
ಧರ್ಮಸ್ಥಳ (ಆ.20) ಧರ್ಮಸ್ಥಳದ ಬುರುಡೆ ಪ್ರಕರಣದ ಜೊತೆಗೆ ಅನನ್ಯಾ ಭಟ್ ನಾಪತ್ತೆ ಪ್ರಕರಣವೂ ಭಾರಿ ಸದ್ದು ಮಾಡುತ್ತಿದೆ. ತನ್ನ ಮಗಳು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿ ದೂರು ನೀಡಿರುವ ಸುಜಾತ್ ಭಟ್ ಹೋರಾಟ ನಡೆಸುತ್ತಿದ್ದಾರೆ. ಇದೀಗ ಸುಜಾತ್ ಭಟ್ ನೀಡಿದ ಅನನ್ಯಾ ಭಟ್ ಮಿಸ್ಸಿಂಗ್ ಕೇಸ್ ಎಸ್ಐಟಿಗೆ ವರ್ಗಾವಣೆ ಆಗಿದೆ. ಸುಜಾತ್ ಭಟ್ ತಮ್ಮ ದೂರಿನಲ್ಲಿ ನೀಡಿದ್ದ ಹಲವು ಹೇಳಿಕೆಗಳು ಅನುಮಾನ ಹೆಚ್ಚಿಸಿದೆ. ಮಣಿಪಾಲ ಕಾಲೇಜಿನಲ್ಲಿ ವ್ಯಾಸಾಂಗ, ಮಗಳ ಫೋಟೋ ಸೇರಿದಂತೆ ಹಲವು ಮಾಹಿತಿಗಳ ಅಸಲಿಯತ್ತು ಬಹಿರಂಗವಾಗಿದೆ. ಇದರ ಬೆನ್ನಲ್ಲೇ ತೀವ್ರ ಹಿನ್ನಡೆ ಎದುರಿಸುತ್ತಿರುವ ಸುಜಾತ್ ಭಟ್ ಇದೀಗ ಕೆಲ ಸ್ಪಷ್ಟನೆ ನೀಡಿದ್ದಾರೆ. ತಾನು ಕೊಟ್ಟ ದೂರು ಕಾಲ್ಪನಿಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ ತನ್ನ ಮಗಳು ಅನನ್ಯಾ ಭಟ್‌ನ್ನು ಅರವಿಂದ್ ಹಾಗೂ ವಿಮಲಾ ದಂಪತಿ ಸಾಕಿದ್ದರು ಎಂದಿದ್ದಾರೆ.
ನನ್ನ ಮಗಳು ಕಾಲ್ಪಿನಿಕ ಅಲ್ಲ. ರಂಗಪ್ರಸಾದ್ ಸೊಸೆ ಯಾರು ಎಂದು ನನಗೆ ಗೊತ್ತಿಲ್ಲ. ರಂಗ ಪ್ರಸಾದ್ ಅವರ ಮನೆಯಲ್ಲಿ ವಸಂತಿ ಇರಲಿಲ್ಲ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇಷ್ಟೇ ಅಲ್ಲ ಅವರ ಮನೆಯನ್ನು ನಾನು ಮಾರಾಟ ಮಾಡಿಲ್ಲ ಎಂದು ಸುಜಾತ್ ಭಟ್ ಹೇಳಿದ್ದಾರೆ.
ಸುಜಾತ್ ಭಟ್ ಇದೀಗ ಅನನ್ಯಾ ಭಟ್ ಬೆಳೆದ ಕತೆ ಹೇಳಿದ್ದಾರೆ. ಅನಿಲ್ ಭಟ್ ಜೊತೆ ಮದುವೆಯಾಗಿತ್ತು. ಮನೆಯವರು, ಆಪ್ತರು, ಕುಟುಂಬಸ್ಥರಿಗೆ ಗೊತ್ತಿಲ್ಲದೆ ಮದುವೆಯಾಗಿತ್ತು. ಅನಿಲ್ ಭಟ್ ಜೊತೆಗಿನ ಮದುವೆ ಫೋಟೋ ಇಲ್ಲ, ಮದುವೆ ದಿನಾಂಕವೂ ಗೊತ್ತಿಲ್ಲ. ನನಗೆ ಹುಟ್ಟಿದ ಮಗುವನ್ನು ಯಾರೋ ನದಿಗೆ ಬಿಡಲು ಹೋಗಿದ್ದರು. ಆದರೆ ಅರವಿಂದ್ ಹಾಗೂ ವಿಮಲಾ ಎಂಬ ದಂಪತಿ ನನ್ನ ಮಗಳು ಅನನ್ಯಾ ಭಟ್ ಸಾಕಿ ಬೆಳೆಸಿದ್ದರು ಎಂದು ಸುಜಾತ್ ಭಟ್ ಹೇಳಿದ್ದಾರೆ.
