ಕೇಂದ್ರ ಘೋಷಿಸಿದ್ದ 100 ಸ್ಮಾರ್ಟ್ ಸಿಟಿಗಳ ಪೈಕಿ ಅಭಿವೃದ್ಧಿ, ಕಾರ್ಯದಕ್ಷತೆ, ನಿಗದಿತ ಗುರಿ ಸಾಧನೆಯಲ್ಲಿ ದಾವಣಗೆರೆ ರಾಷ್ಟ್ರ ಮಟ್ಟದಲ್ಲಿ 15ನೇ ಸ್ಥಾನ, ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ.
ಕೇಂದ್ರ ಘೋಷಿಸಿದ್ದ 100 ಸ್ಮಾರ್ಟ್ ಸಿಟಿಗಳ ಪೈಕಿ ಅಭಿವೃದ್ಧಿ, ಕಾರ್ಯದಕ್ಷತೆ, ನಿಗದಿತ ಗುರಿ ಸಾಧನೆಯಲ್ಲಿ ದಾವಣಗೆರೆ ರಾಷ್ಟ್ರ ಮಟ್ಟದಲ್ಲಿ 15ನೇ ಸ್ಥಾನ, ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. ದೇಶದ ಟಾಪ್ 20 ಸ್ಮಾರ್ಟ್ ಸಿಟಿಗಳ ಪೈಕಿ 15 ನೇ ಸ್ಥಾನ ಪಡೆದ ದಾವಣಗೆರೆ ಇದೀಗ ಹಿಂದುಳಿದ ನಗರವನ್ನು ಮೇಲೆತ್ತುವ ಜೊತೆಗೆ ತಾನೂ ಮತ್ತಷ್ಟುಸ್ಮಾರ್ಟ್ ಆಗುವತ್ತ ಮುಂದಡಿ ಇಡುತ್ತಿರುವುದು ರಾಜ್ಯದ ಅದರಲ್ಲೂ ಮಧ್ಯ ಕರ್ನಾಟಕದ ಜನತೆ ಹೆಮ್ಮೆಪಡುವಂತೆ ಮಾಡಿದೆ.
ಕಾಮಗಾರಿ ವಿಳಂಬಕ್ಕೆ ದಂಡ
ಸ್ಮಾರ್ಟ್ ಸಿಟಿಯಡಿ 2016ರಲ್ಲೇ ಮೊದಲ ಹಂತದಲ್ಲಿ ಆಯ್ಕೆಯಾದ ದಾವಣಗೆರೆ ಮಹಾನಗರದಲ್ಲಿ ಆರಂಭದಲ್ಲಿ ಹೇಳಿಕೊಳ್ಳುವಂತಹ ಕೆಲಸ ಆಗಲಿಲ್ಲ. ಯೋಜನೆ ಬಗ್ಗೆ ಅಧಿಕಾರಿಗಳಿಗಾಗಲಿ ಅಥವಾ ಜನ ಪ್ರತಿನಿಧಿಗಳಿಗಾಗಲೀ ಅರಿವು ಸಹ ಅಷ್ಟಕ್ಕಷ್ಟೇ ಎಂಬಂತಿತ್ತು. ಯಾವಾಗ ಕಾಲ ಸರಿಯ ತೊಡಗಿತೋ ದಾವಣಗೆರೆ ಮೈಕೊಡವಿ, ಧೂಳೆಬ್ಬಿಸಿಕೊಂಡು ಅಭಿವೃದ್ಧಿಗೆ ಟೊಂಕ ಕಟ್ಟಿನಿಂತಿತು. ಕಾಮಗಾರಿ ವಿಳಂಬ ಮಾಡುವವರಿಗೆ ದಂಡ ವಿಧಿಸುವತ್ತಲೂ ಚಿತ್ತ ಹರಿಸಿದ್ದು ಕೆಲಸ ಭರದಿಂದ ಸಾಗಲು ಪರೋಕ್ಷ ಕಾರಣ.
