ಹೈವೇ, ತೋಟ ಎರಡೂ ಕಡೆ ಸಲ್ಲುವ ಇಸುಜು ವಿ-ಕ್ರಾಸ್!

By Kannadaprabha NewsFirst Published Aug 11, 2022, 4:35 PM IST
Highlights

ದಾರಿ ಇಲ್ಲದಿದ್ದರೆ ದಾರಿ ಮಾಡಿಕೊಂಡು ಮುಂದೆ ಸಾಗುವ ಬೀಸ್ಟ್ ವಾಹನ ಇಸುಜು ವಿ ಕ್ರಾಸ್. .23.49 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನೂತನ ವಾಹನ ಲಭ್ಯವಿದೆ. ನೂತನ ವಾಹನ ಟೆಸ್ಟ್ ಡ್ರೈವ್ ಮಾಹಿತಿ ಇಲ್ಲಿದೆ.   ಈ ವಾಹನದ ವಿಶೇಷತೆ, ಫೀಚರ್ಸ್, ತಂತ್ರಜ್ಞಾನ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಬೆಂಗಳೂರು(ಆ.11):  ಐದು ಜನ ಆರಾಮಾಗಿ ಕುಳಿತು ಹೈವೇಯಲ್ಲಿ ವೇಗವಾಗಿ ದೂರದೂರಿಗೆ ಪ್ರವಾಸ ಹೋಗಬಹುದಾದ ಮತ್ತು ಅವಶ್ಯಕತೆ ಬಿದ್ದಾಗ ಕಲ್ಲು ಮಣ್ಣಿನ ರಸ್ತೆಯಲ್ಲಿ ಬಾಳೆ ಗೊನೆಗಳನ್ನೋ ಅಡಿಕೆ ರಾಶಿಯನ್ನೋ ಹೊರೆಸಿ ಸಾಗಿಸಬಹುದಾದ ಬಲಶಾಲಿ ವಾಹನದ ಹೆಸರು ಇಸುಜು ವಿ-ಕ್ರಾಸ್. ಏಕಕಾಲದಲ್ಲಿ ಚಿರತೆಯೂ ಆನೆಯೂ ಆಗಬಲ್ಲ ಪವರ್‌ ಫುಲ್ ವಿ-ಕ್ರಾಸ್‌ನ ಹೊಸ ವರ್ಷನ್ ಬಂದಿದೆ. ಇದರ ಆರಂಭಿಕ ಬೆಲೆ ರು.23,49,980.(ಎಕ್ಸ್-ಶೋರೂಮ್) ಬೇರೆ ಬೇರೆ ಊರುಗಳಿಗೆ ಈ ಬೆಲೆ ಹೆಚ್ಚು ಕಡಿಮೆ ಆಗುತ್ತದೆ. ಪಿಕಪ್ ವಾಹನಗಳಿಗೆ ಮೊದಲಿನಿಂದಲೂ ಇಸುಜು ಹೆಸರು ಚಾಲ್ತಿಯಲ್ಲಿದೆ. ಎಸ್ಟೇಟ್‌ಗಳಿಂದ ಹಿಡಿದು ಶಾಮಿಯಾನ ಹಾಕುವ ಮಂದಿಗಳವವರೆಗೆ ಬಹುತೇಕರು ಇಸುಜು ಪಿಕಪ್ ಬಳಸುತ್ತಾರೆ. ಅದೇ ಇಸುಜು ಸ್ಟೈಲಿಶ್ ಅವತಾರದಲ್ಲಿ ಬರತೊಡಗಿದ ಮೇಲೆ ಅನೇಕರಿಗೆ ಈ ಶಕ್ತಿಶಾಲಿ ವಾಹನದ ಮೇಲೆ ಲವ್ವು ಜಾಸ್ತಿಯಾಗಿದೆ. ಅದರಲ್ಲೂ ವಿ-ಕ್ರಾಸ್ ಬಹುತೇಕರ ಮನಸ್ಸು ಗೆದ್ದಿದೆ.

