ತುಮಕೂರು ಜಿಲ್ಲೆಯಲ್ಲಿ ಟಾಟಾ ಏಸ್‌ನಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಚಾಲಕ ಸೇರಿದಂತೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಓರ್ವನ ಮರ್ಮಾಂಗಕ್ಕೆ ಗಾಯಗಳಾಗಿವೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು (ಜ.5): ಸಂಸತ್ತಿನಲ್ಲಿ ಶುರುವಾದ ಅಂಬೇಡ್ಕರ್ ವಿವಾದ ರಾಜ್ಯಕ್ಕೂ ಹಬ್ಬಿದೆ.ದಿನನಿತ್ಯ ಅಂಬೇಡ್ಕರ್ ವಿಚಾರಕ್ಕೆ ಒಂದಲ್ಲೊಂದು ವಿವಾದ, ದುಷ್ಕೃತ್ಯ ನಡೆಯುತ್ತಿರುವುದು ಬೇಸರದಸಂಗತಿ. ಮೊನ್ನೆ ಕಿಡಿಗೇಡಿಗಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು, ಇದೀಗ ಟಾಟಾ ಏಸ್ ವಾಹನದಲ್ಲಿ ಜೈಭೀಮ್ ಹಾಡು ಹಾಕಿದ್ದಾನೆಂಬ ಕಾರಣಕ್ಕೆ ಕಿಡಿಗೇಡಿಗಳು ಯುವಕನ ಮೇಲೆ ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಿಡದ ಮುದ್ದೇನಹಳ್ಳಿಯಲ್ಲಿ ನಡೆದಿದೆ.
ಯುವಕ ದೀಪು(19), ಚಾಲಕ ನರಸಿಂಹ ಮೂರ್ತಿ ಹಲ್ಲೆಗೊಳಗಾದವರು. ರೈಲ್ವೆ ಪೊಲೀಸ್ ಚಂದ್ರಶೇಖರ್, ನರಸಿಂಹರಾಜು ಎಂಬುವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಇದನ್ನೂ ಓದಿ: Breaking News: ಅಂಬೇಡ್ಕರ್ ಭಾವಚಿತ್ರ ತುಳಿದು ಅವಮಾನ; ನಾಲ್ವರು ಕಿಡಿಗೇಡಿಗಳು ಅರೆಸ್ಟ್
ಹಲ್ಲೆಗೊಳಗಾದ ಯುವಕರು ಹೇಳುವ ಪ್ರಕಾರ, ಟಾಟಾ ಏಸ್‌ನಲ್ಲಿ ಅಂಬೇಡ್ಕರ್ ಜೈ ಭೀಮ್ ಹಾಡು ಹಾಕಿಕೊಂಡು ಹೊರಟಿದ್ದರು. ಈ ವೇಳೆ ಬೈಕ್ ಮೇಲೆ ಬಂದ ಆರೋಪಿಗಳು ವಾಹನ ಅಡ್ಡಗಟ್ಟಿ 'ಅಂಬೇಡ್ಕರ್ ಸಾಂಗ್ ಯಾಕೆ ಹಾಕಿದ್ದೀರ? ನಿಮ್ಮ ಜಾತಿ ಯಾವುದು?' ಎಂದು ಪ್ರಶ್ನಿಸಿದ್ದಾರೆ.
ಮರ್ಮಾಂಗಕ್ಕೆ ಒದ್ದು ಹಲ್ಲೆ:
ಹಾಡು ನಿಲ್ಲಿಸದ್ದಕ್ಕೆ ಚಾಲಕ, ಯುವಕನಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೆ ಟಾಟಾ ಏಸ್ ವಾಹನದಿಂದ ಹೊರಗೆ ಎಳೆದು ಹೊಡೆದಿದ್ದಾರೆ. ಘಟನೆಯಲ್ಲಿ ದೀಪು ಎಂಬಾತನ ಮರ್ಮಾಂಗಕ್ಕೆ ಗಾಯವಾಗಿದೆ. ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.