ವಿಮಾನದಲ್ಲಿ ಎದೆನೋವು ಕಾಣಿಸಿಕೊಂಡ ಸಹ ಪ್ರಯಾಣಿಕನಿಗೆ ಪ್ರಾಣ ಉಳಿಸಿ ದೇವರಾದ ಪುತ್ತೂರಿನ ವೈದ್ಯ

Gowthami K   | Kannada Prabha
Published : Oct 02, 2026, 10:29 AM IST
Doctor Dr Sreekumar

ಸಾರಾಂಶ

ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಈ ವೇಳೆ ಪುತ್ತೂರಿನ ಈಶ್ವರಮಂಗಲದ ವೈದ್ಯ ಡಾ. ಶ್ರೀಕುಮಾರ್ ಕತ್ರಿಬೈಲು ಅವರು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ಆತನ ಪ್ರಾಣ ಉಳಿಸಿದ್ದಾರೆ. ವೈದ್ಯರ ಈ ಮಾನವೀಯ ಕಾರ್ಯಕ್ಕೆ ವಿಮಾನದಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

ಪುತ್ತೂರು: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಸಹಪ್ರಯಾಣಿಕರೋರ್ವರಿಗೆ ಎದೆನೋವು ಕಾಣಿಸಿಕೊಂಡು ಚಡಪಡಿಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಈಶ್ವರಮಂಗಲದ ವೈದ್ಯ ಡಾ. ಶ್ರೀಕುಮಾರ್ ಕತ್ರಿಬೈಲು ಅವರು ತಕ್ಷಣವೇ ಆತನಿಗೆ ಉಪಚಾರ ನಡೆಸಿ, ಸೂಕ್ತ ಚಿಕಿತ್ಸೆಯನ್ನು ಒದಗಿಸಿ ಪ್ರಾಣಾಪಾಯದಿಂದ ಪಾರಾಗುವಂತೆ ಮಾಡಿದ್ದಾರೆ. ಡಾ.ಶ್ರೀಕುಮಾರ್ ಅವರ ಕಾರ್ಯಕ್ಕೆ ವಿಮಾನದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ವಾಪಾಸ್ ಬರುತ್ತಿದ್ದ ವೇಳೆ ಘಟನೆ

ಉತ್ತರ ಭಾರತದ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಾಸ್ ಬರುತ್ತಿದ್ದ ವೇಳೆ, ಲಕ್ನೋದಿಂದ ಮುಂಬೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಸೆ.೨೯ರ ಬೆಳಗ್ಗೆ ೯.೩೦ರ ವೇಳೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಎದೆಯನ್ನು ಗಟ್ಟಿಯಾಗಿ ಹಿಡಿದು ಚಡಪಡಿಸುತ್ತಿದ್ದ ಆತನಿಗೆ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆತನೊಂದಿಗೆ ಪತ್ನಿ ಹಾಗೂ ಸುಮಾರು ೨ ವರ್ಷದ ಮಗು ಜೊತೆಗಿದ್ದರು. ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ತಕ್ಷಣ, ವಿಮಾನದಲ್ಲಿ ಯಾರಾದರೂ ವೈದ್ಯರು ಇರುವಿರೇ ಎಂದು ಕೇಳಿದ್ದರು.

