
ಚಡಚಣ (ಸೆ.17): ಅಪರಿಚಿತ ಮುಸುಕುಧಾರಿ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಬ್ಯಾಂಕ್‌ಗೆ ನುಗ್ಗಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಸಿಬ್ಬಂದಿಗೆ ಬಂದೂಕು ತೋರಿಸಿ, ಕೈಕಾಲುಗಳನ್ನು ಕಟ್ಟಿಹಾಕಿ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಸಂಜೆ 6.30ರ ವೇಳೆ ಮಂಗಳವಾರ ನಡೆದಿದೆ.
ಮ್ಯಾನೇಜರ್ ಹಾಗೂ ಬ್ಯಾಂಕ್ ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ತೆರಳುವ ಸಮಯದಲ್ಲಿ ಏಕಾಏಕಿ ನುಗ್ಗಿದ ಅಪರಿಚಿತ ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ. ಈ ಗುಂಪಿನಲ್ಲಿ ಸುಮಾರು 10ಕ್ಕೂ ಹೆಚ್ಚು ಮುಸುಕುಧಾರಿಗಳಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್‌ನಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಆದರೆ, ಬ್ಯಾಂಕ್‌ನಲ್ಲಿ ಎಷ್ಟು ನಗದು ಮತ್ತು ಚಿನ್ನಾಭರಣವಿತ್ತು? ಎಷ್ಟು ತೆಗೆದುಕೊಂಡು ಹೋಗಿದ್ದಾರೆ ಎಂಬುದು ತನಿಖೆಯಿಂದಷ್ಟೇ ಖಚಿತವಾಗಬೇಕಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿದರು. ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಸುಕುಧಾರಿಗಳಿಗಾಗಿ ಶೋಧ ನಡೆಸಿದ್ದಾರೆ. ಬ್ಯಾಂಕ್‌ನಲ್ಲಿ ನಡೆದಿರುವ ಹಣ ಹಾಗೂ ಚಿನ್ನಾಭರಣದ ದರೋಡೆ ಕುರಿತು ಮೌಲ್ಯಮಾಪನ ಆಗಬೇಕಿದೆ. ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚನೆ ಮಾಡಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಇದೇ ವರ್ಷ ಮೇ 23ರಿಂದ 25ರ ಮಧ್ಯರಾತ್ರಿ ವಿಜಯಪುರ ಜಿಲ್ಲೆಯ ಮನಗೂಳಿಯ ಕೆನರಾ ಬ್ಯಾಂಕ್‌ನಲ್ಲಿಯೂ ಕೋಟ್ಯಂತರ ರು. ಮೌಲ್ಯದ ಬಂಗಾರ ಹಾಗೂ ನಗದು ದರೋಡೆ ನಡೆದಿತ್ತು. ಈ ಬೆನ್ನಲ್ಲೇ ಜಿಲ್ಲೆಯ ಚಡಚಣದಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ಆಗಿದ್ದು, ಬ್ಯಾಂಕ್‌ಗಳ ಭದ್ರತೆ ಕುರಿತು ಜನರಲ್ಲಿ ಆಂತಕ ವ್ಯಕ್ತವಾಗಿದೆ. 2025ರ ಮೇ 23ರಿಂದ 25ರ ನಡುರಾತ್ರಿ ಮನಗೂಳಿ ಗ್ರಾಮದಲ್ಲಿನ ಕೆನರಾ ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದ ಅಂದಾಜು ₹53.26 ಕೋಟಿ ಮೌಲ್ಯದ 58.97 ಕೆ.ಜಿ ಬಂಗಾರದ ಆಭರಣಗಳು ಹಾಗೂ ₹5,20,450 ನಗದು ದರೋಡೆ ಮಾಡಲಾಗಿತ್ತು. ಕಳ್ಳತನ ಮಾಡುವುದಕ್ಕೂ ಮೊದಲು ಬ್ಯಾಂಕ್ ಸುತ್ತಮುತ್ತ ಇದ್ದ ಸಿಸಿಟಿವಿ ಕ್ಯಾಮೆರಾಗಳ ಕೇಬಲ್ ಕತ್ತರಿಸಿ, ವಿದ್ಯುತ್ ದೀಪದ ಸಂಪರ್ಕ ಕಡಿತಗೊಳಿಸಿ, ಕಿಟಕಿಯ ಗ್ರಿಲ್ ಕಟ್ ಮಾಡಿ ಒಳಗೆ ನುಗ್ಗಿದ್ದ ದುರುಳರು ಲಾಕರ್ ಒಡೆಯದೇ, ಗ್ಯಾಸ್ ಕಟರ್ನಿಂದ ಕಟ್ ಕೂಡ ಮಾಡದೆ, ಕೈಚಳಕ ತೋರಿಸಿದ್ದರು.
ಈ ಕಳ್ಳತನ ಪ್ರಕರಣದ ಕಿಂಗ್ಪಿನ್, ಪ್ರಮುಖ ಆರೋಪಿ ಇದೇ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ವಿಜಯಕುಮಾರ ಮಿರಿಯಾಲ್ ಎಂಬುದು ತನಿಖೆಯಿಂದ ತಿಳಿದಿದ್ದು, ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಈತ ಡುಪ್ಲಿಕೇಟ್ ಕೀ ರೆಡಿ ಮಾಡಿಕೊಂಡಿದ್ದ. ಪ್ರಮುಖ ಮೂವರು ಆರೋಪಿಗಳ ಸೇರಿ ಒಟ್ಟು 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ 39 ಕೆಜಿ ಬಂಗಾರದ ಆಭರಣ ಹಾಗೂ ₹1.16 ಕೋಟಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ ಒಟ್ಟು ₹39.26 ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣದ ದಿಕ್ಕು ತಪ್ಪಿಸಲು ಪತ್ತೆದಾರಿ ಶ್ವಾನಗಳಿಗೂ ಗೊತ್ತಾಗಬಾರದೆಂದು ಆರೋಪಿಗಳು ಕಳ್ಳತನ ಮಾಡಿದ ಜಾಗದಲ್ಲಿ ಖಾರದ ಪುಡಿ ಎರಚಿ, ತನಿಖೆಯ ದಿಕ್ಕು ತಪ್ಪಿಸಲು ವಾಮಾಚಾರದ ಮಾಡಿದ ರೀತಿಯಲ್ಲಿ ವಸ್ತುಗಳನ್ನು ಇಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