ಆರೋಗ್ಯಕ್ಕೆ ಮಾರಕವಾಗಿರುವ ಮದ್ಯಪಾನ ಹಾಗೂ ಗುಟ್ಕಾ ನಿಷೇಧಕ್ಕೆ ಕರೆ ನೀಡಲಾಗಿದೆ.
ದಾವಣಗೆರೆ [ಅ.13]: ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುವ ಜೊತೆಗೆ ಮಾರಕವಾದ ಮದ್ಯಪಾನ ನಿಷೇಧ, ಗುಟ್ಕಾ ನಿರ್ಮೂಲನೆಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶ್ರಮಿಸಬೇಕು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಕರೆ ನೀಡಿದರು.
ನಗರದ ಎಸ್‌ಎಂಕೆ ನಗರದ ಬಾಬು ಜಗಜೀನವರಾಂ ಭವನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ದಾವಣಗೆರೆ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ-ಎ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶನೈಶ್ಚರ ದೇವರ ಪೂಜೆ, ಶನಿ ಕಥೆ ಮತ್ತು ವಲಯ ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ದೊಡ್ಡ ಪಿಡುಗಾಗಿ ಕಾಡುತ್ತಿರುವ ಮದ್ಯಪಾನ, ಗುಟ್ಕಾ ನಿರ್ಮೂಲನೆಯತ್ತಲೂ ಸಂಸ್ಥೆ ಗಮನ ಹರಿಸಬೇಕು. ಕ್ಯಾನ್ಸರ್, ಅಕಾಲಿಕ ಸಾವಿಗೂ ಇವು ಕಾರಣವಾಗುತ್ತಿದ್ದು, ಈ ಬಗ್ಗೆ ಮಹಿಳಾ ಶಕ್ತಿ ಮೊದಲು ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಗುಟ್ಕಾ ನಿಷೇಧ ಕಾರಣ ಗುಟ್ಕಾ ಕಂಪನಿಗಳು ಅಡಕೆ, ತಂಬಾಕು ಪೊಟ್ಟಣಗಳನ್ನು ಬೇರೆ ಬೆರೆ ಮಾಡಿ, ಮಾರಾಟ ಮಾಡುತ್ತಿವೆ. ಇದನ್ನು ತಿನ್ನುವವರು ಪರಿಸರವನ್ನೂ ಹಾಳು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು. ಸಂಘದ ಸದಸ್ಯರು ತಮ್ಮ ಗಂಡಂದಿರ ಗುಟ್ಕಾ, ಮದ್ಯಪಾನದ ದುಶ್ಚಟ ಬಿಡಿಸಲು ಪಣ ತೊಡಬೇಕು ಎಂದು ಅವರು ಸಲಹೆ ನೀಡಿದರು.
ಯೋಜನೆಯ ಪದ್ದಯ್ಯ ಮಾತನಾಡಿದರು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ಗೌಡರ ಚನ್ನಬಸಪ್ಪ, ಹಿರಿಯ ವರ್ತಕ ಎಸ್.ಟಿ.ಕುಸುಮ ಶ್ರೇಷ್ಟಿ, ಶ್ರೀಕಾಂತ ಭಟ್, ಯೋಜನೆಯ ಜಯಂತ ಪೂಜಾರಿ, ವಾಣಿ, ಪ್ರವೀಣ ಇತರರು ಇದ್ದರು.