5.295 ಮೀ ಉದ್ದದ, 1.84 ಮೀ ಎತ್ತರದ, 1.86 ಮೀ ಅಗಲ ಇರುವ ಈ ವಾಹನ ಎಲ್ಲಾ ಥರದ ವಾತಾವರಣಕ್ಕೆ, ಎಲ್ಲಾ ಥರದ ರೋಡುಗಳಿಗೆ ಅಡ್ಜಸ್ಟ್ ಆಗುವ ಬೀಸ್ಟ್. ಅದಾಗುವುದಿಲ್ಲ, ಇದಾಗುವುದಿಲ್ಲ ಎಂಬ ಚಿರಿಪಿರಿ ಇಲ್ಲ. ಸರಿಯಾದ ರಸ್ತೆಯಲ್ಲಿ ಟೂ ವೀಲ್ ಡ್ರೈವ್ ಮಾಡಿಕೊಂಡು ಚಲಿಸಿ ಇದ್ದಕ್ಕಿದ್ದಂತೆ ಬೆಟ್ಟ ಗುಡ್ಡದ ಹರುಕುಮುರುಕು ರಸ್ತೆ ಸಿಕ್ಕರೆ ಫೋರ್ ವೀಲ್ ಡ್ರೈವ್ ಮೋಡ್‌ಗೆ ಹಾಕಿಕೊಂಡು ದಾರಿ ಇಲ್ಲದಿದ್ದರೂ ಅರ್ಧ ಬೆಟ್ಟ ಸಲೀಸಾಗಿ ಹತ್ತಬಹುದು.

 

 

 

ಭಾರತದಲ್ಲಿ ಇಸುಜು ಹೈಲಾಂಡರ್ ಹಾಗೂ ವಿ ಕ್ರಾಸ್ Z AT ಪಿಕ್‌ಅಪ್ ಬಿಡುಗಡೆ!

ವಿ-ಕ್ರಾಸ್ ಅಟೋಮ್ಯಾಟಿಕ್ ವರ್ಷನ್ ಹಿಡಿದುಕೊಂಡು ನಾವು ಸಾಗಿದ್ದು ಸಕಲೇಶಪುರದ ಬೆಟ್ಟದ ಭೈರವ ದೇಗುಲದ ಪಕ್ಕದಲ್ಲೇ ಇರುವ ಗುಡ್ಡದ ಕಡೆಗೆ. ದಾರಿ ಸರಿ ಇಲ್ಲದಿದ್ದುದರಿಂದ ಸಾಮಾನ್ಯವಾಗಿ ಕಾರುಗಳು ದೇಗುಲಕ್ಕಿಂತ 2 ಕಿಮೀ ದೂರದಲ್ಲೇ ನಿಲ್ಲಿಸುತ್ತಾರೆ. ಆದರೆ ವಿ-ಕ್ರಾಸ್ ನಿಜ ಅರ್ಥದ ಬೀಸ್ಟ್. ಮಳೆ ಬಿದ್ದು ಕೊಚ್ಚಿ ಹೋದ ರಸ್ತೆಯಲ್ಲೂ ಏದುಸಿರು ಬಿಡದೆ ಮೇಲೆ ಹತ್ತಿತು. ದಾರಿ ಇಲ್ಲದಿದ್ದರೂ ಗುಂಡಿ ಬಿದ್ದಿದ್ದರೂ ವಿ-ಕ್ರಾಸ್ ಹೆದರುವುದಿಲ್ಲ. ಕೆಜಿಎಫ್ ನ ರಾಕಿಭಾಯ್ ಥರ ದಾರಿ ಮಾಡಿಕೊಂಡು ಮುನ್ನುಗ್ಗುತ್ತದೆ.

