ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.
ಉಡುಪಿ (ಮಾ.21): ಇಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕರೆದುರು ಅಮಾನುಷವಾಗಿ ಥಳಿಸಿದ ಘಟನೆ ಮಂಗಳವಾರ ನಡೆದಿದೆ. ಘಟನೆ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಲ್ಲೆಗೊಳಗಾದ ಮಹಿಳೆ ಮಲ್ಪೆ ಠಾಣೆಗೆ ದೂರು ನೀಡಿದ್ದು, ಹಲ್ಲೆ ನಡೆಸಿದ ಲಕ್ಷ್ಮೀಬಾಯಿ, ಶಿಲ್ಪಾ, ಸುಂದರ್‌ನನ್ನು ಬಂಧಿಸಲಾಗಿದೆ. ವಿಜಯನಗರ ಜಿಲ್ಲೆಯ ಈ ದಲಿತ ಮಹಿಳೆ 5 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನು ಬುಟ್ಟಿ ಹೊರುವ ಕೂಲಿ ಕೆಲಸ ಮಾಡುತಿದ್ದರು. ಬೋಟೊಂದರಿಂದ ಮೀನು ಖಾಲಿ ಮಾಡಿ, ತಲೆ ಮೇಲೆ ಬುಟ್ಟಿ ಹೊತ್ತು ಮನೆಗೆ ಹೋಗುತ್ತಿದ್ದರು. ಆಗ ಆಕೆಯ ಬುಟ್ಟಿಯಲ್ಲಿ ಚಟ್ಲಿ (ಸಿಗಡಿ) ಮೀನು ಇದ್ದು, ಅದನ್ನು ಆಕೆ ಕದ್ದುಕೊಂಡು ಹೋಗುತ್ತಿದ್ದರು ಎಂದು ಆರೋಪಿಸಿ ಲಕ್ಷ್ಮೀ, ಶಿಲ್ಪಾ ಮತ್ತು ಬೋಟಿನ ಕಾರ್ಮಿಕರಾದ ಸುಂದರ, ಚಂದ್ರ ಮತ್ತು ಇತರರ ಸೇರಿ ಆಕೆಯನ್ನು ಎಳೆದಾಡಿ, ಅವಾಚ್ಯವಾಗಿ ನಿಂದಿಸಿದ್ದಾರೆ. ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ, ಕೆನ್ನೆಗೆ ಹೊಡೆದಿದ್ದಾರೆ.
ಇದನ್ನೂ ಓದಿ: ನಂಜನಗೂಡು: ₹14000ಕ್ಕೆ 2 ವರ್ಷ ಹೆಣ್ಣು ಮಗು ಮಾರಿದ ತಂದೆ, ತಾಯಿ ಬಂಧನ
ಈ ಹಲ್ಲೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ವಿಡಿಯೋದ ಆಧಾರದಲ್ಲಿ 3 ಮಂದಿಯನ್ನು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಲಾಗಿದೆ. ಇನ್ನೊಬ್ಬ ಶಂಕಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.