ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಚಿತ್ರೀಕರಣ: ಯೂಟ್ಯೂಬರ್ ಬಂಧನ

By Kannadaprabha NewsFirst Published Apr 18, 2024, 12:10 PM IST
Highlights

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಾವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಿಸಿಕೊಂಡು ತಾನು ಅಲ್ಲೇ ಒಂದು ದಿನ ಉಳಿದುಕೊಂಡಿದ್ದಾಗಿ ಸುಳ್ಳು ಪ್ರಚಾರ ಮಾಡಿದ ತಪ್ಪಿಗೆ ಯೂಟ್ಯೂಬರ್‌ ಒಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. 
 

ಬೆಂಗಳೂರು (ಏ.18): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಾವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಿಸಿಕೊಂಡು ತಾನು ಅಲ್ಲೇ ಒಂದು ದಿನ ಉಳಿದುಕೊಂಡಿದ್ದಾಗಿ ಸುಳ್ಳು ಪ್ರಚಾರ ಮಾಡಿದ ತಪ್ಪಿಗೆ ಯೂಟ್ಯೂಬರ್‌ ಒಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಯೂಟ್ಯೂಬರ್‌ ವಿಕಾಸ್ ಗೌಡ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಕೆಐಎನಿಂದ ಚೆನ್ನೈಗೆ ತೆರಳಲು ಬಂದಾಗ ಆರೋಪಿ ಈ ಕೃತ್ಯ ಎಸಗಿದ್ದ. ಈ ಬಗ್ಗೆ ಕೆಐಎ ಭದ್ರತಾ ಅಧಿಕಾರಿ ನೀಡಿದ ದೂರಿನ ಮೇರೆಗೆ ವಿಕಾಸ್‌ ಗೌಡನನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಿಂದ ಚೆನ್ನೈಗೆ ತೆರಳಲು ಏ.7 ರಂದು ಕೆಐಎಗೆ ವಿಕಾಸ್ ಬಂದಿದ್ದ. ಆ ವೇಳೆ ಟರ್ಮಿನಲ್‌ 2ರ ಬಳಿ ಬಂದು ಭದ್ರತಾ ತಪಾಸಣೆ ಮುಗಿಸಿಕೊಂಡು ಒಳಹೋದ ಆತ, ವಿಮಾನ ನಿಲ್ದಾಣದಲ್ಲಿ ವಿಡಿಯೋ ಚಿತ್ರೀಕರಣ ಮಾಡುವ ಸಲುವಾಗಿ ಬೋರ್ಡಿಂಗ್ ಆಗದೇ ವಿಮಾನ ನಿಲ್ದಾಣದೆಲ್ಲೆಡೆ ಕಾನೂನುಬಾಹಿರವಾಗಿ ಓಡಾಡಿದ್ದಾನೆ. ಆಗ ಅಲ್ಲಿ ಮೊಬೈಲ್ ಬಳಸಿ ವಿಡಿಯೋ ಮಾಡಿದ ವಿಕಾಸ್‌, ಏ.12 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ತಾನು ಒಂದು ದಿನ ವಿಮಾನ ನಿಲ್ದಾಣದಲ್ಲಿಯೇ ಉಳಿದುದ್ದಾಗಿ ಹೇಳಿದ್ದ. ಈ ವಿಡಿಯೋವನ್ನು ಕೆಐಎ ನಿಲ್ದಾಣದ ಭದ್ರತಾ ವಿಭಾಗದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರು.

ಸಾಕ್ಷ್ಯ ಇಲ್ದಿದ್ರೂ ಜೈಲಲ್ಲಿದ್ದ ಮೂವರ ಬಿಡುಗಡೆ: ಹೈಕೋರ್ಟ್ ಆದೇಶ

ಅತಿಕ್ರಮವಾಗಿ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದಲ್ಲದೆ ಸುಳ್ಳು ಹೇಳಿ ಸಾರ್ವಜನಿಕರಲ್ಲಿ ಭದ್ರತಾ ವ್ಯವಸ್ಥೆ ಕುರಿತು ತಪ್ಪು ಅಭಿಪ್ರಾಯ ಮೂಡುವಂತೆ ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ ವಿಕಾಸ್ ಗೌಡ ವಿರುದ್ಧ ವಿಮಾನ ನಿಲ್ದಾಣ ಠಾಣೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿ ಮುರಳಿ ಲಾಲ್‌ ಮೀನಾ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!