
ಮಂಗಳೂರು (ಜು.18) ಕಳೆದ ಹಲವು ದಿನಗಳಿಂದ ಧರ್ಮಸ್ಥಳ ಭಾರಿ ಸುದ್ದಿಯಾಗುತ್ತಿದೆ. ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿಕೊಂಡ ಅನಾಮಿಕ ವ್ಯಕ್ತಿ ಧರ್ಮಸ್ಥಳದಲ್ಲಿ ಸರಣಿ ಹತ್ಯೆಗಳು ನಡೆದಿದ್ದು, ಆ ಮೃತದೇಹಗಳನ್ನು ಸ್ವತಃ ತಾನೇ ಹೂತುಹಾಕಿರುವುದಾಗಿ ಹೇಳಿ ದೂರು ದಾಖಲಿಸಿದ್ದಾನೆ. ಇಷ್ಟೇ ಅಲ್ಲ ಈ ಶವಗಳನ್ನು ತೆಗೆದು ತೋರಿಸುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಅನಾಮಿಕ ನಡೆದ 1995-2014 ರವರೆಗೆ ಧರ್ಮಸ್ಥಳದಲ್ಲಿ ಹಲವು ಹತ್ಯೆ, ಅತ್ಯಾ*ರ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.ಈ ಅನಾಮಿಕ ವ್ಯಕ್ತಿ ದಾಖಲಿಸಿದ ದೂರಿನಲ್ಲಿ ಏನಿದೆ?
ಅನಾಮಿಕ ವ್ಯಕ್ತಿ ದಾಖಲಿಸಿದ ದೂರಿನಲ್ಲಿ ಏನಿದೆ?
ಈ ಅನಾಮಿಕ ವ್ಯಕ್ತಿ ದಾಖಲಿಸಿದ ದೂರಿನಲ್ಲಿ ಹಲವು ಸ್ಫೋಟಕ ಆರೋಪಗಳನ್ನು ಧರ್ಮಸ್ಥಳದ ಕುರಿತು ಮಾಡಿದ್ದಾನೆ. ಈತ ದೂರಿನಲ್ಲಿ ಹೇಳಿರುವ ಪ್ರಕಾರ 1995ರಿಂದ 2014ರ ವರೆಗೆ ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ ಎಂದಿದ್ದಾನೆ. ಈ ಅವಧಿಯಲ್ಲಿ ಧರ್ಮಸ್ಥಳದಲ್ಲಿ ಸರಣಿ ಹತ್ಯೆಗಳು ನಡೆದಿದೆ. ಮಹಿಳೆ, ಯುವತಿಯರು, ಹೆಣ್ಣುಮಕ್ಕಳ ಮೇಲೆ ಸರಣಿ ಲೈಂಗಿಕ ಕಿರುಕುಳ, ಹಿಂಸೆ, ಅತ್ಯಾ*ಚಾರ ಪ್ರಕರಣಗಳು ನಡೆದಿದೆ ಎಂದು ಆರೋಪಿಸಿದ್ದಾನೆ.
