
ಮಂಗಳೂರು(ಮೇ.28) ಬಂಟ್ವಾಳದ ಅಬ್ದುಲ್ ರಹೀಂ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಅಬ್ದುಲ್ ರಹೀಮ್ ಹಾಗೂ ಕಲಂದರ್ ಶಫೀ ಮೇಲೆ ದಾಳಿ ಮಾಡಿದ ಆರೋಪಿಗಳ ಕೆಲ ಸುಳಿವು ಪತ್ತೆಯಾಗಿದೆ. ದಾಳಿ ವೇಳೆ ಅಬ್ದುಲ್ ರಹೀಂ ಮೃತಪಟ್ಟರೆ, ಮತ್ತೊಬ್ಬ ಕಲಂದರ್ ಶಫಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆ ಸಾಗಿಸುವ ನಡುವೆ ಕಲಂದರ್ ಶಫಿ ನೀಡಿದ ಮಾಹಿತಿ ಪ್ರಕಾರ 15 ಮಂದಿ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಚಯಸ್ಥ ಇಬ್ಬರು ಸೇರಿ 15 ಮಂದಿ ವಿರುದ್ದ ಪ್ರಕರಣ
ಮೃತ ಅಬ್ದುಲ್ ರಹೀಂ ಪರಿಚಯಸ್ಥ ಇಬ್ಬರು ಸೇರಿದಂತೆ ಒಟ್ಟು 15 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ. ರಹೀಂ ಪರಿಚಯಸ್ಥರೇ ಆಗಿರೋ ದೀಪಕ್, ಸುಮಿತ್ ಸೇರಿ 15 ಜನರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಗೊಂಡ ಕಲಂದರ್ ಶಫಿಯನ್ನು ಆಸ್ಪತ್ರೆ ಸಾಗಿಸುವ ಮಧ್ಯೆ ಮೊಹಮ್ಮದ್ ನಿಸಾರ್‌ಗೆ ನೀಡಿದ ಮಾಹಿತಿ ಪ್ರಕಾರ ದೂರು ದಾಖಲಿಸಲಾಗಿದೆ. ಮೊಹಮ್ಮದ್ ನಿಸಾರ್ ಬಂಟ್ವಾಳ ಗ್ರಾಮಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದೂರಿನಲ್ಲಿ ಉಲ್ಲೇಖಿಸಿದ ಘಟನೆ
ನಿಸಾರ್ ನೀಡಿರುವ ದೂರಿನ ಪ್ರಕಾರ ಬಂಟ್ವಾಳ ಪೊಲೀಸರು ಬಿಎನ್ ಎಸ್ 103, 109, 118(1), 118(2), 190, 191(1), 191(2), 191(3) ನಡಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ ಅಬ್ದುಲ್ ರಹೀಂ ಹಾಗೂ ಕಲಂದರ್ ಶಫಿ ಇಬ್ಬರು ಹೊಳ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿಕೊಂಡು ಕುರಿಯಾಳ ಗ್ರಾಮದ ಈರಾ ಕೋಡಿಯಾ ರಾಜೀವಿ ಎಂಬುವವರ ಮನೆ ಬಳಿ ಮರಲು ಅನ್‌ಲೋಡ್ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ಮಾರಾಕಾಸ್ತ್ರಗಳಲ್ಲಿ ಯದ್ವಾ- ತದ್ಭಾ ದಾಳಿ ಮಾಡಲಾಗಿದೆ. ಅಬ್ದುಲ್ ರಹೀಮ್ ತೀವ್ರ ಗಾಯಗೊಂಡ ಕಾರಣ ಬದುಕುಳಿಯಿಲ್ಲ. ಆದರೆ ಸ್ಥಳೀಯರು ಕೂಗಿಕೊಂಡಿದ್ದಾರೆ. ಹೀಗಾಗಿ ಕಲಂದರ್ ಶಫಿ ಮೇಲೆ ನಡೆದ ದಾಳಿ ಅರ್ಧಕ್ಕೆ ನಿಲ್ಲಿಸಿ ಆರೋಪಿಗಳು ಮಾರಕಾಸ್ತ್ರಗಳಿಂದ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಗಾಯಗೊಂಡ ಕಲಂದರ್ ಶಫಿ ಆಸ್ಪತ್ರೆ ಸಾಗಿಸುವ ಮದ್ಯೆ ಆ್ಯಂಬುಲೆನ್ಸ್‌ನಲ್ಲಿ ಮೊಹಮ್ಮದ್ ನಿಸಾರ್‌ಗೆ ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಐದು ಪೊಲೀಸ್ ತಂಡ ರಚನೆ
ಬಂಟ್ವಾಳದ ಅಬ್ದುಲ್ ರಹೀಂ ಹತ್ಯೆ ಪ್ರಕರಣದ ತನಿಖೆಗೆ ಐದು ಪೊಲೀಸ್ ತಂಡ ರಚಿಸಲಾಗಿದೆ. ಪ್ರತಿ ತಂಡಕ್ಕೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಡಿವೈಎಸ್ಪಿ ವಿಜಯ ಪ್ರಕಾಶ್ ನೇತೃತ್ವದಲ್ಲಿ 5 ಪೊಲೀಸ್ ತಂಡಗಳ ರಚನೆ ಮಾಡಲಾಗಿದೆ. ಈ ತಂಡದಲ್ಲಿ ಮಂಗಳೂರು ನಗರ ಸಿಸಿಬಿ ತಂಡ ಮತ್ತು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿ ಟೀಂ ರಚನೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿನ ಕೊಳತಮಜಲು ಬಳಿ ನಡೆದಿದ್ದ ಈ ದಾಳಿಯಲ್ಲಿ ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಗೂ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ( 32) ಹ*ತ್ಯೆ ನಡೆದಿದೆ.