
ಹಾಸನ (ಡಿ.28): ಹಾಸನದ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮನೆಗೆ ನುಗ್ಗಿ ಮಹಿಳೆಯೊಬ್ಬರನ್ನು ಕತ್ತು ಸೀಳಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮಹಿಳೆಯು ದುಷ್ಕರ್ಮಿಗಳಿಗೆ ಯಾವುದೇ ತೊಂದರೆ ಕೊಡದೇ ನಮ್ಮ ಮನೆಯಲ್ಲಿರುವುದಕ್ಕೆ ಬಾಡಿಗೆ ಕೊಡಿ ಎಂದು ಕೇಳಿದ್ದೇ ಆಕೆಯ ಜೀವಕಕ್ಕೆ ಮುಳುವಾಗಿ ಹೋಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಡಿ. 24 ರಂದು ಪಾರ್ವತಮ್ಮ ಎಂಬ ಮಹಿಳೆಯ ಕೊಲೆ ಆಗಿತ್ತು. ಮನೆಯಲ್ಲಿ ಗಂಡ ಇಲ್ಲದ ವೇಳೆಯನ್ನು ನೋಡಿಕೊಂಡು ಮನೆಯನ್ನು ಹೊಕ್ಕಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ಒಬ್ಬಂಟಿ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇನ್ನು ಮನೆ ರಸ್ತೆಯಿಂದ ಇಬ್ಬರು ದುಷ್ಕರ್ಮಿಗಳು ಮಾಸ್ಕ್ ಧರಿಸಿಕೊಂಡು ಬೈಕ್‌ನಲ್ಲಿ ಹೋಗಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಎಫ್‌ಎಸ್‌ಎಲ್ ತಂಡ ಹಾಗೂ ಶ್ವಾನದಳದಿಂದ ಪರಿಶೀಲನೆ ಮಾಡಲಾಗಿತ್ತು. ನಂತರ ಮಹಿಳೆಯನ್ನು ಕೊಲೆ ಮಾಡಿದವರ ಜಾಡು ಹಿಡಿದಾಗ ಅರಕಲಗೂಡಿನ ಶಫೀರ್ ಹಾಗೂ ಕೋಲಾರ ಜಿಲ್ಲೆಯ ಮಾಲೂರಿನ ಸೈಯ್ಯದ್ ಅವರನ್ನು ಬಂಧಿಸಿದ್ದಾರೆ.
Hassan: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಕತ್ತು ಸೀಳಿದ ದುಷ್ಕರ್ಮಿಗಳು
ಮನೆ ಬಾಡಿಗೆಯನ್ನು ಕೊಡುವಂತೆ ಕೇಳಿದ್ದೇ ತಪ್ಪಾಯ್ತು: ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಕಾರಣವೇನು ಎಂದು ಕೇಳಿದಾಗ ಅವರು ಬಾಯಿಬಿಟ್ಟ ನೈಜ ಸತ್ಯ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಇಲ್ಲಿ ಮನೆಯನ್ನು ಬಾಡಿಗೆಗೆ ಕೊಟ್ಟಮೇಲೆ ಅವರಿಗೆ ಬಾಡಿಗೆ ಕಟ್ಟಿ ಎಂದು ಹೇಳಿದ್ದೇ ದೊಡ್ಡ ತಪ್ಪಾಗಿದೆ. ಹೊಳೆನರಸೀಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಪಾರ್ವತಮ್ಮ ಅವರು ತಮ್ಮ ಮನೆಯನ್ನು ಎರಡು ವರ್ಷಗಳ ಹಿಂದೆ ಶಫೀರ್ ಎಂಬಾತನಿಗೆ ಬಾಡಿಗೆ ನೀಡಿದ್ದರು. ಮೊದಲು ಮಾಸಿಕ ಬಾಡಿಗೆ ಪಾವತಿಸಿಕೊಂಡು ಹೋಗುತ್ತಿದ್ದು, ಮಾಲೀಕರ ವಿಶ್ವಾಸ ಗಳಿಸಿಕೊಂಡಿದ್ದನು. ಆದರೆ, ನಂತರ ಮೂರು -ಐದು ತಿಂಗಳಿಗೆ ಬಾಡಿಗೆ ಕೊಡಲು ಆರಂಭಿಸಿದರು. ಇದಾದ ಮೇಲೆ ಶಫೀರ್ ಕಳೆದ ಒಂದು ವರ್ಷದಿಂದ ಬಾಡಿಗೆಯನ್ನೇ ಕೊಡದೇ ಸತಾಯಿಸುತ್ತಿದ್ದನು. ಆಗ ಮನೆಯೊಡತಿ ಪಾರ್ವತಮ್ಮ ಗಟ್ಟಿ ಧ್ವನಿಯಲ್ಲಿ ಬಾಡಿಗೆ ಕೇಳಿದ್ದಾಳೆ.
