ತಿರುಪತಿ ಲಾಡ್ಜ್‌ವೊಂದರಿಂದ ವಿಡಿಯೋ ಮೆಸೆಜ್| 5 ಲಕ್ಷ ರು. ನೀಡುವಂತೆ ಬೇಡಿಕೆ| ಬಾಲಕನಿಂದ ಹೈಡ್ರಾಮಾ|ಬಾಲಕನ್ನು ಸುರಕ್ಷಿತವಾಗಿ ರಾಮನಗರಕ್ಕೆ ಕರೆತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಹಾಜರು ಪಡಿಸಿದ ಪೊಲೀಸರು|
ರಾಮನಗರ/ಕನಕಪುರ(ನ.09): ಬಾಲಕನೊಬ್ಬ ಹೆತ್ತವರಿಂದಲೇ ಹಣ ಪೀಕಲು ಅಪಹರಣದ ನಾಟಕವಾಡಿ ಪೋಲಿಸರ ಕೈಗೆ ಸಿಕ್ಕಬಿದ್ದಿರುವ ಘಟನೆ ರಾಮನಗರ ಕನಕಪುರ ನಗರದಲ್ಲಿ ನಡೆದಿದೆ. ನಗರದ ಮೇಗಳ ಬೀದಿ ವಾಸಿಯೊಬ್ಬರ ಪುತ್ರ ಅಪಹರಣದ ನಾಟಕವಾಡಿದವನು. ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿ, ನಗರದ ಬೂದಿಕೆರೆ ರಸ್ತೆಯಲ್ಲಿ ಅಂಗಡಿ ಇಟ್ಟಿದ್ದಾರೆ. ಇವರ ಪುತ್ರ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ತಿರುಪತಿಗೆ ಪ್ರಯಾಣ:
ನ.6ರಂದು ಸಂಜೆ ಬಾಲಕ ಜೆರಾಕ್ಸ್ ಗಾಗಿ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದಾನೆ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾನೆ. ಬೆಂಗಳೂರಿನಿಂದ ತಿರುಪತಿ ಬಸ್ ಹಿಡಿದು ನ.7ರಂದು ತಿರುಪತಿಗೆ ತೆರಳಿ ಲಾಡ್ಜ್ ವೊಂದರಲ್ಲಿ ರೂಮ್ ಬಾಡಿಗೆ ಪಡೆದು ತಂಗಿದ್ದಾನೆ.
ಮಗ ಮನೆಗೆ ಹಿಂದಿರುಗಲಿಲ್ಲವೆಂದು ಆತಂಕಕೊಂಡ ಪೋಷಕರು ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ನ.7ರಂದು ಬೆಳಗ್ಗೆ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆಗೆ ಶೌಚಗೃಹದಲ್ಲಿ ಬಾಲಕನನ ಕೈ, ಕಾಲು ಮತ್ತು ಬಾಯಿಗೆ ವೈರ್ ನಿಂದ ಕಟ್ಟಿರುವ ಅರೆ ಬೆತ್ತಲೆ ಸ್ಥಿತಿಯಲ್ಲಿರುವ ವಿಡಿಯೋ, ಫೋಟೋಗಳು ಹಾಗೂ 5 ಲಕ್ಷ ರುಪಾಯಿ ನೀಡುವಂತೆ ಬೇಡಿಕೆ ಇಟ್ಟಿರುವ ಸಂದೇಶ ಆತನ ಪಕ್ಕದ ಮನೆ ವ್ಯಕ್ತಿ ಮೊಬೈಲ್‌ಗೆ ಬಂದಿವೆ.
ಯುವತಿ ಕಿಡ್ನಾಪ್ ಮಾಡಲು ಬಂದ ಯುವಕ, ಪ್ಲಾನ್ ಫೇಲ್ ಆದಾಗ ಕೊಂದೇ ಬಿಟ್ಟ!
