ಜೋಲಿ ಆಡುತ್ತಿದ್ದ ಬಾಲಕಿಗೆ ಅದೇ ಉರುಳಾಗಿ ಉಸಿರುಗಟ್ಟಿ ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ [ನ.01]: ಜೋಲಿ ಆಡುತ್ತಿದ್ದ ಬಾಲಕಿಗೆ ಅದೇ ಉರುಳಾಗಿ ಪರಿಣಮಿಸಿ, ತೀವ್ರ ಅಸ್ವಸ್ಥಗೊಂಡ ಬಾಲಕಿ ಸಾವನ್ನಪ್ಪಿದ ಘಟನೆ ಇಲ್ಲಿನ ಕೊರಚರಹಟ್ಟಿಯಲ್ಲಿ ಸಂಭವಿಸಿದೆ.
ನಗರದ ಬೇತೂರು ರಸ್ತೆಯ ಕೊರಚರಹಟ್ಟಿಯ ಸಂಜನಾ (11 ವರ್ಷ) ಮೃತ ಬಾಲಕಿ. ಮೂರ್ತೆಪ್ಪ, ಶಾಂತಮ್ಮ ದಂಪತಿ ಹಿರಿಯ ಪುತ್ರಿ ಸಂಜನಾ ಜಗಳೂರು ತಾ. ದೇವಿಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದಳು.
ದೀಪಾವಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹಬ್ಬಕ್ಕೆಂದು ಸಂಜನಾ ಮನೆಗೆ ಬಂದಿದ್ದಳು. ಮನೆಯಲ್ಲಿ ಮೂರ್ತೆಪ್ಪ, ಶಾಂತಮ್ಮ ದಂಪತಿಯ ಕಿರಿಯ ಮಗುವನ್ನು ಮಲಗಿಸಲು ಕಟ್ಟಿದ್ದ ಜೋಲಿಯಲ್ಲಿ ಸಂಜನಾ ಆಟವಾಡುತ್ತಿದ್ದಳು. ದುರಾದೃಷ್ಟವಶಾತ್ ಮನೆ ಮಂದಿಯೆಲ್ಲಾ ಹೊರಗೆ ಹೋಗಿದ್ದಾಗ ಜೋಲಿ ಆಡುತ್ತಿದ್ದ ಸಂಜನಾ ಕೊರಳು ಹಗ್ಗಕ್ಕೆ ಸಿಲುಕಿಕೊಂಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮನೆಯಲ್ಲಿ ಯಾರೂ ಇಲ್ಲದ ವೇಳೆ ಆದ ಘಟನೆಯಲ್ಲಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಸಾವು-ಬದುಕಿನ ಮಧ್ಯೆ ಸಾಕಷ್ಟುಹೋರಾಟ ಮಾಡಿರುವ ಸಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೃತಳ ಶರೀರವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತಂದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.