1.15 ಲಕ್ಷ ರೂ. ಸಾಲವನ್ನೂ ಮಾಡಿದ್ದ: ಜೀವನಕ್ಕಾಗಿ ಕೃಷಿ ಕೆಲಸ ಹಾಗೂ ಮನೆಯೊಂದನ್ನು ಕಟ್ಟಿ ಬಾಡಿಗೆ ನೀಡಿದ್ದ ಪಾರ್ವತಮ್ಮ ಮತ್ತು ರಾಜೇಗೌಡ ಅವರ ಕುಟುಂಬ ನೆಮ್ಮದಿಯಾಗಿಯೇ ಜೀವನ ಮಾಡುತ್ತಿತ್ತು. ಆದರೆ, ಶಫೀರ್‌ಗೆ ಮನೆ ಬಾಡಿಗೆ ಕೊಟ್ಟ ಮೇಲೆ ಇವರ ನಸೀಬು ಕೆಟ್ಟಂತಾಗಿತ್ತು. ಮೊದಲು ಒಂದು ತಿಂಗಳು ಮುಗಿಯುತ್ತಿದ್ದಂತೆಯೇ ಬಾಡಿಗೆ ಕೊಟ್ಟು ವಿಶ್ವಾಸ ಗಳಿಸಿದ್ದ ಶಫೀರ್ ಮನೆ ಮಾಲೀಕ ರಾಜೇಗೌಡನಿಂದ 1,15,000 ರೂ. ಸಾಲ ಪಡೆದಿದ್ದನು. ಇನ್ನು ಸಾಲದ ಹಣ ಮತ್ತು ಮನೆ ಬಾಡಿಗೆಯನ್ನು ಕೇಳಿದರೂ ಕೊಡದೇ ಸತಾಯಿಸುತ್ತಿದ್ದನು. ಇನ್ನು ಬಾಡಿಗೆ ಕೇಳಿದ್ದಕ್ಕೆ ಬಾಡಿಗೆ ಮನೆಯನ್ನು ಬಿಟ್ಟು ಬೇರೊಂದು ಮನೆಯಲ್ಲಿ ವಾಸವಾಗಿದ್ದನು.
Hassan: ಮಿಕ್ಸಿ ಬ್ಲಾಸ್ಟ್‌ಗೆ ಬಿಗ್ ಟ್ವಿಸ್ಟ್: ಪ್ರೇಯಸಿ ಕೊಲ್ಲಲು ಸಂಚು ರೂಪಿಸಿದ್ದ ಪಾಗಲ್ ಪ್ರೇಮಿ
ಮನೆ ಬಾಡಿಗೆ ಕೊಡದಿದ್ದಕ್ಕೆ ಪೀಠೋಪಕರಣ ವಶ: ಇತ್ತ ಬಾಡಿಗೆ ಮನೆಗೂ ಬಾರದೇ ಕರೆಂಟ್ ಬಿಲ್, ನೀರಿನ ಬಿಲ್ ಗಳನ್ನೂ ಕಟ್ಟದೇ ಕಣ್ಮರೆಯಾಗಿದ್ದ ಶಫೀರ್ ಅನ್ನು ಹುಡುಕಿದ್ದ ಪಾರ್ವತಮ್ಮನಿಗೆ ಅವನು ಸಿಗಲೇ ಇಲ್ಲ. ಇದರಿಂದ ಕೋಪಗೊಂಡು ಪಾರ್ವತಮ್ಮ, ಶಫೀರ್ ಮನೆಯಲ್ಲಿದ್ದ ಪೀಠೋಪಕರಣಗಳು ಹಾಗೂ ಹಲವು ಸಾಮಗ್ರಿಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಸಿಟ್ಟಾದ ಶಫೀರ್, ಪ್ಲಾನ್ ಮಾಡಿ ತನ್ನ ಸ್ನೇಹಿತನೊಂದಿಗೆ ಬಂದು ಪಾರ್ವತಮ್ಮನನ್ನು ಮುಗಿಸಿದ್ದಾನೆ. ಪಾರ್ವತಮ್ಮ ಗಂಡ ಬೆಂಗಳೂರಿಗೆ ಹೋಗಿದ್ದ ಸಮಯವನ್ನು ಗೊತ್ತು ಪಡಿಸಿಕೊಂಡು ಬಂದು ಮರ್ಡರ್ ಮಾಡಿದ್ದಾರೆ.
ಕೊಲೆ ಮಾಡಿ ಕಳ್ಳತನವನ್ನೂ ಮಾಡಿದ್ದರು: ಬಾಡಿಗೆ ಮತ್ತು ಸಾಲದ ವಿಚಾರಕ್ಕಾಗಿಯೇ ಗಲಾಟೆ ಮಾಡಿದ್ದರಿಂದ ತಾವು ಕೊಲೆ ಮಾಡಿದ ಅನುಮಾನ ಬರಬಾರದು ಎಂಬ ಆಲೋಚನೆಯಿಂದ ಮನೆಯಲ್ಲಿದ್ದ ಪಾರ್ವತಮ್ಮಳನ್ನು ಕೊಲೆ ಮಾಡಿ, ಅವರ ಮನೆಯಲ್ಲಿದ್ದ ಹಣ ಮತ್ತು ಒಡವೆಗಳನ್ನು ಕಳ್ಳತನ ಮಾಡಿದ್ದರು. ತಮ್ಮ ಆರೋಪವನ್ನು ಕಳ್ಳರ ಮೇಲೆ ಹೊರಿಸಲು ಪ್ಲಾನ್ ಮಾಡಿದ್ದರು. ಆದರೆ, ಪೊಲೀಸರಿಗೆ ಕೊಲೆಯ ನಿಜ ಸ್ವರೂಪ ತಿಳಿಯುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಬಂಧಿತರಿಂದ 48 ಗ್ರಾಂ ತೂಕದ ವಿವಿಧ ಒಡೆವೆಗಳನ್ನು ವಶಕ್ಕೆ ಪಡೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