ಕರ್ತವ್ಯ ನಿರತ ಪಿಎಸ್‌ಐ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಬಂಧನ

By Kannadaprabha NewsFirst Published Nov 9, 2020, 7:24 AM IST
Highlights

ಸರ್ಫುದ್ದೀನ್‌ ಹಲ್ಲೆಗೊಳಗಾದ ಶ್ರೀರಾಂಪುರ ಠಾಣೆ ಪಿಎಸ್‌ಐ| ತಲೆಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು|  ಹಲ್ಲೆ ನಡೆಸಿದ ಆರೋಪಿ ಉದಯ್‌ ಕುಮಾರ್‌ ಎಂಬಾತನ ಬಂಧನ| ಯಶವಂತಪುರ ಆರ್‌ಟಿಒ ಬಳಿಕ ನಡೆದ ಘಟನೆ| 

ಬೆಂಗಳೂರು(ನ.09): ಕರ್ತವ್ಯ ನಿರತ ಸಬ್‌ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಮೇಲೆ ದ್ವಿಚಕ್ರ ವಾಹನ ಸವಾರನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಯಶವಂತಪುರದಲ್ಲಿ ಭಾನುವಾರ ನಡೆದಿದೆ.

ಶ್ರೀರಾಂಪುರ ಠಾಣೆ ಪಿಎಸ್‌ಐ ಸರ್ಫುದ್ದೀನ್‌ ಹಲ್ಲೆಗೊಳಗಾದವರು. ತಲೆಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿ ಉದಯ್‌ ಕುಮಾರ್‌ (34) ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಕಲಬುರಗಿ: ಹೆಂಡತಿ ಎದುರೇ ಅಳಿಯನಿಂದ ಅತ್ತೆ ಕೊಲೆ..!

ಸರ್ಫುದ್ದೀನ್‌ ಭಾನುವಾರ ಮಧ್ಯಾಹ್ನ 12.15ರಲ್ಲಿ ಪ್ರಕರಣವೊಂದರ ತನಿಖೆಗಾಗಿ ಯಶವಂತಪುರದ ಆರ್‌ಟಿಒ ಕಚೇರಿ ಬಳಿ ಮಫ್ತಿಯಲ್ಲಿದ್ದರು. ಆರೋಪಿಯ ತಂದೆ ನಡೆಸುತ್ತಿದ್ದ ಹೋಟೆಲ್‌ ಎದುರು ಸರ್ಫುದ್ದೀನ್‌ ನಿಂತುಕೊಂಡಿದ್ದರು. ಅದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿ, ಸರ್ಪುದ್ದೀನ್‌ ಅವರಿಗೆ ಗುದ್ದಿಸಿದ್ದ. ಅದನ್ನು ಪಿಎಸ್‌ಐ ಪ್ರಶ್ನಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ ಉದಯ್‌, ಪಿಎಸ್‌ಐರನ್ನು ಎಳೆದಾಡಿ ಹಲ್ಲೆ ಮಾಡಿದ್ದ. ಕಲ್ಲಿನಿಂದ ತಲೆಗೆ ಹೊಡೆದಿದ್ದ. ತಲೆಯಿಂದ ರಕ್ತ ಸೋರಲಾರಂಭಿಸಿತ್ತು. ನಂತರ, ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾಹಿತಿ ಬರುತ್ತಿದ್ದಂತೆ ಗಸ್ತಿನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿದ್ದರು.

ಈ ಕುರಿತು ಪಿಎಸ್‌ಐ ಸರ್ಫುದ್ದೀನ್‌ ದೂರು ನೀಡಿದ್ದರು. ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಉದಯ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

click me!