
ಯಾದಗಿರಿ (ನ.19): ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಮಾವನಿಂದಲೇ ಅತ್ಯಾ*ಚಾರಕ್ಕೊಳಗಾಗಿ ಗರ್ಭಿಣಿಯಾದ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಂಬಂಧದಲ್ಲಿ ಕಾಮುಕನ ಪತ್ನಿಯ ತಂಗಿಯಾಗಿರುವ ಬಾಲಕಿ. ಸಂತ್ರಸ್ತ ಅಪ್ರಾಪ್ತೆ ಈಗ ಯಾದಗಿರಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಆರೋಗ್ಯ ತಪಾಸಣೆ ವೇಳೆ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ವೈದ್ಯರಿಂದ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಆರೋಪಿ ಮಾವ ಈಗ ನಾಪತ್ತೆಯಾಗಿದ್ದು, ಅವನನ್ನು ಬಂಧಿಸಲು ಕೆಂಭಾವಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶೀಧರ್ ಕೋಸುಂಭೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಇದೊಂದು ಅತ್ಯಂತ ಗಂಭೀರ ವಿಚಾರ. ಘಟನೆ ನಡೆದರೂ ದೀರ್ಘಕಾಲ ಪ್ರಕರಣ ದಾಖಲಾಗದೇ ಇರುವುದು ದುರ್ದೈವ. ತಕ್ಷಣ ಪ್ರಕರಣ ದಾಖಲಿಸಿ, ಸಂತ್ರಸ್ತ ಅಪ್ರಾಪ್ತೆಗೆ ಸಂಪೂರ್ಣ ರಕ್ಷಣೆ ಮತ್ತು ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಆಯೋಗ ಸೂಚನೆ ನೀಡಿದೆ ಎಂದು ಶಶೀಧರ್ ಕೋಸುಂಭೆ ತಿಳಿಸಿದ್ದಾರೆ.
ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ. ಈ ದಾರುಣ ಘಟನೆ ಸಮಾಜದಲ್ಲಿ ಆಘಾತ ಮೂಡಿಸಿದ್ದು, ಬಾಲಕಿಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