ರಾಜ್ಯದ ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸವರಾಜ್ ದದ್ದಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಶುಕ್ರವಾರ ನೋಟಿಸ್ ನೀಡಿದೆ.
ಬೆಂಗಳೂರು (ಜು.06): ರಾಜ್ಯದ ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸವರಾಜ್ ದದ್ದಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಶುಕ್ರವಾರ ನೋಟಿಸ್ ನೀಡಿದೆ. ಜು.9ರ ಮಂಗಳವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರೊಂದಿಗೆ ವಾಲ್ಮೀಕಿ ನಿಗಮದ ಹಗರಣವು ಮತ್ತೊಂದು ಹಂತಕ್ಕೆ ತಲುಪಿದೆ.
ರಾಜ್ಯ ಸರ್ಕಾರದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಹೈದರಾಬಾದ್‌ನ ಸಹಕಾರಿ ಬ್ಯಾಂಕ್‌ಗೆ ಅಕ್ರಮವಾಗಿ 94.32 ಕೋಟಿ ರು. ವರ್ಗಾವಣೆಯಾಗಿತ್ತು. ಈ ಹಣ ಅಕ್ರಮ ವರ್ಗಾವಣೆ ಕೃತ್ಯ ನಡೆದಾಗ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮಂತ್ರಿಯಾಗಿದ್ದರು. ಈ ಹಗರಣ ಬೆಳಕಿಗೆ ಬಂದ ಬಳಿಕ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದು, ಈಗ ಎಸ್‌ಐಟಿ ತನಿಖೆ ಎದುರಿಸಬೇಕಾಗಿದೆ. ಅಲ್ಲದೆ ಇದೇ ಪ್ರಕರಣದಲ್ಲಿ ಅವರ ಸಂಬಂಧಿ ಬಳ್ಳಾರಿ ಜಿಲ್ಲೆಯ ನೆಕ್ಕುಂಟಿ ನಾಗರಾಜ್ ಹಾಗೂ ನಾಗೇಶ್ವರ್ ಅವರನ್ನು ಎಸ್‌ಐಟಿ ಬಂಧಿಸಿದೆ. ಈ ಇಬ್ಬರ ಹೇಳಿಕೆ ಆಧರಿಸಿ ಮಾಜಿ ಸಚಿವರಿಗೆ ಸಂಕಷ್ಟ ಎದುರಾಗಿದೆ.
ರಾಜ್ಯದಲ್ಲಿ ಈಗ ಪ್ರವಾಹ ಆತಂಕ: ಕರಾವಳಿ, ಮಲೆನಾಡು, ಮಹಾರಾಷ್ಟ್ರದಲ್ಲಿ ಭಾರಿ ಮಳೆ
ನಿಗಮದ ಅಧ್ಯಕ್ಷನಿಗೆ ಸಂಕಷ್ಟ: ಪ್ರಸ್ತುತ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ದದ್ದಲ್ ಅವರಿಗೆ ಎಸ್‌ಐಟಿ ಕರೆ ಬಂದಿದೆ. ಇದೇ ವರ್ಷದ ಜನವರಿಯಲ್ಲಿ ನಿಗಮದ ಅಧ್ಯಕ್ಷರಾಗಿ ದದ್ದಲ್ ನೇಮಕಗೊಂಡಿದ್ದರು. ಅದೇ ರೀತಿ ಮೇ ತಿಂಗಳಲ್ಲಿ ವಿವಿಧ ಹಂತದಲ್ಲಿ ಹೈದರಾಬಾದ್‌ನ ಸಹಕಾರಿ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ ನಿಗಮದ ಖಾತೆಯಿಂದ 94 ಕೋಟಿ ರು. ವರ್ಗಾವಣೆಯಾಗಿತ್ತು. ತಾವು ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆ ಬಗ್ಗೆ ಮಾಹಿತಿ ಇತ್ತೇ ಇಲ್ಲವೇ ಎಂಬುದರ ಕುರಿತು ದದ್ದಲ್ ಅವರಿಂದ ವಿವರಣೆ ಪಡೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.