ಅರವಿಂದ್ ಹಾಗೂ ವಿಮಲಾ ದಂಪತಿ ಮನೆಯಲ್ಲಿ ಬೆಳೆದ ಅನನ್ಯಾ ಭಟ್‌ನ್ನು 7ನೇ ತರಗತಿ ಓದುವಾಗ ಕರೆತಂದು ಕೋಲ್ಕತಾದಲ್ಲಿ ಶಾಲೆ ಸೇರಿಸಿದ್ದೇನೆ. ಆದರೆ ಯಾವ ವರ್ಷ ಅನ್ನೋದು ನೆನಪಿಲ್ಲ. ಅನನ್ಯಾ ಭಟ್ ಅವಳನ್ನು ಸೇಠ್ ಅನ್ನುವರ ಮನೆಯಲ್ಲಿ ಓದುತ್ತಿದ್ದಳು. ಸೇಠ್ ತುಂಬಾ ಒಳ್ಳೆ ವ್ಯಕ್ತಿ. ನನ್ನ ಮಗಳನ್ನು ಸಾಕಿದ್ದರು. ನನ್ನ ಮಗಳ ಕುರಿತ ದಾಖಲಗಳು ಇಲ್ಲ ಎಂದು ಸುಜಾತ್ ಭಟ್ ಹೇಳಿದ್ದಾರೆ.
2003ರ ಜುಲೈನಲ್ಲಿ ಮೆಡಿಕಲ್ ಗೆ ಮಗಳನ್ನ ಅಡ್ಮಿಷನ್ ಮಾಡಿಸಲಾಗಿದೆ. ಡೊನೆಷನ್ ಕೊಟ್ಟು ಸೀಟು ಪಡೆಯಲಾಗಿತ್ತು. ಮಗಳು ಕಾಣೆಯಾಗಿದ್ದಾಳೆ ಎಂದು ದೂರು ಕೊಡಲು ಹೋದಾಗ ದೂರು ಪಡೆದಿಲ್ಲ. ಇತ್ತ ಧರ್ಮಸ್ಥಳದಲ್ಲಿ ನನ್ನ ಮೇಲೆ ಹಲ್ಲೆ ಮಾಡಲಾಗಿತ್ತು. ನಾನು ಕೋಮಾಗೆ ಜಾರಿ ಆಸ್ಪತ್ರೆಯಲ್ಲಿದ್ದಾಗ ಮನೆಗೆ ಬೆಂಕಿ ಇಟ್ಟಿದ್ದರು. ಹೀಗಾಗಿ ಎಲ್ಲಾ ದಾಖಲೆಗಳು ನಾಶವಾಗಿತ್ತು.
ನಾನು ನೀಡಿದ ದೂರನ್ನು ತನಿಖೆ ಮಾಡಿ ಎಂದು ಕೇಳಿಲ್ಲ. ನನ್ನ ಮಗಳ ಅಸ್ಥಿ ಕೊಡಿ ಎಂದು ಕೇಳಿದ್ದೇನೆ. ಅನಾಮಿಕ ವ್ಯಕ್ತಿ ದೂರು ನೀಡಿದಾಗ ವಕೀಲರ ಜೊತೆ ತೆರಳಿ ದೂರು ನೀಡಿದ್ದೇನೆ. ನನ್ನ ಬಳಿ ದಾಖಲೆ ಇದೆ ಎಲ್ಲವನ್ನೂ ಕೊಡುತ್ತೇನೆ. ಎಸ್ಐಟಿ ತನಿಖೆಗೆ ಎಲ್ಲಾ ದಾಖಲೆ ಕೊಡುತ್ತೇನೆ ಎಂದು ಸುಜಾತಾ ಭಟ್ ಹೇಳಿದ್ದಾರೆ. ಮಗಳ ಬರ್ತ್ ಸರ್ಟಿಫಿಕೇಟ್ ಇದೆ. ಎಲ್ಲಾ ದಾಖಲೆ ಬೇರೆಡೆ ಇಟ್ಟಿದ್ದೇನೆ ಎಂದು ಸುಜಾತಾ ಭಟ್ ಹೇಳಿದ್ದಾರೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣದಲ್ಲಿ ಹೋರಾಟ ಮಾಡುತ್ತಿದ್ದೇನೆ. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ಹೋಗಿದ್ದು ನಿಜ. ಮಹೇಶ್ ಶೆಟ್ಟಿ ತಿಮರೋಡಿ ನಾಲ್ಕು ದಿನ ಅವರ ಮನೆಯಲ್ಲಿ ಆಶ್ರಯ ಕೊಟ್ಟಿದ್ದರು ಎಂದು ಸುಜಾತ್ ಭಟ್ ಹೇಳಿದ್ದಾರೆ.