ಖಾಲಿ ಇಂಜೆಕ್ಷನ್‌ ಚುಚ್ಚಿ ಆಸ್ಪತ್ರೆಯಲ್ಲೇ ಬಾಣಂತಿಯ ಸಾಯಿಸಲು ಯತ್ನಿಸಿದ ನಕಲಿ ನರ್ಸ್‌ ಬಂಧನ!

By Santosh NaikFirst Published Aug 5, 2023, 5:19 PM IST
Highlights

ಆಗ ತಾನೆ ಮೊದಲ ಮಗುವಿಗೆ ಜನ್ಮ ನೀಡಿದ್ದ ಬಾಣಂತಿಗೆ ಖಾಲಿ ಇಂಜೆಕ್ಷನ್‌ ಚುಚ್ಚಿ ಸಾಯಿಸಲು ಯತ್ನಿಸಿದ ನಕಲಿ ನರ್ಸ್‌ಅನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ವಿಚಾರಣೆ ನಡೆಸುವ ವೇಳೆ ಪೊಲೀಸರಿಗೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳು ಬಹಿರಂಗವಾಗಿದೆ.

ತಿರುವನಲ್ಲಾ (ಆ.5): ಮೊದಲ ಮಗುವಿನ ಜನ್ಮ ನೀಡಿ ಕೆಲವೇ ದಿನವಾಗಿದ್ದ ಬಾಣಂತಿಗೆ ಖಾಲಿ ಇಂಜೆಕ್ಷನ್‌ ಚುಚ್ಚಿ ಸಾಯಿಸಲು ಪ್ರಯತ್ನಿಸಿದ ಘಟನೆ ಕೇರಳದ ತಿರುವನಲ್ಲಾದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 30 ವರ್ಷದ ಅನುಷಾ ಎನ್ನುವ ಮಹಿಳೆಯನ್ನು ಬಂಧಿಸಲಾಗಿದೆ. ನರ್ಸ್‌ ವೇಷದಲ್ಲಿ ಆಸ್ಪತ್ರೆಗೆ ಬಂದಿದ್ದ ಈಕೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದ 25 ವರ್ಷದ ಸ್ನೇಹಾ ಎನ್ನುವ ಯುವತಿಗೆ ಖಾಲಿ ಸಿರೀಂಜ್‌ ಚುಚ್ಚಲು ಪ್ರಯತ್ನ ಮಾಡಿದ್ದರು. ಈ ವೇಳೆ ಸಿಕ್ಕಿಬಿದ್ದ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಅನುಷಾ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಅನುಷಾ, ಸ್ನೇಹಾ ಅವರ ಪತಿ ಅರುಣ್‌ನನ್ನು ಮದುವೆಯಾಗಲು ಬಯಸಿದ್ದರು. ಇದಕ್ಕೆ ಅಡ್ಡವಾಗಿದ್ದ ಸ್ನೇಹಾಳನ್ನು ಸಾಯಿಸಿದರೆ, ತಾನು ಅರುಣ್‌ನನ್ನು ಮದುವೆಯಾಗಬಹುದು ಎಂದು ಈ ಕೃತ್ಯ ಎಸಗಿದ್ದಾಳೆ. ಅನುಷಾ ಹಾಗೂ ಅರುಣ್ ಶಾಲೆಯಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿದ್ದ ಸ್ನೇಹಾಳಿಗೆ ಖಾಲಿ ಇಂಜೆಕ್ಷನ್‌ ಚುಚ್ಚುವ ಮೂಲಕ ಆಕೆಯ ನರಗಳಲ್ಲಿ ಏರ್‌ಬಬಲ್‌ ತುಂಬಿ ಸಾಯಿಸುವ ಪ್ರಯತ್ನವನ್ನು ಅನುಷಾ ಮಾಡಿದ್ದಾಳೆ. ಆಕೆಯ ವಿಚಾರಣೆಯ ವೇಳೆ ತನ್ನ ಎಲ್ಲಾ ವ್ಯಾಟ್ಸ್‌ಆಪ್‌ ಚಾಟ್‌ಗಳನ್ನು ಆಕೆ ಡಿಲೀಟ್‌ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದು. ಡಿಲೀಟ್‌ ಮಾಡಿರುವ ಈ ಸಂದೇಶಗಳನ್ನು ವಾಪಾಸ್‌ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸ್ನೇಹಾ ಇತ್ತೀಚೆಗಷ್ಟೇ ತಮ್ಮ ಮೊದಲ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು.

