
ಕೋಲ್ಕತಾ(ಜ.13) ಪಾಲ್ಘಾರ್ ಸಾದುಗಳ ಮೇಲೆ ಏಕಾಏಕಿ ದಾಳಿ ಮಾಡಿ ಹತ್ಯೆಗೈದ ಘಟನೆ ನೋವನ್ನು ಸಾಧು ಸಂತರು ಮರೆತಿಲ್ಲ. ಇದೀಗ ಮತ್ತೆ ಮೂವರು ಸಾಧುಗಳ ಮೇಲೆ ಭೀಕರ ಹಲ್ಲೆ ನಡೆದಿದೆ. ಪಶ್ಚಿಮ ಬಂಗಾಳದ ಪುರುಲಿಯಾ ಬಳಿ ಈ ಭೀಕರ ಘಟನೆ ನಡೆದಿದೆ. ಗಂಗಾಸಾಗರಕ್ಕೆ ತೆರಳುತ್ತಿದ್ದ ಸಾಧುಗಳ ಮೇಲೆ ಸಾರ್ವಜನಿಕರು ಏಕಾಏಕಿ ದಾಳಿ ನಡೆಸಿದ್ದಾರೆ. ಇದರಿಂದ ಮೂವರು ಸಾಧುಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಇತ್ತ ಈ ಪ್ರಕರಣಕ್ಕೆ ಸಂಬಂಧ 12 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಹಿಂದೂ ಸಾಧು ಸಂತರ ಮೇಲಿನ ದಾಳಿಯನ್ನು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ. ಟಿಎಂಸಿ ಗೂಂಡಾಗಳ ಈ ಕೃತ್ಯಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮಸ್ತ ಹಿಂದೂಗಳ ಬಳಿ ಕ್ಷಮೆ ಕೇಳಬೇಕು ಎಂದು ವಿಶ್ವಹಿಂದೂ ಪರಿಷತ್ ಆಗ್ರಹಿಸಿದೆ.
ಮೂವರು ಸಾಧುಗಳ ಮೇಲೆ ಬೀಕರ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು 12 ಆರೋಪಿಗಳ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಹಲವು ಗೂಂಡಾ ವರ್ತನೆಗಳು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಬಿಜೆಪಿ ಕಾರ್ಯಕರ್ತರನ್ನು, ನಾಯಕರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದ ಗೂಂಡಾಗಳು ಇದೀಗ ಹಿಂದೂ ಸಾಧು ಸಂತರನ್ನೇ ಟಾರ್ಗೆಟ್ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಪಾಲ್ಘರ್ ಸಾಧುಗಳ ಬಡಿದು ಹತ್ಯೆ: ಕೇಂದ್ರ ಸರ್ಕಾರ ರಂಗ ಪ್ರವೇಶ!
ವಿಶ್ವಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಘಟನೆಯನ್ನುತೀವ್ರವಾಗಿ ಖಂಡಿಸಿದ್ದಾರೆ. ಹಿಂದೂ ಸಾಧು ಸಂತರ ಮೇಲೆ ಟಿಎಂಸಿ ಗೂಂಡಾಗಳು ದಾಳಿ ಮಾಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರದ ಕಾನೂನು ಸುವ್ಯವಸ್ಥೆ ಎಲ್ಲಿದೆ? ಹಿಂದೂ ಸಾಧುಗಳ ಮೇಲಿನ ಈ ಹಲ್ಲೆಯಿಂದ ತೀವ್ರ ನೋವಾಗಿದೆ. ಸಮಸ್ತ ಹಿಂದೂಗಳ ಮುಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆ ಕೋರಬೇಕು ಎಂದು ಸುರೇಂದ್ರ ಜೈನ್ ಆಗ್ರಹಿಸಿದ್ದಾರೆ.
ಗಂಗಾಸಾಗರ ಯಾತ್ರೆ ಕೈಗೊಂಡಿದ್ದ ಮೂವರು ಸಾಧುಗಳು ಪುರುಲಿಯಾ ಬಳಿ ಮಹಿಳೆಯರ ಗುಂಪಿನ ಬಳಿ ದಾರಿ ಕುರಿತು ಮಾಹಿತಿ ಕೇಳಿದ್ದಾರೆ. ಆದರೆ ಈ ಮಹಿಳೆಯರು ಸಾಧುಗಳನ್ನು ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಇತರರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಸಾರ್ವಜನಿಕರು ಸಾಧುಗಳನ್ನು ಕನಿಷ್ಠ ಪ್ರಶ್ನೆಯೂ ಮಾಡದೇ ಏಕಾಏಕಿ ದಾಳಿ ನಡೆಸಿದ್ದಾರೆ.
ಬರ್ಬರ ಹತ್ಯೆಯಾದ ಸಾಧುಗಳ ಪರ ವಾದಿಸುತ್ತಿದ್ದ ವಕೀಲ ನಿಗೂಢ ಸಾವು!
ತೀವ್ರವಾಗಿ ಗಾಯಗೊಂಡಿರುವ ಸಾಧುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಕೋರರ ವಿರುದ್ದ ದೂರು ನೀಡಲು ಸಾಧುಗಳು ನಿರಾಕರಿಸಿದ್ದಾರೆ. ಯಾವುದೇ ಕಾನೂನು ಹೋರಾಟಕ್ಕೆ ನಾವಿಲ್ಲ ಎಂದು ಸಾಧುಗಳು ಪುನರುಚ್ಚರಿಸಿದ್ದಾರೆ. ಇಷ್ಟೇ ಅಲ್ಲ ನಮ್ಮ ಯಾತ್ರೆಗೆ ಅನುವುಮಾಡಿಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