ಅಂಗವಿಕಲೆ ಸೋಗಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಮಹಿಳೆ | ಆರೋಪಿಯಿಂದ 27 ಲಕ್ಷ ಮೌಲ್ಯದ 461 ಗ್ರಾಂ ಚಿನ್ನಾಭರಣ, 5.50 ಕೆ.ಜಿ. ಬೆಳ್ಳಿಯ ವಸ್ತು, ಕೃತ್ಯಕ್ಕೆ ಬಳಸುತ್ತಿದ್ದ ಕಾರು ಮತ್ತು ನಕಲಿ ಕೀಗಳ ಜಪ್ತಿ| ಹಗಲಿನಲ್ಲಿ ಕಾರಿನಲ್ಲಿ ಸುತ್ತಾಡಿ ಯಾರು ಇಲ್ಲದಿರುವ ಮನೆಗಳನ್ನು ಗುರುತಿಸುತ್ತಿದ್ದ ಮಹಿಳೆ|
ಬೆಂಗಳೂರು(ಡಿ.07): ಯಾರಿಗೂ ಅನುಮಾನಬಾರದೆಂಬ ಕಾರಣಕ್ಕೆ ಅಂಗವಿಕಲೆಯ ಸೋಗಿನಲ್ಲಿ ಮನೆಗಳವು ಮಾಡುತ್ತಿದ್ದ ಮಹಿಳೆಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟದ ಪಿಳ್ಳಗಾನಹಳ್ಳಿ ನಿವಾಸಿ ಮಂಜುಶ್ರೀ (45) ಬಂಧಿತೆ. ಆರೋಪಿಯಿಂದ 27 ಲಕ್ಷ ಮೌಲ್ಯದ 461 ಗ್ರಾಂ ಚಿನ್ನಾಭರಣ, 5.50 ಕೆ.ಜಿ. ಬೆಳ್ಳಿಯ ವಸ್ತು, ಕೃತ್ಯಕ್ಕೆ ಬಳಸುತ್ತಿದ್ದ ಕಾರು ಮತ್ತು ನಕಲಿ ಕೀಗಳ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಮಂಜುಶ್ರೀ ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ತನ್ನ ಕಾರನ್ನು ಕಾಲ್ ಸೆಂಟರ್‌ಗಳಿಗೆ ಬಾಡಿಗೆಗೆ ಬಿಟ್ಟಿದ್ದ. ಪತಿ ಕಾರಿನಲ್ಲಿ ಆರೋಪಿ ಕಾರು ಚಲಾಯಿಸುವುದನ್ನು ಕಲಿತಿದ್ದಳು. ಶಾಪಿಂಗ್‌ಗೆ ಹೋಗುವುದು, ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಶೋಕಿ ಹವ್ಯಾಸ ಬೆಳೆದಿತ್ತು. ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗಿದ್ದರಿಂದ ಮಂಜುಶ್ರೀಯನ್ನು ಪತಿ ತೊರೆದಿದ್ದ. ಬಳಿಕ ತನ್ನ ಇಬ್ಬರು ಮಕ್ಕಳನ್ನು ಮಹಿಳೆ ಅನಾಥ ಆಶ್ರಮದಲ್ಲಿ ಬಿಟ್ಟು, ಕೆ.ಆರ್.ಪುರ ಮಾರ್ಕೆಟ್‌ನಲ್ಲಿ ಹೂ ವ್ಯಾಪಾರ ಮಾಡುತ್ತಿದ್ದಳು. ಈ ಆದಾಯದಿಂದ ಐಷಾರಾಮಿ ಜೀವನ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳ್ಳತನದ ದಾರಿ ಹಿಡಿದಿದ್ದಳು.
ತನ್ನದೇ ಅಶ್ಲೀಲ ಪೋಟೋ; ಆತ ಕಳಿಸಿದ ಚಿತ್ರ ನೋಡಿ ದಿಗಿಲು ಬಿದ್ದಿದ್ದಳು!
ಹಗಲಿನಲ್ಲಿ ಕಾರಿನಲ್ಲಿ ಸುತ್ತಾಡಿ ಯಾರು ಇಲ್ಲದಿರುವ ಮನೆಗಳನ್ನು ಗುರುತಿಸುತ್ತಿದ್ದಳು. ರಾತ್ರಿ ವೇಳೆ ಅಂಗವಿಕಲೆ ಸೋಗಿನಲ್ಲಿ ಹೋಗಿ, ನಕಲಿ ಕೀಗಳನ್ನು ಬಳಸಿ ಮನೆ ಬಾಗಿಲು ತೆರೆದು ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗುತ್ತಿದ್ದಳು. ಇದರಿಂದ ಬಂದ ಹಣದಲ್ಲಿ ಹೋಟೆಲ್‌ಗಳಲ್ಲಿ ಜೀವನ ನಡೆಸುತ್ತಿದ್ದಳು.
ಇದೇ ಮೊದಲಲ್ಲ; ಜೈಲಿಗೂ ಹೋಗಿದ್ದಳು
ಸೆಪ್ಟೆಂಬರ್‌ನಲ್ಲಿ ಅಂಜನಾಪುರದ ತಿಬ್ಬೇಗೌಡ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಆರೋಪಿತೆಯು ಕಾರಿನಲ್ಲಿ ಬಂದು ಹೋಗಿರುವ ಗೊತ್ತಾಗಿತ್ತು. ಕಾರಿನ ನಂಬರ್ ಆಧರಿಸಿ ತನಿಖೆ ಮುಂದುವರಿಸಿದಾಗ ಸಿಕ್ಕಿ ಬಿದ್ದಿದ್ದಾಳೆ. ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಬಂಧಿತಳಾಗಿ ಜೈಲು ಪಾಲಾಗಿದ್ದಳು. ಜಾಮೀನಿನ ಮೇಲೆ ಹೊರಬಂದು ಹಳೇ ಚಾಳಿ ಮುಂದುವರಿಸಿದ್ದಳು. ಸುಳಿವು ಸಿಗದಿರಲು ರಾಮಮೂರ್ತಿನಗರದಿಂದ ಪಿಳ್ಳಗಾನಹಳ್ಳಿಗೆ ಬಂದು ನೆಲೆಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಬಂಧನದಿಂದಾಗಿ 13 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.