
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದರೆ, ಮಹಿಳೆಯರಿಗಿಂತಲೂ ಹೆಚ್ಚು ಪುರುಷರೇ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಿಯಕರನ ಜೊತೆಗೂಡಿ ಪತಿಯನ್ನೇ ಪತ್ನಿ ಮುಗಿಸಿರುವ ಘಟನೆಗಳು ಹೆಚ್ಚುತ್ತಲೇ ಇವೆ. ಇದೀಗ ಮಧ್ಯಪ್ರದೇಶದ ಇಂದೋರ್ನ ರಾಜಾ ಮತ್ತು ಸೋನಂ ರಘುವಂಶಿ ಹನಿಮೂನ್ ಕಥೆ ಕೇಳದ ಮೇಲಂತೂ ಯುವಕರು ಮದುವೆ ಎಂದರೆ ಅಕ್ಷರಶಃ ನಲುಗುವ ಸ್ಥಿತಿ ಉಂಟಾಗಿದೆ. ಮದುವೆಯೇ ಬೇಡ, ಹೀಗೆಯೇ ಇರುತ್ತೇವೆ ಎಂದು ಎಷ್ಟೋ ಯುವಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿರುವುದು ಇದೀಗ ಟ್ರೆಂಡ್ ಕೂಡ ಆಗಿದೆ. ಮದುವೆಯ ಸಮಯದಲ್ಲಿ ಇನ್ನೇನು ತಾಳಿ ಕಟ್ಟಬೇಕು, ಸಿಂದೂರ ಹಚ್ಚಬೇಕು ಎನ್ನುವಾಗಲೇ ನನಗೆ ಮದುವೆಯೇ ಬೇಡ ಎನ್ನುತ್ತಿರುವ ವಧುಗಳು ಒಂದೆಡೆಯಾದರೆ, ಇಷ್ಟವಿಲ್ಲದಿದ್ದರೂ ಖುಷಿಯಿಂದ ಇರುವಂತೆ ಪೋಸ್ ಕೊಟ್ಟು ಮದುವೆಯಾಗಿ ಕೊನೆಗೆ ಪತಿಯ ಜೀವವನ್ನೇ ತೆಗೆದುಕೊಳ್ಳುತ್ತಿರುವವರು ಮತ್ತೊಂದೆಡೆ.
ಇದೀಗ ಅದಕ್ಕೆ ಪೂರಕ ಎನ್ನುವಂತೆ ಇನ್ನೊಂದು ಘಟನೆ ನಡೆದಿದೆ. ವಕೀಲೆ ಎಂದು ಹೇಳಿಕೊಂಡಿರುವ ಯುವತಿಯೊಬ್ಬಳು ಯುವಕನನ್ನು ಹೇಗೆ ಮೋಸದ ಬಲೆಯಲ್ಲಿ ಸಿಲುಕಿಸಿದ್ದಾಳೆ ಎನ್ನುವ ಸ್ಟೋರಿ ಇದಾಗಿದೆ. ಉತ್ತರಾಖಂಡದಲ್ಲಿ ಹೈಕೋರ್ಟ್ ವಕೀಲೆಯಾಗಿ ನಟಿಸುತ್ತಿದ್ದ ಹಿನಾ ರಾವತ್ ಎಂಬ ಯುವತಿ ಪ್ರಕರಣ ಇದು. ಯುವಕನನೊಬ್ಬನನ್ನು ಪ್ರೇಮಜಾಲಕ್ಕೆ ಸಿಲುಕಿಸಿ, ಆತನನ್ನು ಮದುವೆ ಕೂಡ ಆಗಿ ಇದೀಗ, ಕೊಲೆ ಬೆದರಿಕೆ ಹಾಕಿ 30 ಲಕ್ಷ ರೂಪಾಯಿಗಳ ಭಾರಿ ಮೊತ್ತದ ಬೇಡಿಕೆ ಇಟ್ಟಿದ್ದಾಳೆ. ಆದರೆ ಯುವಕನ ಧೈರ್ಯದಿಂದಾಗಿ ಆತ ಬಚಾವಾಗಿದ್ದಾನೆ, ಈ ಖತರ್ನಾಕ್ ಲೇಡಿ ಅರೆಸ್ಟ್ ಆಗಿದ್ದಾಳೆ.
