ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಶ್ರೀ ರಾಮ ಸೀತೆಯು ಅಯೋಧ್ಯೆ ಸೇರುವ ಸಾಧ್ಯತೆ ಇದೆ. ಈಗಾಗಲೇ ರಾಮಮಂದಿರ ನಿರ್ಮಾಣದ ಸಿದ್ಧತೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಈ ಚರ್ಚೆ ಆರಂಭವಾಗಿದೆ.
ಪ್ರವೀಣ್ ಹನಗವಾಡಿ
ಹರಿಹರ (ನ.14): ದಕ್ಷಿಣ ಕಾಶಿ, ಎರಡನೇ ಅಯೋಧ್ಯೆ ಎಂದೇ ಪ್ರಖ್ಯಾತಿ ಹೊಂದಿರುವ ಹರಿಹರ ಪುಣ್ಯ ಕ್ಷೇತ್ರದಲ್ಲಿರುವ ರಾಮ, ಸೀತೆ, ಲಕ್ಷ್ಮಣ ಅಯೋಧ್ಯೆಯ ಮೂಲ ವಿಗ್ರಹಗಳೆಂದು ಕರೆಯಲಾಗುವ ಸಮರ್ಥ ರಾಮದಾಸ್ ಸ್ವಾಮಿಯವರ ಆಸೆಯಂತೆ ಹರಿಹರದ ರಾಮ ಅಯೋಧ್ಯೆ ಸೇರುತ್ತಾನೆಯೇ ಎಂಬುದು ಈಗಿನ ಯಕ್ಷಪ್ರಶ್ನೆಯಾಗಿದೆ.
ಹೌದು, ಅಯೋಧ್ಯೆಗೆ ಮೊಗಲ್ ದೊರೆ ಬಾಬರ್ ಆಕ್ರಮಣ ಮಾಡಿದ ಸಂದರ್ಭದಲ್ಲಿ ವಿಗ್ರಹ ಉಳಿದರೆ ದೇಶಕ್ಕೆ ಮಾದರಿ ಎಂದು ತಿಳಿದ ಆಯೋಧ್ಯೆಯ ರಾಮ ಮಂದಿರದ ಅರ್ಚಕ ಶ್ಯಾಮಾನಂದ ಮಹಾರಾಜ್ ಅವರು ದಕ್ಷಿಣ ಭಾರತದ ಆಂಧ್ರ ಪ್ರದೇಶದ ಪೈಟಾನ್‌ನಲ್ಲಿದ್ದ ಏಕನಾಥ ಮಹರಾಜ್ ಅವರಿಗೆ ರಾಮ, ಸೀತಾ, ಲಕ್ಷ್ಮಣ ಮೂರ್ತಿಗಳನ್ನು ಹಸ್ತಾಂತರಿಸಿ ಪೂಜಿಸಲು ಸೂಚಿಸಿದರೆಂದು ಹೇಳಲಾಗಿದೆ.
ಏಕನಾಥ ಮಹರಾಜ್ ಅವರು ದತ್ತೋಪಾಸಕನಾದ ನಾನು ರಾಮನ ಮೂರ್ತಿಯನ್ನು ಹೇಗೆ ಪೂಜಿಸಲಿ ಎಂದು ಪ್ರಶ್ನೆ ಮಾಡಿದಾಗ, ಪರವಾಗಿಲ್ಲ, ಈಗ ಪೂಜಿಸಿ, ನಂತರ ರಾಮದಾಸ್ ಸ್ವಾಮಿ ನಂತರ ರಾಮನ ವಿಗ್ರಹಗಳನ್ನು ಹಸ್ತಾಂತರಿಸಲು ಅರ್ಚಕ ಶ್ಯಾಮಾನಂದ ಮಹಾರಾಜ್ ಹೇಳಿದ್ದಾರೆ. ನಂತರ ರಾಮದಾಸ್ ಸ್ವಾಮಿ ಅವರು ಅಯೋಧ್ಯೆ ಮೂಲದ ಮೂರ್ತಿಗಳನ್ನು ಹರಿಹರದ ತುಂಗಾಭದ್ರ ನದಿಯ ದಡದಲ್ಲಿ ಪ್ರತಿಷ್ಠಾಪಿಸಿದ್ದಾರೆ.
ನೂರಾರು ವರ್ಷಗಳಿಂದ ಹರಿಹರ ಸಮೀಪದ ನಾರಾಯಣಾಶ್ರಮ ಎಂದು ಪ್ರಖ್ಯಾತಿ ಹೊಂದಿರುವ ಸ್ಥಳದಲ್ಲಿ ಇಂದಿಗೂ ಪ್ರತಿನಿತ್ಯ ಪೂಜೆ, ಅಭಿಷೇಕ, ಪ್ರಸಾದ, ಗೋ ಶಾಲೆಗಳು ನಡೆಯುತ್ತಿದೆ. ಅಂದು ರಾಮದಾಸ್ ಸ್ವಾಮಿ ಅವರು ತಮ್ಮ ಶಿಷ್ಯರಿಗೆ ಈ ಮೂಲ ವಿಗ್ರಹ ಅಯೋಧ್ಯೆಯದ್ದಾಗಿದ್ದು, ಮುಂದೊಂದು ದಿನ ಈ ಮೂರ್ತಿಗಳು ಅಯೋಧ್ಯೆಯಲ್ಲಿಯೇ ಪ್ರತಿಷ್ಠಾಪಿಸಬೇಕು ಎಂದು ಹೇಳಿರುವುದು ದಾಖಲೆಯಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅದರಂತೆಯೇ 11ನೇ ಪೀಠಾಧಿಪತಿ ಸಮರ್ಥ ನಾರಾಯಣ ಮಹಾರಾಜರು ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ದಾಖಲೆಗಳಿವೆ. ಆದರೆ ಈ ಎಲ್ಲಾ ಮಾಹಿತಿಗಳಿಗೆ ಯಾವುದೇ ದಾಖಲೆಗಳು ಇಲ್ಲ. ಆದರೆ ಹರಿಹರದಲ್ಲಿರುವ ಈ ರಾಮ ಸೀತಾ ಲಕ್ಷ್ಮಣನ ಮೂರ್ತಿಗಳು ಮೂಲತಹ ಅಯೋಧ್ಯೆಯವೇ ಎಂಬುದು ನಂಬಿಕೆ.
ಈಚೆಗೆ ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದಾಗಿ ಮುಂದಿನ ಮೂರು ತಿಂಗಳೊಳಗೆ ರಾಮ ಮಂದಿರ ನಿರ್ಮಾಣಕ್ಕೆ ಒಂದು ಸಮಿತಿ ರಚಿಸಲು ಆದೇಶ ನೀಡಿದ್ದು ಇಲ್ಲಿ ಗಮನಿಸಬೇಕಾದ ಅಂಶ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ರಾಮ ಮಂದಿರದಲ್ಲಿ ಹರಿಹರದ ನಾರಾಯಣಾಶ್ರಮದಲ್ಲಿರುವ ಅಯೋಧ್ಯೆ ಮೂಲ ಮೂರ್ತಿಗಳೆನ್ನುವ ರಾಮ ಸೀತಾ, ಲಕ್ಷ್ಮಣನ ವಿಗ್ರಹಗಳು ಪ್ರತಿಷ್ಠಾಪನೆಗೊಳ್ಳಲಿ ಎಂಬುದು ಸಮರ್ಥ ನಾರಾಯಣ ಮಹಾರಾಜರ ಭಕ್ತರು ಹಾಗೂ ಈ ಭಾಗದ ರಾಮ ಭಕ್ತರ ಆಶಯವಾಗಿದೆ.