ಉದ್ಯೋಗ ಅರಸಿ 1 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಯುವಕ| ಬೆಂಗಳೂರಿನ ಜಯನಗರದ 4ನೇ ಹಂತದಲ್ಲಿ ನಡೆದ ಘಟನೆ| ತನ್ನ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಶಶಾಂಕ್| ಕೆಲ ಹೊತ್ತಿನ ಬಳಿಕ ಆತನ ಸ್ನೇಹಿತರು ಕೊಠಡಿಗೆ ಬಂದಾಗ ಬೆಳಕಿಗೆ ಬಂದ ಘಟನೆ|
ಬೆಂಗಳೂರು(ಅ.08): ಮುಖ್ಯಮಂತ್ರಿಯಾಗುವ ಕನಸು ಈಡೇರುವುದಿಲ್ಲ ಎಂದು ಜಿಗುಪ್ಸೆಗೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಯನಗರದ 4ನೇ ಹಂತದಲ್ಲಿ ಬುಧವಾರ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಶಾಂಕ್ (22) ಮೃತ ದುರ್ದೈವಿ. ತನ್ನ ಬಾಡಿಗೆ ಕೊಠಡಿಯಲ್ಲಿ ಬೆಳಗ್ಗೆ ಶಶಾಂಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಆತನ ಸ್ನೇಹಿತರು ಕೊಠಡಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಹುಬ್ಬಳ್ಳಿ: ಹಣದಾಸೆ ತೋರಿಸಿ ಕೈಕೊಟ್ಟ ಬಿಜೆಪಿ ಮುಖಂಡ, ಗೃಹಿಣಿ ಆತ್ಮಹತ್ಯೆ
ಬಿಕಾಂ ಪದವಿ ವ್ಯಾಸಂಗ ಮುಗಿಸಿದ್ದ ಶಶಾಂಕ್, ಒಂದೂವರೆ ತಿಂಗಳ ಹಿಂದೆ ತನ್ನೂರಿನಿಂದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಜಯನಗರದ 4ನೇ ಹಂತದಲ್ಲಿ ಸ್ನೇಹಿತರ ಜತೆ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದ ಆತ, ಕೆಲಸಕ್ಕೆ ಹಲವು ಕಡೆ ಅಲೆದಾಡಿದ್ದ. ಆದರೆ ಎಲ್ಲೂ ಸಹ ಉದ್ಯೋಗ ಸಿಗದಿದ್ದರಿಂದ ಜಿಗುಪ್ಸೆಗೊಂಡಿದ್ದ. ‘ನಾನು ಮುಖ್ಯಮಂತ್ರಿಯಾಗುವ ಗುರಿ ಹೊಂದಿದ್ದೇನೆ. ಆದರೆ ನನ್ನ ಕನಸುಗಳು ಈಡೇರುವುದಿಲ್ಲವೆಂದು ಗೆಳೆಯರ ಜತೆ ಶಶಾಂಕ್ ಬೇಸರ ತೋಡಿಕೊಂಡಿದ್ದ’ ಎಂದು ಪೊಲೀಸರು ಹೇಳಿದ್ದಾರೆ.
ಈ ಯಾತನೆಯಲ್ಲೇ ಆತ್ಮಹತ್ಯೆಗೆ ಆತ ನಿರ್ಧರಿಸಿದ್ದಾನೆ. ಎಂದಿನಂತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಆತನ ಗೆಳೆಯರು ಕೆಲಸಕ್ಕೆ ತೆರಳಿದ್ದಾರೆ. ಆಗ ಏಕಾಂಗಿಯಾಗಿದ್ದ ಶಶಾಂಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ನಂತರ ಶಶಾಂಕ್ ಮೊಬೈಲ್‌ಗೆ ಗೆಳೆಯರು ನಿರಂತರವಾಗಿ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದ ಕಾರಣಕ್ಕೆ ಆತಂಕಗೊಂಡ ಅವರು, ಕೂಡಲೇ ಕೊಠಡಿಗೆ ಬಂದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆದರೆ ಯಾವುದೇ ಮರಣಪತ್ರ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.