ವಸುಂಧರಾ ಭೂರಾರಾಣಿ ರಸ್ತೆಯ ನಿವಾಸಿ ದೀಪಕ್ ಕಕ್ಕಡ್ ಜೂನ್ 5 ರಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣಿಕಾಂತ್ ಮಿಶ್ರಾ ಅವರಿಗೆ ತಮ್ಮ ಪತ್ನಿಯ ವಿರುದ್ಧ ವಿವರವಾದ ದೂರು ದಾಖಲಿಸಿದ್ದಾರೆ. ಮೇ 2 ರಂದು ನೈನಿತಾಲ್ ಹೈಕೋರ್ಟ್‌ನಲ್ಲಿ ತಾನು ವಕೀಲೆ ಎಂದು ಪೋಸ್ ಕೊಟ್ಟಿರೋ ಅಂಕಿತಾ ಶರ್ಮಾ ಎಂದು ತನ್ನನ್ನು ತಾನು ಗುರುತಿಸಿಕೊಂಡಿದ್ದ ಯುವತಿ, ದೀಪಕ್ ಅವರಿಗೆ ವಾಟ್ಸ್ಆ್ಯಪ್ ಕರೆ ಮಾಡಿದ್ದಳು. ಕೊನೆಗೆ ಸಾರಿ, ನನ್ನ ಕಕ್ಷಿದಾರರಿಗೆ ಮಾಡಬೇಕಿದ್ದ ಕರೆ ನಿಮಗೆ ಮಾಡಿದೆ, ಇದು ಆಕಸ್ಮಿಕ ಕರೆ ಎಂದು ಹೇಳಿಕೊಂಡಳು. ನಂತರ ಆಕೆ, ವಾಟ್ಸ್ಆ್ಯಪ್ ಚಾಟ್‌ಗಳ ಮೂಲಕ ದೀಪಕ್ ಅವರನ್ನು ಸಿಹಿ ಸಿಹಿ ಮಾತುಗಳಿಂದ ಚಾಟ್ನಲ್ಲಿಯೇ ಮೋಡಿ ಮಾಡಿದಳು. ಈ ಮಾತುಕೆ ಕ್ರಮೇಣ ಪ್ರೇಮಕ್ಕೆ ತಿರುಗಿತು. ಪ್ರೇಮ ಕುರುಡು ಅಂತಾರಲ್ಲ, ಹಾಗೇ ಈ ಯುವಕನಿಗೂ ಆಗಿ ಹೋಯ್ತು. ಹೇಗಿದ್ದರೂ ವಕೀಲೆ ಅಲ್ವಾ? ಮೋಸಗಾತಿ ಎಂದು ನಂಬೋದಾದ್ರೂ ಹೇಗೆ? ಮುದ್ದು ಮುದ್ದು ಮಾತನಾಡಿ ಮಾತುಗಳಿಂದಲೇ ರಮಿಸಿ ಕೊನೆಗೆ ಮದುವೆಯವರೆಗೂ ಬಂದು ಬಿಟ್ಟಳು.
ಕುಳಿತಲ್ಲಿಯೇ ಸುಂದರ ವಕೀಲೆ ಸಿಕ್ಕ ಖುಷಿಗೆ ದೀಪಕ್ಗೆ ಸ್ವರ್ಗವೇ ಮೂರು ಗೇಣು ಎನ್ನುವಂತಾಗಿ ಮದುವೆಗೂ ಒಪ್ಪಿಕೊಂಡರು. ಮೊದಲಿಗೆ ಸ್ಟೀಲ್ ಗ್ರಿಲ್ಲಿಂಗ್ ಎನ್ನುವ ಯೋಜನೆಯ ಒಪ್ಪಂದವನ್ನು ಪಡೆಯುವ ನೆಪದಲ್ಲಿ ಆಕೆ ದೀಪಕ್ನಿಂದ 5 ಲಕ್ಷ ರೂಪಾಯಿ ಪಡೆದುಕೊಂಡಳು. ಆಗಲೂ ತಾವು ಹಳ್ಳಕ್ಕೆ ಬಿದ್ದಿರೋದು ಇವರಿಗೆ ತಿಳಿಯಲೇ ಇಲ್ಲ. ಐದು ಲಕ್ಷ ರೂಪಾಯಿ ಯಾವಾಗ ಸಿಕ್ಕಿತೋ ಮದುವೆಯನ್ನೂ ಮಾಡಿಕೊಂಡ ಖತರ್ನಾಕ್ ಲೇಡಿ, ಕೊನೆಗೆ ದೀಪಕ್ ಮೇಲೆ 30 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಲು ಪ್ರಾರಂಭಿಸಿದಳು. ಅಷ್ಟು ಹಣ ತನ್ನಲ್ಲಿ ಇಲ್ಲ ಎಂದು ದೀಪಕ್ ಹೇಳಿದಾಗ, ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದಾಗಲೇ ಗೊತ್ತಾಗಿದ್ದು ತಾವು ಹೋಗಿದ್ದು ಮೋಸ ಎನ್ನುವುದು! ಕೊನೆಗೆ ಬೇರೆ ದಾರಿ ಕಾಣದೇ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ.
ಪೊಲೀಸರ ಪ್ರಕಾರ, ಹಿನಾ ನಕಲಿ ಗುರುತುಗಳು ಮತ್ತು ಆಕರ್ಷಕ ಮುಖಚಿತ್ರಗಳ ಮೂಲಕ ಜನರನ್ನು ವಂಚಿಸುತ್ತಿದ್ದಾಳೆ. ವಧುವಿನಂತೆ ನಟಿಸಲು ಮತ್ತು ಸುಳ್ಳು ಅ*ತ್ಯಾಚಾರ ಪ್ರಕರಣಗಳಲ್ಲಿ ಜನರನ್ನು ಸಿಲುಕಿಸಲು ವೈವಾಹಿಕ ತಾಣಗಳನ್ನು ಬಳಸಿಕೊಳ್ಳುತ್ತಿರುವುದು ತಿಳಿದಿದೆ. ಪೊಲೀಸರು ಈಗ ದಂಧೆಗೆ ಸಂಬಂಧಿಸಿರಬಹುದಾದ ಇತರರನ್ನು ಪತ್ತೆಹಚ್ಚುತ್ತಿದ್ದಾರೆ ಮತ್ತು ಅಂತಹ ಅಪರಾಧಗಳನ್ನು ಭಯವಿಲ್ಲದೆ ವರದಿ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ, ಯಾವುದೇ ಮಹಿಳೆಯೊಂದಿಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಭಾಗಿಯಾಗುವ ಮೊದಲು, ಆಕೆಯ ಹಿನ್ನೆಲೆಯನ್ನು ಪರಿಶೀಲಿಸಿ ಮತ್ತು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಕೊಳ್ಳದಂತೆ ನಿಮ್ಮನ್ನು ಉಳಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳಿ ಎಂದು ಪೊಲೀಸರು ಸಲಹೆ ಇತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