ಇನ್ನು ಅನುಷಾ, ಮಾವೆಲಿಕರಾದ ಆಸ್ಪತ್ರೆಯಲ್ಲಿ ಫಾರ್ಮಸಿ ತರಬೇತಿಯನ್ನೂ ಪಡೆದುಕೊಂಡಿದ್ದರು. ಶುಕ್ರವಾರ ಪರುಮಲಾದಲ್ಲಿನ ಸೇಂಟ್‌ ಗ್ರೆಗೋರಿಯಸ್‌ ಮೆಡಿಕಲ್‌ ಮಿಷನ್‌ ಆಸ್ಪತ್ರೆಗೆ ಬಂದಿದ್ದ ಅನುಷಾ, ಬೇರೆ ಬೇರೆ ಕಡೆಗಳಿಂದ ನಕಲಿ ನರ್ಸ್‌ ಕೋಟ್‌ಗಳು 240 ಎಂಎಲ್‌ನ ಖಾಲಿ ಸಿರೀಂಜ್‌ಅನ್ನು ತಂದಿದ್ದರು. ನರ್ಸ್‌ ರೂಪದಲ್ಲಿ ಸ್ನೇಹಾ ಇದ್ದ ಕೋಣೆಗೆ ಅರುಣ್‌ ಇಲ್ಲದೇ ಇದ್ದ ಸಮಯದಲ್ಲಿ ಅನುಷಾ ಬಂದಿದ್ದರು. ಈ ವೇಳೆ ಸ್ನೇಹಾ ಅವರ ತಾಯಿ ಈಗಾಗಲೇ ಸ್ನೇಹಾಳ ಡಿಸ್‌ಚಾರ್ಜ್‌ ಆಗಿದೆ ಹಾಗಿದ್ದರೂ ಇಂಜೆಕ್ಷನ್‌ನ ಅಗತ್ಯವೇನು ಎಂದು ಅನುಶಾಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ತಾಯಿ ಪ್ರಶ್ನೆ ಮಾಡುವ ವೇಳೆಗಾಗಲೇ ಸ್ನೇಹಾಳ ಕೈಗಳನ್ನು ಹಿಡಿದು ಆಕೆಯ ನರಗಳಿಗೆ ಖಾಲಿ ಸಿರೀಂಜ್‌ ಚುಚ್ಚುವ ಪ್ರಯತ್ನ ಮಾಡಿದ್ದಾಳೆ.

ಸ್ನೇಹಾಳ ತಂದೆ ಸುರೇಶ್‌ ಹೇಳಿರುವ ಪ್ರಕಾರ, ಅನುಷಾ ಮೂರು ಬಾರಿ ಖಾಲಿ ಸಿರೀಂಜ್‌ ಚುಚ್ಚಲು ಪ್ರಯತ್ನ ಮಾಡಿದ್ದಾಳೆ. ಆದರೆ, ಪ್ರತಿ ಬಾರಿಯೂ ಅದು ವಿಫಲವಾಗಿತ್ತು ಎಂದಿದ್ದಾರೆ. ಇನ್ನು ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಅನುಷಾ ಇಡೀ ಪ್ರಕರಣದಲ್ಲಿ ಸ್ನೇಹಾಳದ್ದು ಸಹಜ ಸಾವು ಎಂದು ನಿರೂಪಿಸಲು ಪ್ರಯತ್ನಪಟ್ಟಿದ್ದಳು. ಸ್ನೇಹಾ ನೀಡಿದ ದೂರಿನ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿರುವನಲ್ಲಾ ಡಿವೈಎಸ್‌ಪಿ ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಅನುಷಾ ಹಾಗೂ ಅರುಣ್‌ ಇಬ್ಬರ ಪೋನ್‌ಗಳನ್ನೂ ಪೊಲೀಸರು ಸೀಜ್‌ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೂ ಸ್ನೇಹಾಳ ಪತಿ ಅರುಣ್‌ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದಿದ್ದಾರೆ.

Bengaluru: ಇದು ಧಾರವಾಹಿ ಅಲ್ಲ, ನೈಜ ಘಟನೆ: ಆಸ್ತಿಗಾಗಿ ತಾಯಿಯನ್ನೇ ಕೊಲೆ ಮಾಡಿದ ಮಗ

ಖಾಲಿ ಸಿರೀಂಜ್‌ ಚುಚ್ಚಿದಲ್ಲಿ ಏನಾಗುತ್ತದೆ?: ಖಾಲಿ ಸಿರಿಂಜ್ ಅನ್ನು ಚುಚ್ಚುವುದರಿಂದ ರಕ್ತನಾಳಕಕ್ಕೆ ಹಚ್ಚುವರಿ ಗಾಳಿಯ ಬಬಲ್‌ಗಳನ್ನು ತುಂಬಿದಂತಾಗುತ್ತದೆ. ಇದು ಏರ್ ಎಂಬಾಲಿಸಮ್ ಎಂಬ ಹಾನಿಕಾರಕ ಸ್ಥಿತಿಗೆ ಕಾರಣವಾಗಬಹುದು. ಏರ್ ಎಂಬಾಲಿಸಮ್ ರಕ್ತದ ಹಾದಿಯನ್ನು ನಿರ್ಬಂಧಿಸಲಿದ್ದು, ಜೀವಕ್ಕೆ ಅಪಾಯಕಾರಿ ಆಗಲಿದೆ. ಸ್ನೇಹಾಳ ರಕ್ತನಾಳಕ್ಕೆ ಖಾಲಿ ಇಂಜೆಕ್ಷನ್‌ ತುಂಬಿದರೆ, ಅದರಿಂದ ಹೃದಯಾಘಾತವಾಗುತ್ತದೆ. ಇದನ್ನು ಸಾಧಿಸಲು ಅನುಶಾ ಪ್ರಯತ್ನಿಸಿದ್ದಳು ಎನ್ನಲಾಗಿದೆ.

Bengaluru: ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ರೌಡಿ ಶೀಟರ್‌ ಬರ್ಬರ ಹತ್ಯೆ!

click me!