
ಪುತ್ತೂರು (ನ.03) ಅಪೂರ್ವ ಭಟ್ ಚೇತರಿಕೆಗೆ ಇಡೀ ರಾಜ್ಯ ಪ್ರಾರ್ಥಿಸಿತ್ತು. ರಸ್ತೆ ಅಪಘಾತದಲ್ಲಿ ಗಾಯಗೊಂಡ ಅಪೂರ್ವ ಭಟ್ ಬರುವಿಕೆಗಾಗಿ ಮೂರು ವರ್ಷದ ಮಗಳು, ಪತಿ ಆಶಿಶ್ ಸಾರಡ್ಕ್ ಹಗಳಿರುಳು ಪ್ರಾರ್ಥಿಸಿದ್ದರು. ಆದರೆ ಬರೋಬ್ಬರ 130 ದಿನ ಕೋಮಾದಲ್ಲಿದ್ದ ಅಪೂರ್ವ ಭಟ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೇ ಅಪಘಾತದಲ್ಲಿ ಗಾಯಗೊಂಡಿದ್ದ ಅಪೂರ್ವ ಭಟ್ ತಂದೆ ಈಶ್ವರ್ ಭಟ್ ನಿಧನರಾಗಿದ್ದಾರೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಈಶ್ವರ್ ಭಟ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಕಳೆದ 6 ತಿಂಗಳ ಹಿಂದೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಎಂಬಲ್ಲಿ ಬಸ್- ಕಾರು ನಡುವೆ ಡಿಕ್ಕಿ ಸಂಭವಿಸಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆದಿಲ ಗ್ರಾಮದ ಅಂಡೆಪುಣಿ ನಿವಾಸಿ ಈಶ್ವರ ಭಟ್ (70) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ನ.03) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇದೇ ಘಟನೆಯಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈಶ್ವರ ಭಟ್ ಅವರ ಪುತ್ರಿ ಅಪೂರ್ವ ಭಟ್ (32) ಅವರು ಕೆಲ ದಿನಗಳ ಹಿಂದಷ್ಟೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಇದೀಗ ತಂದೆಯೂ ನಿಧನರಾಗಿದ್ದಾರೆ. 130 ದಿನಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆದ ಅಪೂರ್ವ ಅವರ ಆರೋಗ್ಯ ಸ್ಥಿತಿ ಕುರಿತು ಅವರ ಪತಿ ಆಶೀಶ್ ಸಾರಡ್ಕ ಅವರು ಜಾಲತಾಣಗಳಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದರು. ಈ ವಿಚಾರ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಅದೇ ಅಪಘಾತದಲ್ಲಿ ಗಾಯಗೊಂಡಿದ್ದು ಈಶ್ವರ ಭಟ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರನ್ನು ಅಲ್ಲಿಂದ ಸ್ಥಳಾಂತರಗೊಳಿಸಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಜಂಕ್ಷನ್ ಬಳಿಯ ತಿರುವಿನಲ್ಲಿ ಮೇ ೨೭ರಂದು ಈ ದುರ್ಘಟನೆ ನಡೆದಿತ್ತು. ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ಅಪೂರ್ವ ಭಟ್ ತವರು ಮನೆಯಲ್ಲಿ ಶ್ರಾದ್ಧ ಕಾರ್ಯ ಇರುವ ಹಿನ್ನಲೆಯಲ್ಲಿ ತನ್ನ ಪುತ್ರಿಯೊಂದಿಗೆ ಬೆಳಗ್ಗೆ ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದರು. ತಂದೆ ಈಶ್ವರ್ ಭಟ್ ತನ್ನ ವ್ಯಾಗನರ್ ಕಾರಿನಲ್ಲಿ ಅವರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಮುರದಿಂದ ಪಡ್ನೂರಿಗೆ ಒಳರಸ್ತೆಗೆ ತಿರುಗಿಸುತ್ತಿದ್ದ ವೇಳೆ ಮುಂಭಾಗದಿಂದ ಆಗಮಿಸುತ್ತಿದ್ದ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿತ್ತು. ಇದರಿಂದಾಗಿ ಈಶ್ವರಭಟ್ ಮತ್ತು ಅಪೂರ್ವ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಕಾರಿನಲ್ಲಿದ್ದ ಅಪೂರ್ವ ಅವರ ಪುಟ್ಟ ಮಗು ಅಪಾಯದಿಂದ ಪಾರಾಗಿತ್ತು.