ಈ ಪ್ರಕರಣಗಳ ಕುರಿತು ಪೊಲೀಸರಿಗೆ ಅಥವಾ ಬಹಿರಂಗಪಡಿಸಿದರೆ ತನಗೂ ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಕಾರಣ ಆದೇಶ ಪಾಲಿಸಿದ್ದೇನೆ. ಆದರೆ ಪಾಪ ಪ್ರಜ್ಞೆ ಕಾಡುತ್ತಿದೆ. ಕೆಲಸದ ಅವಧಿಯಲ್ಲಿ ಧರ್ಮಸ್ಥಳದ ಹಲವೆಡೆ ಹೆಣಗಳ ಹೂತುಹಾಕಿದ್ದೇನೆ. ನನಗೆ ನಿರ್ದೇಶನ ಮಾಡಿದಂತೆ ಕೆಲ ಶವಗಳನ್ನು ಸುಟ್ಟು ಹಾಕಿದ್ದೇನೆ. 2014ರ ಡಿಸೆಂಬರ್ ತಿಂಗಳಲ್ಲಿ ನಾನು ಧರ್ಮಸ್ಥಳದಿಂದ ಓಡಿ ಹೋದೆ.ಜೀವ ಭಯದಿಂದ ನನ್ನ ಕುಟುಂಬದೊಂದಿಗೆ ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದೇನೆ. ಪಾಪಪ್ರಜ್ಞೆಯ ಹೊರೆಯಲ್ಲಿಯೇ ನಾನು ಇನ್ನೂ ಬದುಕುತ್ತಿದ್ದೇನೆ. ನನ್ನ ಆತ್ಮಸಾಕ್ಷಿಯು ಮೌನ ಮುಂದುವರಿಸಲು ಒಪ್ಪಿಗೆ ನೀಡುತ್ತಿಲ್ಲ, ಅತ್ಯಾ*ರ, ಕೊಲೆಗೆ ಕಾರಣರಾದವರು ಯಾರೆಂದು ಗೊತ್ತಾಗಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಧರ್ಮಸ್ಥಳದಲ್ಲಿ ಹೂಳಿದ್ದ ಮೃತದೇಹದ ಕಳೇಬರ ಹೊರತೆಗೆದಿದ್ದೇನೆ. ಧರ್ಮಸ್ಥಳದಲ್ಲಿ ರಹಸ್ಯವಾಗಿ ಹೂತಿಟ್ಟ ಶವಗಳ ಸ್ಥಳ ತೋರಿಸಲು ನಾನು ಸಿದ್ಧ. ನಾನು ಹೂತಿಟ್ಟ ಶವಗಳನ್ನು ಪೊಲೀಸ್ ಸಮ್ಮುಖದಲ್ಲಿ ಹೊರತೆಗೆಯಲು ಸಿದ್ಧ. ಈ ದೂರಿನ ಆರೋಪಿತರು ಧರ್ಮಸ್ಥಳ ದೇವಸ್ಥಾನಕ್ಕೆ ಸಂಬಂಧಿಸಿದವರು. ಆರೋಪಿತ ವ್ಯಕ್ತಿಗಳ ಹೆಸರುಗಳನ್ನು ದೂರಿನಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಕಾರಣ ನಾನು ಹೇಳುವ ಕೆಲವು ವ್ಯಕ್ತಿಗಳು ಅತ್ಯಂತ ಪ್ರಭಾವಶಾಲಿಯಾಗಿದ್ದಾರೆ. ನನಗೆ, ನನ್ನ ಕುಟುಂಬಕ್ಕೆ ರಕ್ಷಣೆ ನೀಡಿದರೆ ಆರೋಪಿತರ ಹೆಸರು ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾನೆ. ನಾನು ಹೇಳುವ ಸತ್ಯ ಧೃಡಪಡಿಸಲು ಪಾಲಿಗ್ರಾಫ್ ಪರೀಕ್ಷೆಗೂ ಸಿದ್ಧನಿದ್ದೇನೆ. ನಾನು ಹೂತಿಟ್ಟ ಶವಗಳನ್ನು ಕಾನೂನಿನಂತೆ ಹೊರತೆಗೆಯಲು ಅವಕಾಶ ನೀಡಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಈತನ ದೂರಿನಲ್ಲಿದೆಯಾ ಸತ್ಯಾಂಶ?
ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿರುವ ಈತ ಧರ್ಮಸ್ಥಳದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾನೆ. ಈತ ನೀಡಿದ ದೂರಿನಲ್ಲಿ ಸತ್ಯಾಂಶವಿದೆಯಾ ಅನ್ನೋ ಚರ್ಚೆಗಳು ನಡೆಯುತ್ತಿದೆ. ಪರ ವಿರೋಧಗಳು ಕೇಳಿಬರುತ್ತಿದೆ. ಈ ಕುರಿತು ಸೂಕ್ತ ತನಿಖೆ ನಡೆಯಬೇಕಿದೆ. ಸದ್ಯ ದೂರಿನ ಆಧಾರದಲ್ಲೇ ಚರ್ಚೆಗಳು , ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.