1.9 ಲೀ ಡಿಡಿಐ ಇಂಜಿನ್ ಹೊಂದಿರುವ ಪವರ್ ವೆಹಿಕಲ್ ಇಸುಜು ವಿ-ಕ್ರಾಸ್. 2 ವೀಲ್ ಡ್ರೈವ್ ಮತ್ತು 4 ವೀಲ್ ಡ್ರೈವ್ ಮೋಡ್ ಎರಡೂ ಇದೆ. ಕುಟುಂಬ, ಫ್ರೆಂಡ್ಸ್ ಜೊತೆ ಬೆಟ್ಟ ಗುಡ್ಡ ನದಿ ದಡ ಸುತ್ತಲೂ ಈ ವಾಹನ ಹೇಳಿ ಮಾಡಿಸಿದ್ದು. ಕಾಲೇಜು ಹೋಗುವ ಮಕ್ಕಳು ಎದುರಿನ ಸೀಟಲ್ಲಿ ಕುಳಿತರೆ ಮಾತ್ರ ಕಷ್ಟ. ಯಾಕೆಂದರೆ ಇದರಲ್ಲಿ ಇರುವ ಇನ್‌ಫೋ ಟೇನ್‌ಮೆಂಟ್ ಸಿಸ್ಟಮ್ ಮಾತ್ರ ಹಳೆಯ ಕಾಲಕ್ಕೆ ಸೇರಿದ್ದು. ಹೊಸ ಹೊಸ ಪ್ರಯೋಗ ಮಾಡಲಾಗುವುದಿಲ್ಲ. ಸಣ್ಣದು ಮತ್ತು ಅತ್ಯಾಧುನಿಕ ಫೀಚರ್ ಕೂಡ ಇಲ್ಲ. ಪಾರ್ಕ್ ಅಸಿಸ್ಟ್ ಕ್ಯಾಮೆರಾ ಸೌಲಭ್ಯ ಕೂಡ ಕೊಂಚ ಹಿಂದಿನ ಜನರೇಷನ್‌ಗೆ ಸೇರಿದೆ.

 

D ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಹಾಗೂ S ಕ್ಯಾಬ್ ಬಿಡುಗಡೆ ಮಾಡಿದ ಇಸುಜು ಇಂಡಿಯಾ!

ಬೆಂಗಳೂರಿನಂಥಾ ಸಿಟಿಯಲ್ಲಿ ಇದನ್ನು ಪಾರ್ಕ್ ಮಾಡುವುದು ಸ್ವಲ್ಪ ತ್ರಾಸದಾಯಕ. ಬೇಕಾದಷ್ಟು ಜಾಗ ಇರುವಲ್ಲಿ ನಿಲ್ಲಿಸಿದರೆ ಈ ವಿ-ಕ್ರಾಸ್ ಒಬ್ಬ ಮಹಾರಾಜ. ಹಿಂದಿನ ಡೆಕ್‌ನಲ್ಲಿ 180 ಕೆಜಿಯಷ್ಟು ಜಾಗ ಇದೆ. ಬೇಕಿದ್ದರೆ ಡಿಕ್ಕಿ ತೆರೆಯಬಹುದು. ಬೇಡದಿದ್ದಾಗ ಮುಚ್ಚಬಹುದು. ಹೆಚ್ಚು ಜನರಿದ್ದರೆ ಡಿಕ್ಕಿ ತೆರೆದು ನಿಂತುಕೊಂಡು ಅಥವಾ ಕುಳಿತುಕೊಂಡು ಬೇಕಾದರೂ ಹೋಗಬಹುದು. ವಿ-ಕ್ರಾಸ್‌ನಲ್ಲಿ ಪ್ರಯಾಣ ಹೋದಾಗ ಸಣ್ಣ ಕಾರುಗಳ ಮಂದಿ ಜಾಗ ಮಾಡಿ ಕೊಡುವುದನ್ನು ನೋಡುವುದು ಬೋನಸ್ ಖುಷಿ. ಒಟ್ಟಾರೆ ಇದೊಂದು ಹೈವೆಗಳಲ್ಲಿ ವೇಗವಾಗಿ ಸಾಗುವ, ತೋಟದಲ್ಲಿ ಭಾರ ಎತ್ತಿಕೊಂಡು ಹೋಗುವ ಆಲ್ ರೌಂಡರ್ ಆಟಗಾರ.

click me!