ನಂಜನಗೂಡಿನಲ್ಲಿ ಎರಡು ವರ್ಷದ ಹೆಣ್ಣು ಮಗುವನ್ನು ಪೋಷಕರು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ತಂದೆ, ತಾಯಿ ಮತ್ತು ಮಧ್ಯವರ್ತಿಯನ್ನು ಬಂಧಿಸಲಾಗಿದೆ. ಮಗು ಖರೀದಿಸಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ನಂಜನಗೂಡು (ಮಾ.21): ಎರಡು ವರ್ಷದ ಹೆಣ್ಣು ಮಗುವೊಂದನ್ನು ಹೆತ್ತವರೇ ₹14000ಕ್ಕೆ ಮಾರಾಟ ಮಾಡಿರುವ ಪ್ರಕರಣ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮಗುವಿನ ತಂದೆ, ತಾಯಿ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ.
ಪಟ್ಟಣದ ನೀಲಕಂಠ ನಗರ ಬಡಾವಣೆಯ ಅನಿಲ್ ಕುಮಾರ್ ಹಾಗೂ ಸೌಮ್ಯ ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದು, ಹುಟ್ಟಿದ ಮೂರನೇ ಮಗುವೂ ಹೆಣ್ಣಾಗಿತ್ತು. ಈ ಮಧ್ಯೆ, ಅದೇ ಬಡಾವಣೆಯ ನಿವಾಸಿ ಲಕ್ಕಮ್ಮ ಎಂಬುವರು ಹಣದ ಆಸೆ ತೋರಿಸಿ, ಪೋಷಕರನ್ನು ಪುಸಲಾಯಿಸಿ, ಗುಂಡ್ಲುಪೇಟೆ ಮೂಲದ ವ್ಯಕ್ತಿಯೊಬ್ಬರಿಗೆ ಮಾ.13ರಂದು ಮಗುವನ್ನು ಮಾರಾಟ ಮಾಡಿಸಿದ್ದರು.
ಇದನ್ನೂ ಓದಿ: ನಿಮ್ಮ ಮಗಳ ಭಾಗ್ಯಲಕ್ಷ್ಮಿ ಬಾಂಡ್‌ನ ಹಣ ಬಂದಿದೆ; ಅಂಗನವಾಡಿಗೆ ಹೋಗಿ ವಿಚಾರಿಸಿ!
ಈ ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಜಿಲ್ಲಾ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಮಗು ಖರೀದಿಸಿದವರನ್ನು ಸಂಪರ್ಕಿಸಿದಾಗ, ಮಾರಾಟದ ವಿಷಯ ಖಚಿತವಾಯಿತು. ಅಧಿಕಾರಿಗಳ ಎಚ್ಚರಿಕೆ ಬಳಿಕ, ಮಾ.17ರಂದು ಮಗುವನ್ನು ಅವರು ವಾಪಸ್ ನೀಡಿದರು. ಬಳಿಕ, ಅಧಿಕಾರಿಗಳು ಮಗುವನ್ನು ತಾತ್ಕಾಲಿಕ ಆಶ್ರಯಕ್ಕಾಗಿ ಛಾಯಾದೇವಿ ದತ್ತು ಕೇಂದ್ರಕ್ಕೆ ದಾಖಲಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಅಪೇಕ್ಷಿತ ಎಂಬುವರು ನೀಡಿದ ದೂರಿನ ಮೇರೆಗೆ ಮಗುವಿನ ತಂದೆ, ತಾಯಿ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ. ಮಗು ಖರೀದಿಸಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.