ಪರಿಣಾಮ 2016ರಿಂದ ಈವರೆಗೆ ಘೋಷಣೆಯಾದ 1 ಸಾವಿರ ಕೋಟಿ ಪೈಕಿ 930 ಕೋಟಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾದ 396 ಕೋಟಿ ಅನುದಾನದಲ್ಲಿ 150 ಕೋಟಿ ಖರ್ಚು ಮಾಡಿ, ಸಾಕಷ್ಟುಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ. ಮೂಲ ಸೌಕರ್ಯ ಅಭಿವೃದ್ಧಿ ಜೊತೆಗೆ ಕುಡಿಯುವ ನೀರು ಪೂರೈಸುವ ಬ್ಯಾರೇಜ್ ನಿರ್ಮಾಣದಂತಹ ದೊಡ್ಡ ಸಾಹಸಕ್ಕೂ ಕೈ ಹಾಕಿ, ಈಗಾಗಲೇ ಬ್ಯಾರೇಜ್ ನಿರ್ಮಾಣಕ್ಕೂ ಓಂಕಾರ ಹಾಕಿರುವ ದಾವಣಗೆರೆಯ ಇತಿಹಾಸ ದೊಡ್ಡದಲ್ಲದಿದ್ದರೂ, ಈ ಊರಿನ ಜನರ ಇತಿಹಾಸ ದೊಡ್ಡದೆಂಬ ಮಾತನ್ನು ಮತ್ತಷ್ಟುಗಟ್ಟಿಗೊಳಿಸಿದೆ.
ದೇಶದ ಅತ್ಯುತ್ತಮ ಟಾಪ್ 20 ಸ್ಮಾರ್ಟ್‌ಸಿಟಿಗಳಲ್ಲಿ ದಾವಣಗೆರೆ!
ಬರೋಬ್ಬರಿ 88 ಯೋಜನೆ
ಸ್ಮಾರ್ಟ್ ಸಿಟಿಗೆ 2016 ರಲ್ಲೇ ಆಯ್ಕೆಯಾದ ದಾವಣಗೆರೆಗೆ ಈವರೆಗೆ ಯೋಜನೆಯಡಿ ಒಂದು ಸಾವಿರ ಕೋಟಿ ಮಂಜೂರಾಗಿದ್ದು, ಒಟ್ಟು 88 ಯೋಜನೆಗಳನ್ನು ದಾವಣಗೆರೆ ಮಹಾ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖವಾಗಿ ಹರಿಹರ ತಾಲೂಕು ರಾಜನಹಳ್ಳಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಲು 90 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಈಗಾಗಲೇ ಕಾರ್ಯಾದೇಶವೂ ಆಗಿದೆ. ಕೆಲಸ ಆರಂಭಗೊಳ್ಳುವುದಷ್ಟೇ ಬಾಕಿ ಇದೆ.
ಬ್ಯಾರೇಜ್‌ನಲ್ಲಿ ಸಂಗ್ರಹವಾದ ನೀರನ್ನು ದಾವಣಗೆರೆ ಮಹಾ ನಗರಕ್ಕೆ ನೀರು ಪೂರೈಸಲು ನೀಡುವ ಉದ್ದೇಶ ಈ ದೊಡ್ಡ ಕಾಮಗಾರಿಯದ್ದು. ಇನ್ನುಳಿದ 87 ಯೋಜನೆ ಪೈಕಿ 14 ಕಾಮಗಾರಿ ಪೂರ್ಣವಾಗಿದ್ದರೆ, 48 ಕಾಮಗಾರಿ ಪ್ರಗತಿ ಹಂತದಲ್ಲಿವೆ. 9 ಟೆಂಡರ್ ಪ್ರಕ್ರಿಯೆಯಲ್ಲಿದ್ದರೆ, ಉಳಿದ 17 ಡಿಪಿಆರ್ ಹಂತದಲ್ಲಿವೆ. ಕೆಲವು ಡಿಪಿಆರ್ ಆಗಿದ್ದರೂ ಅಂತಿಮವಾಗಿಲ್ಲ. 28.53 ಕೋಟಿ ವೆಚ್ಚದಲ್ಲಿ ಇಲ್ಲಿನ ಹಳೆ ಬಸ್ಸು ನಿಲ್ದಾಣ ಕೆಡವಿ, ಅತ್ಯಾಧುನಿಕ ಬಸ್ಸು ನಿಲ್ದಾಣ ನಿರ್ಮಿಸುವ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಕೇಜ್ರಿ ಪತ್ನಿಯ ಜನ್ಮದಿನ: ಪತಿ ಗೆದ್ದ ದೆಹಲಿಯೇ ಸುನಿತಾಗೆ ನಂದನವನ!
