ಎರಡು ದಿನವಾದರೂ ಯುವಕರು ಮನೆಗೆ ಬಾರದ್ದರಿಂದ ಪೊಲೀಸರಿಗೆ ದೂರು
ಹರಿಹರ(ಅ.02): ಚೆಕ್‌ಡ್ಯಾಂನಲ್ಲಿ ಛಾಯಾಚಿತ್ರ ತೆಗೆಯುವಾಗ ಕಾಲು ಜಾರಿ ನೀರಿಗೆ ಬಿದ್ದ ಹರಿಹರದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಶನಿವಾರ ತಡವಾಗಿ ಬೆಳಕಿಗೆ ಬಂದಿದೆ. ನಗರದ ಆಶ್ರಯ ಕಾಲನಿ ನಿವಾಸಿಗಳಾದ ಪವನ್(25) ಪ್ರಕಾಶ್(24) ಎಂಬುವವರು ಮೃತ ದುರ್ದೈವಿಗಳಾಗಿದ್ದು ಮಕ್ಕಳನ್ನು ಕಳೆದುಕೊಂಡ ಪಾಲಕರ ರೋಧನೆ ಮುಗಿಲು ಮುಟ್ಟಿತ್ತು.
ಘಟನೆಯ ವಿವರ:
ಆಶ್ರಯ ಕಾಲನಿಯ ನಾಲ್ವರು ಸ್ನೇಹಿತರು ತಾಲೂಕಿನ ಹರಗನಹಳ್ಳಿ ಸಮೀಪದ ಚೆಕ್‌ಡ್ಯಾಂ ಬಳಿ ಬುಧವಾರ ಫೋಟೋ ಶೂಟ್ ಮಾಡಲು ಒಟ್ಟಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ಎಲ್ಲರೂ ತಮ್ಮ ತಮ್ಮ ಫೋಟೋ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರಕಾಶ ಹಾಗೂ ಪವನ್ ನೀರಿನಲ್ಲಿ ಮುಳುಗಿದ್ದಾರೆ. ಉಳಿದಿಬ್ಬರು ಸ್ನೇಹಿತರು ಗಾಬರಿಗೊಂಡು ಯಾರಿಗೂ ಹೇಳದೆ ತಮ್ಮ ಮನೆಗೆ ತೆರಳಿದ್ದಾರೆ. ಎರಡು ದಿನವಾದರೂ ಯುವಕರು ಮನೆಗೆ ಬಾರದಿರುವ ಕಾರಣ ನಗರ ಠಾಣೆಯಲ್ಲಿ ಮಕ್ಕಳು ಕಾಣೆಯಾಗಿದ್ದಾರೆ ಎಂದು ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು ತಕ್ಷಣ ಪೊಲೀಸರು ಜೊತೆಗಿದ್ದ ಇಬ್ಬರೂ ಸ್ನೇಹಿತರ ವಿಚಾರಿಸಿದಾಗ ಹರಗನಹಳ್ಳಿ ಚೆಕ್‌ಡ್ಯಾಂಗೆ ತೆರಳಿದ್ದಾಗ ಪವನ್ ಹಾಗೂ ಪ್ರಕಾಶ್ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದು ಬಂದಿದೆ.
ದಾವಣಗೆರೆ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಗೂಸಾ
ವಿಷಯ ತಿಳಿದು ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು ಮೃತದೇಹದ ಹುಡುಕಾಟ ಆರಂಭಿಸಿದ್ದಾರೆ. ಶನಿವಾರ ಹರಿಹರೇಶ್ವರ ದೇವಸ್ಥಾನ ಸಮೀಪ ಹಾಗೂ ಹಳೆಹರ್ಲಾಪುರ ಸಮೀಪದ ನದಿಯಲ್ಲಿ ಮೃತ ದೇಹಗಳು ದೊರಕಿದ್ದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.