
ಬೆಂಗಳೂರು (ಜುಲೈ.10): ಪ್ರಭಾವಿ ರಾಜಕಾರಣಿಗಳ ಸ್ನೇಹದ ಸೋಗಿನಲ್ಲಿ ಜನರಿಗೆ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಸುಮಾರು 20 ಕೋಟಿ ರು. ವಂಚಿಸಿದ ಆರೋಪದಡಿ ಮಹಿಳೆ ಸೇರಿದಂತೆ ಇಬ್ಬರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೀರ್ಲೋಸ್ಕರ್ ಕಾಲೋನಿಯ ಗೃಹ ಲಕ್ಷ್ಮೀ ಲೇಔಟ್ ನಿವಾಸಿ ಸವಿತಾ ಹಾಗೂ ಸುಂಕದಕಟ್ಟೆಯ ಶ್ರೀನಿವಾಸ ನಗರದ ಪುನೀತ್ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಹಾಗೂ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ವಂಚನೆ ಜಾಲದಲ್ಲಿ ತಪ್ಪಿಸಿಕೊಂಡಿರುವ ಸಂಗೀತ ನಿರ್ದೇಶಕ ಸೇರಿದಂತೆ ಕೆಲ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬಸವೇಶ್ವರನಗರದ ಕುಸುಮಾ ಅವರಿಗೆ ಕಡಿಮೆ ಬೆಲೆಗೆ ಆಭರಣ ಹಾಗೂ ಖಾಸಗಿ ಮನರಂಜನಾ ವಾಹಿನಿಯಲ್ಲಿ ಟೆಂಡರ್ ಕೊಡಿಸುವುದಾಗಿ ನಂಬಿಸಿ 95 ಲಕ್ಷ ರು. ಪಡೆದು ಸವಿತಾ ಟೋಪಿ ಹಾಕಿದ್ದರು. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಟ್ಟಿ ಪಾರ್ಟಿಗಳಲ್ಲಿ ಗಾಳ:
ತನ್ನ ಕುಟುಂಬದ ಜತೆ ಕೀರ್ಲೋಸ್ಕರ್ ಕಾಲೋನಿಯಲ್ಲಿ ಸವಿತಾ ನೆಲೆಸಿದ್ದಳು. ತನ್ನನ್ನು ಪ್ರಭಾವಿ ಮಹಿಳೆ ಎನ್ನುವಂತೆ ಆಕೆ ಬಿಂಬಿಸಿಕೊಂಡಿದ್ದಳು. ಅಲ್ಲದೆ ತನಗೆ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗಣ್ಯರ ಪರಿಚಯವಿದೆ ಎಂದು ಸಹ ಆಕೆ ಹೇಳಿಕೊಂಡಿದ್ದಳು. ಇದೇ ಸೋಗಿನಲ್ಲಿ ಶ್ರೀಮಂತರ ಕುಟುಂಬಗಳ ಸ್ನೇಹವನ್ನು ಸವಿತಾ ಮಾಡಿದ್ದಳು. ತನ್ನ ನಾಜೂಕಿನ ಮಾತುಗಳ ಮೂಲಕ ಜನರನ್ನು ಮರಳು ಮಾಡಿ ವಂಚನೆ ಖೆಡ್ಡಾಕ್ಕೆ ಕೆಡುವುತ್ತಿದ್ದಳು. ಹಾಗೆಯೇ ಮನೆಯಲ್ಲಿ ಕಿಟ್ಟಿ ಪಾರ್ಟಿಗಳನ್ನು ಆಯೋಜಿಸಿ ಸಿರಿವಂತ ಕುಟುಂಬದ ಮಹಿಳೆಯರನ್ನು ಆಹ್ವಾನಿಸಿದ್ದಳು. ಆಗ ಕಡಿಮೆ ಬೆಲೆ ಚಿನ್ನ ಕೊಡಿಸುವುದಾಗಿ ಹೇಳಿ ಹಣ ಪಡೆದು ಆಕೆ ನಾಮ ಹಾಕುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಬಸವೇಶ್ವರನಗರದ ಕುಸುಮಾ ಅವರಿಗೆ ಖಾಸಗಿ ವಾಹಿನಿಯಲ್ಲಿ ಟೆಂಡರ್ ಹಾಗೂ ಕಡಿಮೆಗೆ ಬೆಲೆ ಬಂಗಾರ ಕೊಡಿಸುವ ನೆಪದಲ್ಲಿ 90 ಲಕ್ಷ ರು ಪಡೆದು ಸವಿತಾ ವಂಚಿಸಿದ್ದಳು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
20 ಕೋಟಿ ರು. ವಂಚನೆ:
ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಚಿನ್ನ ಕೊಡಿಸುವ ನೆಪದಲ್ಲಿ ಜನರಿಗೆ ಸುಮಾರು 20 ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಸವಿತಾ ವಂಚಿಸಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಈಕೆಯಿಂದ ಮೋಸಕ್ಕೊಳಗಾದವರು ದೂರು ನೀಡಿದರೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ಕೊಟ್ಟಿದ್ದರು. ಆಗ ಸವಿತಾಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಆದರೆ ಅಷ್ಟರಲ್ಲಿ ರಾಜಿ ಸಂಧಾನ ಮೂಲಕ ವಿವಾದ ಪರಿಹರಿಸಿಕೊಳ್ಳುವುದಾಗಿ ಹೇಳಿ ಸಂತ್ರಸ್ತ ಮಹಿಳೆ ದೂರು ಹಿಂಪಡೆದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸವಿತಾಳ ವ್ಯವಸ್ಥಿತ ವಂಚನೆ ಜಾಲ:
ತನ್ನ ವಂಚನೆಗೆ ವ್ಯವಸ್ಥಿತ ಸಂಘಟನೆಯನ್ನು ಸವಿತಾ ಕಟ್ಟಿದ್ದಳು. ಶ್ರೀಮಂತರ ಮಹಿಳೆಯರನ್ನು ಗಾಳ ಹಾಕಲು ಆಕೆಗೆ ಓರ್ವ ಚಲನಚಿತ್ರ ನಿರ್ದೇಶಕ ಸಹ ಸಾಥ್ ಕೊಟ್ಟಿದ್ದಾನೆ. ಇನ್ನು ಬಂಧಿತ ಆರೋಪಿ ಪುನೀತ್ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.
ಸಿಎಂ, ಡಿಸಿಎಂ ಜತೆ ಫೋಟೋಗಳು:
ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ಎಂದು ಬಿಂಬಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಸಂಸದರು ಹಾಗೂ ಶಾಸಕರ ಜತೆ ತೆಗೆಸಿಕೊಂಡಿದ್ದ ಪೋಟೋಗಳನ್ನು ಸವಿತಾ ತೋರಿಸುತ್ತಿದ್ದಳು. ಕೆಲ ಸಿನಿಮಾ ನಟ-ನಟಿಯರ ಜತೆ ಸಹ ಆಕೆಯ ಪೋಟೋಗಳಿವೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