ತಕ್ಷಣವೇ ವಿಮಾನದಲ್ಲಿದ್ದ ಡಾ. ಶ್ರೀಕುಮಾರ್ ಕತ್ರಿಬೈಲ್ ಅವರು ಸ್ಪಂದಿಸಿ, ಪ್ರಯಾಣಿಕನ ಬಳಿ ತೆರಳಿ ಆತನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಪ್ರಥಮ ಚಿಕಿತ್ಸೆಗಳನ್ನು ನಡೆಸಿದ್ದರು. ಹೃದಯದ ಕಾರ್ಯವನ್ನು ಗಮನಿಸಿ, ರಕ್ತದೊತ್ತಡ ಪರಿಶೀಲಿಸಿ, ಅಗತ್ಯ ಔಷಧ ನೀಡಿ ತುರ್ತು ವೈದ್ಯಕೀಯ ನೆರವು ಒದಗಿಸಿದ್ದರು. ಕೆಲ ಸಮಯದಲ್ಲಿ ಪ್ರಯಾಣಿಕ ನಿಧಾನವಾಗಿ ಚೇತರಿಸಿ ಕೊಂಡಿದ್ದರು. ಲಕ್ಕೋದಿಂದ ಮುಂಬೈ ತಲುಪುವಷ್ಟರಲ್ಲಿ ಪ್ರಯಾಣಿಕನ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿ ವೀಲ್‌ಚೇರ್ ಹಾಗೂ ಆಂಬುಲೆನ್ಸ್ ವ್ಯವಸ್ಥೆಗೊಳಿಸಿ ಮುಂದಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು.

ಪುತ್ತೂರು ತಾಲೂಕಿನ ಈಶ್ವರಮಂಗಲದ ನಿವಾಸಿಯಾಗಿರುವ ಡಾ.ಶ್ರೀಕುಮಾರ್ ಕತ್ರಿಬೈಲು ಅವರು ಬಿಎಂಎಸ್, ಎಂಡಿ ಪದವೀಧರರಾಗಿದ್ದಾರೆ. ಕಳೆದ ೪೧ ವರ್ಷಗಳಿಂದ ಗ್ರಾಮೀಣ ಪ್ರದೇಶವಾಗಿರುವ ಈಶ್ವರಮಂಗಲದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.

ಸಹಪ್ರಯಾಣಿಕರು, ಸಿಬ್ಬಂದಿಗಳಿಂದ ಕೃತಜ್ಞತೆ

ಡಾ. ಶ್ರೀಕುಮಾರ್ ಕತ್ರಿಬೈಲು ಅವರ ಸಕಾಲಿಕ ಸೇವೆಯ ಕಾರಣದಿಂದಾಗಿ ಪ್ರಯಾಣಿಕರೊಬ್ಬರ ಜೀವ ಉಳಿದಿದ್ದು, ಅವರ ಸೇವೆಗಾಗಿ ವಿಮಾನದಲ್ಲಿದ್ದ ಇತರ ಸಹ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಥ್ಯಾಂಕ್ಯೂ ಡಾಕ್ಟರ್. ನೀವು ಒಂದು ಜೀವ ಉಳಿಸಿ ಬಿಟ್ಟಿರಿ ಒಂದು ಜೀವ ಅಪಾಯದಲ್ಲಿದ್ದ ಸಂದರ್ಭದಲ್ಲಿ ವೈದ್ಯರಾಗಿ ತಮ್ಮ ಕರ್ತವ್ಯ ಮೆರೆದು ಮಾನವೀಯತೆಯಿಂದ ಸ್ಪಂದಿಸಿದ್ದೀರಿ ಎಂದು ತಿಳಿಸಿದ ವಿಮಾನದಲ್ಲಿದ್ದ ಸಿಬ್ಬಂದಿಗಳು ಮತ್ತು ೨೫೦ ಮಂದಿ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ವೈದ್ಯರನ್ನು ಅಭಿನಂದಿಸಿದರು.

PREV
Read more Articles on
click me!

Recommended Stories

ಮಂಗಳೂರು ರೈಲ್ವೆಯಲ್ಲಿ ದೊಡ್ಡ ಬದಲಾವಣೆ: ಆದರೆ ಒಂದು ವಿಚಾರ ಜನರ ಆತಂಕಕ್ಕೆ ಕಾರಣವಾಯ್ತು!
'ನನ್ನ ಸ್ಥಾನ ಕೆಡವಿದರೆ ಆಕಾಶದಿಂದ ಬೆಂಕಿ ಸುರಿಸುತ್ತೇನೆ' MRPL ಸ್ಫೋಟಕ್ಕೆ ಕಾರಣವಾಯ್ತಾ ಜುಮಾದಿ ದೈವದ ಶಾಪ?