ಬಾಲಕನ ಪತ್ತೆಗೆ ವಿಶೇಷ ತಂಡ:
ಆ ವ್ಯಕ್ತಿ ಫೋಟೋಗಳನ್ನು ಪೋಷಕರಿಗೆ ತೋರಿಸಿದ ನಂತರ ಪೊಲೀಸರ ಗಮನಕ್ಕೆ ತಂದಿದ್ದಾರೆ. ಇದು ಮೇಲ್ನೋಟಕ್ಕೆ ಬಾಲಕನನ್ನು ಅಪಹಣ ಮಾಡಿರುವ ಕೃತ್ಯದಂತೆ ಕಂಡು ಬಂದಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರ ಮಾರ್ಗಸೂಚಿಯಂತೆ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ವೃತ್ತ ನಿರೀಕ್ಷಕ ಪ್ರಕಾಶ್ ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕಿದರು. ಆನಂತರ ಅಪರಾಧಿಗಳ ಪತ್ತೆಗಾಗಿ ಸಬ್ ಇನ್ಸ್‌ಪೆಕ್ಟರ್ ಅನಂತರಾಮ್ ಹಾಗೂ ಲಕ್ಷ್ಮಣಗೌಡ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.
ಈ ತಂಡ ಮೊಬೈಲ್‌ಗೆ ಬಾಲಕನ ಫೋಟೋಗಳು ಎಲ್ಲಿಂದ ಬಂದಿವೆ ಎಂಬುದನ್ನು ಪರಿಶೀಲಿಸಿದಾಗ ತಿರುಪತಿಯ ಸ್ಥಳ ಪತ್ತೆಯಾಗಿದೆ. ಇದರ ಜಾಡು ಹಿಡಿದು ಕಾರ್ಯಾಚರಣೆಗೆ ಇಳಿದ ವಿಶೇಷ ತಂಡ ನೇರವಾಗಿ ತಿರುಪತಿಗೆ ತೆರಳಿದೆ. ಮೊಬೈಲ್ ನೆಟ್‌ವರ್ಕ್ನ ಆಧಾರದ ಮೇಲೆ ತಿರುಪತಿಯ ಲಾಡ್ಜ್ ಮೇಲೆ ತಂಡ ದಾಳಿ ನಡೆಸಿತು.
ಹಣಕ್ಕಾಗಿ ಕಿಡ್ನಾಪ್ ನಾಟಕ:
ಲಾಡ್ಜ್ ನ ಕೊಠಡಿಯಲ್ಲಿ ಬಾಲಕ ಒಬ್ಬನೇ ಇರುವುದನ್ನು ಕಂಡು ಪೊಲೀಸರು ಒಂದು ಕ್ಷಣ ಆಶ್ಚರ್ಯಗೊಂಡಿದ್ದಾರೆ. ಅಲ್ಲಿಯೇ ಆತನನ್ನು ವಿಚಾರಣೆ ನಡೆಸಿದಾಗ ಪೋಷಕರಿಂದ ಹಣ ಪಡೆಯುವ ಸಲುವಾಗಿ ಸ್ನೇಹಿತರ ಜತೆಗೂಡಿ ಅಪಹರಣದ ನಾಟಕವಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ. ಇದು ಪೊಲೀಸರನ್ನು ಮಾತ್ರವಲ್ಲದೆ ಅವನ ಪೋಷಕರು ಬೆಚ್ಚಿ ಬೀಳುವಂತೆ ಮಾಡಿದೆ. ಪೊಲೀಸರು ಬಾಲಕನ್ನು ಸುರಕ್ಷಿತವಾಗಿ ರಾಮನಗರಕ್ಕೆ ಕರೆತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರ ಎದುರು ಹಾಜರು ಪಡಿಸಿದರು. ಆನಂತರ ಹೆಚ್ಚಿನ ವಿಚಾರಣೆಗಾಗಿ ಕನಕಪುರ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.