ಕಂಟ್ರೋಲಿಂಗ್ ಸೆಂಟರ್
ದಾವಣಗೆರೆಯ ಬೇತೂರು ರಸ್ತೆಯಲ್ಲಿ ಕೆಎಸ್ಸಾರ್ಟಿಸಿಗೆ ಸೇರಿದ 1 ಎಕರೆಗೂ ಅಧಿಕ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಮತ್ತೊಂದು ಸ್ಯಾಟ್‌ಲೈಟ್ ಬಸ್ಸು ನಿಲ್ದಾಣ ನಿರ್ಮಿಸಲಾಗುತ್ತಿದೆ. ರಿಂಗ್ ರಸ್ತೆ ಅಭಿವೃದ್ಧಿ 51 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿದ್ದು, ಶೀಘ್ರವೇ ಕಾರ್ಯಾದೇಶ ನೀಡಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲು ಸಿದ್ಧತೆ ನಡೆದಿವೆ. ಸ್ಮಾರ್ಟ್ ಸಿಟಿ ಯೋಜನೆ ಆಡಳಿತ ಕಚೇರಿ, ಟ್ರಾಫಿಕ್ ಮಾನಿಟರಿಂಗ್, ಕೆಎಸ್ಸಾರ್ಟಿಸಿ, ಅಗ್ನಿಶಾಮಕ ದಳ, ಪಾಲಿಕೆ ಹೀಗೆ ವಿವಿಧ ಇಲಾಖೆ, ಸಂಸ್ಥೆಗಳ ಕಂಟ್ರೋಲಿಂಗ್ ಸೆಂಟರ್ ಇದಾಗಿರುತ್ತದೆ.
ಸುಮಾರು 20 ಕೋಟಿ ವೆಚ್ಚದಲ್ಲಿ ಫುಟ್‌ಪಾತ್ ನಿರ್ಮಿಸಲಿದೆ. ಯೋಜನೆಯಡಿ ಒಟ್ಟು 120 ಕೋಟಿ ವೆಚ್ಚದಲ್ಲಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ನಿರ್ಮಿಸಲಿದ್ದು, ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಿಂದ 90 ಕೋಟಿ, ಕೆಎಸ್ಸಾರ್ಟಿಸಿಯಿಂದ 30 ಕೋಟಿ ಹಣ ಸಿಗಲಿದೆ. ಇಲ್ಲಿನ ಎಸ್ಸೆಸ್ಸೆಂ ನಗರದ ಬಳಿ ಕ್ರೀಡಾಂಗಣ ನಿರ್ಮಿಸಿ, ಅದಕ್ಕೆ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
ಚುನಾವಣಾ ಸೋಲು: ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಛೋಪ್ರಾ ರಾಜೀನಾಮೆ!
