲಿಲ್ಲ. ಈ ಬಗ್ಗೆ ಶಾಸಕರಿಗೆ ಹತ್ತಾರು ಬಾರಿ ಆಗ್ರಹಿಸಿದ್ದೇವೆ. ಆದರೆ ಕ್ರಮ ಮಾತ್ರ ಆಗುತ್ತಿಲ್ಲ. ಇನ್ನಾದರೂ ನಮ್ಮ ಕಷ್ಟ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.  

ಕಾಲುವೆ ನೀರೆಲ್ಲ ಓಣಿಯೊಳಗೆ ನುಗ್ಗಿತು. ಇದರೊಂದಿಗೆ ಮನೆಯೊಳಗಿನಿಂದಲೂ ನೀರು ಬರಲು ಪ್ರಾರಂಭಿಸಿತು. ರಾತ್ರಿಯೆಲ್ಲ ನಿದ್ದೆ ಇಲ್ಲದೇ ಕಳೆದೆವು. ಕಾಲುವೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಯಡ್ರಾವಿ ನಿವಾಸಿ  ಮಲ್ಲಿಕಾರ್ಜುನ ಬೂದಪ್ಪ ಅವರು ಹೇಳಿದ್ದಾರೆ. 
 

click me!