ಅಗ್ನಿಶಾಮಕ ದಳದ ಸಿಬ್ಬಂದಿಗೆ 1 ಕೋಟಿ ವೆಚ್ಚದ ಸುರಕ್ಷತಾ ಸಲಕರಣೆ, ಕಿಷ್ಕಿಂಧೆಯಂತಹ ರಸ್ತೆಯಲ್ಲೂ ಸಾಗಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಶಾಬನೂರಿನ ಸ್ಮಶಾನ ಸ್ಥಳದಿಂದ ಕುಂದುವಾಡವರೆಗೆ ಚರಂಡಿ ವ್ಯವಸ್ಥೆ ಪೂರ್ಣ ಮಾಡಲಾಗಿದೆ. ಸಪ್ತಗಿರಿ ಶಾಲೆ ಬಳಿ 10 ಕೋಟಿ ವೆಚ್ಚದ ದ್ವಿಮುಖ ರಸ್ತೆ ನಿರ್ಮಿಸಲಾಗುತ್ತಿದೆ. ವಿವಿ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಥೀಮ್ ಪಾರ್ಕ್, ಬಯಲು ರಂಗ ಮಂದಿರ ನಿರ್ಮಾಣವನ್ನು 6 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಸುಸ್ಥಿರ ಅಭಿವೃದ್ಧಿಗೆ ಆದ್ಯತೆ
ದಾವಣಗೆರೆ ಕುಡಿಯುವ ನೀರು ಪೂರೈಸುವ ಕುಂದುವಾಡ ಕೆರೆಗೆ ಮತ್ತಷ್ಟುಕಾಯಕಲ್ಪ ನೀಡುವಲ್ಲಿ ಅಲ್ಲಿನ ಗಿಡ ಮರಗಳನ್ನು ರಕ್ಷಿಸಿ, ಅವುಗಳ ಸುತ್ತಲೂ 16.5 ಕೋಟಿ ವೆಚ್ಚದಲ್ಲಿ ಏರಿ ಭದ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಕುಂದುವಾಡ ಕೆರೆಯ ಸುತ್ತ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುವುದು. ವಾಕಿಂಗ್ ಪಾಥ್, ಸೈಕಲ್ ಟ್ರ್ಯಾಕ್ ಸಹ ನಿರ್ಮಿಸಲಾಗುತ್ತಿದೆ. ಕೆರೆ ನೀರಿಗಾಗಲಿ, ಏರಿಗಾಗಲೀ, ಗಿಡ-ಮರಗಳಿಗಾಗಲೀ ಯಾವುದೇ ತೊಂದರೆಯಾಗದಂತೆ ಯೋಜನೆ ರೂಪಿಸಲಾಗಿದೆ. ಧೂಳುಮುಕ್ತ ದಾವಣಗೆರೆ ರಸ್ತೆಗಳ ನಿರ್ಮಾಣಕ್ಕಾಗಿ ಫುಟ್‌ಪಾತ್ ನಿರ್ಮಿಸಲಾಗುತ್ತಿದೆ.
20 ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ರ್ಯಾಂಕಿಂಗ್ ಪಡೆದ ಮಹಾ ನಗರಗಳು ಅಭಿವೃದ್ಧಿಯಲ್ಲಿ ಹಿಂದುಳಿದ ನಗರಗಳ ಅಭಿವೃದ್ಧಿಗೆ ಸಾಥ್ ನೀಡುವಂತೆ ಮೌಖಿಕ ಆದೇಶವನ್ನೂ ಯೋಜನೆ ಎಂಡಿಗಳಿಗೆ ನೀಡಲಾಗಿತ್ತು. ಅದರಂತೆ ದಾವಣಗೆರೆಗೆ ಉತ್ತರ ಪ್ರದೇಶದ ಬರೇಲಿಯನ್ನು ಮೇಲೆತ್ತುವ ಹೊಣೆ ನೀಡಿದ್ದು, ಇನ್ನೂ ಅಧಿಕೃತ ಆದೇಶ ಬಂದಿಲ್ಲ.
ಯೋಜನೆಗಳ ಯಶಸ್ವಿ ಅನುಷ್ಠಾನ, ಹಂಚಿಕೆಯಾದ ನಿಧಿ ಸದ್ಭಳಕೆ, ಕಾಲಮಿತಿಯಲ್ಲಿ ಅನುಸರಣ, ಸಾರ್ವಜನಿಕ ಅಭಿಪ್ರಾಯದ ಮೇರೆಗೆ ಟಾಪ್ 20ರ ಒಳಗೆ ಗುರುತಿಸಿಕೊಂಡ ರಾಜ್ಯದ ಏಕೈಕ ಮಹಾ ನಗರ ದಾವಣಗೆರೆ ಇದೀಗ ಧೂಳು ಕೊಡವಿಕೊಂಡು ಅಭಿವೃದ್ಧಿಗೆ ಟೊಂಕ ಕಟ್ಟಿನಿಂತಿದೆ. ತನ್ನ ಜೊತೆಗೆ ಬರೇಲಿಯನ್ನೂ ಅಭಿವೃದ್ಧಿಪಡಿಸುವ ಹೊಣೆ ಹೊರಬೇಕಾಗಿದೆ.
- ನಾಗರಾಜ ಎಸ್.ಬಡದಾಳ್